
ಮುಂಡರಗಿ: ಇತ್ತೀಚಿನ ವರ್ಷಗಳಲ್ಲಿ ಕಪ್ಪತಗುಡ್ಡವು ರಾಜ್ಯದ ಅತ್ಯಾಕರ್ಷಕ ಪ್ರವಾಸಿ ತಾಣವಾಗುತ್ತಿದ್ದು, ನಾವೆಲ್ಲ ಅದನ್ನು ತುಂಬಾ ಮುತುವರ್ಜಿಯಿಂದ ಸಂರಕ್ಷಿಸಬೇಕಿದೆ. ಹಾಗಾದಾಗ ಮಾತ್ರ ಕಪ್ಪತಗುಡ್ಡವು ಮುಂದೊಂದು ದಿನ ಉತ್ತರ ಕರ್ನಾಟಕದ ಮಕುಟಮಣಿಯಾಗಲಿದೆ ಎಂದು ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ ತಿಳಿಸಿದರು.
ಕಪ್ಪತ ವಲಯ ಅರಣ್ಯ ಇಲಾಖೆಯು ಭಾನುವಾರ ತಾಲ್ಲೂಕಿನ ಡೋಣಿ ಗ್ರಾಮದ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ವಾಲಿಬಾಲ್ ಪಂದ್ಯಾವಳಿ ಹಾಗೂ ಕಾಡ್ಗಿಚ್ಚು ತಡೆ ಜನ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ಅರಣ್ಯ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅರಣ್ಯವಿಲ್ಲದೆ ನಾವು ಬದುಕಲಾರೆವು. ವನ್ಯಜೀವಿ ಸಂರಕ್ಷಣೆಯ ಜೊತೆಗೆ ಅರಣ್ಯ ಇಲಾಖೆಯು ಅನಾವರಣಗೊಳಿಸಿರುವ ನೀರಿಗಾಗಿ ಅರಣ್ಯ ಎನ್ನುವ ಸಂದೇಶವನ್ನೊಳಗೊಂಡ ಲಾಂಛನವು ಆಕರ್ಷಣೀಯವಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ತಾಲ್ಲೂಕು ಆರ್.ಎಫ್.ಒ. ಮಂಜುನಾಥ ಮೇಗಲಮನಿ ಮಾತನಾಡಿ, ಕಪ್ಪತಗುಡ್ಡವು 400ಕ್ಕೂ ಹೆಚ್ಚು ಔಷಧೀಯ ಸಸ್ಯ ಸಂಪತ್ತು, 23ಕ್ಕೂ ಹೆಚ್ಚು ವನ್ಯ ಜೀವಿ ಸಂಪತ್ತು ಹಾಗೂ ಅಪರೂಪದ ಖನಿಜ ಸಂಪತ್ತನ್ನು ಒಳಗೊಂಡಿದೆ. ಮೌಢ್ಯ, ಕಂದಾಚಾರಗಳಿಗೆ ಒಳಗಾಗಿ ಯಾರೂ ಅರಣ್ಯಕ್ಕೆ ಬೆಂಕಿ ಹಚ್ಚಬಾರದು ಎಂದು ಮನವಿ ಮಾಡಿಕೊಂಡರು.
ಕಪ್ಪತ್ತಗುಡ್ಡ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಭರಮಪ್ಪ ಕಿಲಾರಿ ಮಾತನಾಡಿ, ಒಂದು ಗಿಡ ತನ್ನ ಜೀವಿತಾವಧಿಯಲ್ಲಿ ನಮಗೆಲ್ಲ ₹ 12 ಲಕ್ಷ ಮೌಲ್ಯದ ಸೇವೆ ನೀಡುತ್ತದೆ. ಮರಗಳಿಲ್ಲದಿದ್ದರೆ ನಾವೆಲ್ಲ ಶುದ್ಧ ಗಾಳಿ ಇಲ್ಲದೆ ಪರದಾಡಬೇಕಾಗುತ್ತದೆ. ಆದ್ದರಿಂದ ನಾವೆಲ್ಲ ಅರಣ್ಯವನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ಅಧ್ಯಕ್ಣ ಶಂಕರಗೌಡ ಜಾಯನಗೌಡರ, ಎಸ್.ಸಿ. ಘಟಕದ ಅಧ್ಯಕ್ಷ ಸೋಮಣ್ಣ ಹೈತಾಪುರ ಮಾತನಾಡಿದರು.
ತಾಲ್ಲೂಕಿನ ಡಂಬಳ ಹೋಬಳಿಯ ವಿವಿಧ ಗ್ರಾಮಗಳ 485 ಕುರಿಗಾರರಿಗೆ ಹೊಟ್ಟೆಚೀಲ, ಬ್ಯಾಟರಿ, ಸ್ಟೀಲ್ ನೀರಿನ ಬಾಟಲ್ ವಿತರಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳಿಗೆ ಕಪ್ಪತ್ತಗುಡ್ಡದಿಂದ ಆಗುವ ಪರಿಸರದ ಲಾಭಗಳ ಕುರಿತ ಮಾಹಿತಿ ಬೋರ್ಡ್ ವಿತರಿಸಲಾಯಿತು. 25ಕ್ಕು ಹೆಚ್ಚು ವಾಲಿಬಾಲ್ ತಂಡಗಳಿಗೆ ಟೀ ಶರ್ಟ್ ವಿತರಿಸಲಾಯಿತು.
ನಿಂಗಪ್ಪ ಗುಡ್ಡದ ಜಾಗೃತಿ ಗೀತೆಗಳನ್ನು ಹಾಡಿದರು. ಸಿದ್ದು ಸತ್ಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರಣ್ಯಾಧಿಕಾರಿ ಮೈಲಾರಪ್ಪ ಮಡಿವಾಳರ ವಂದಿಸಿದರು. ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಅಳವುಂಡಿ, ಕುಮಾರಸ್ವಾಮಿ ಮಠದ, ರಾಮಣ್ಣ ಮೇಗಲಮನಿ, ಲಕ್ಷ್ಮಿ ಸೊಗಟಿ, ಕಾಶಪ್ಪ ಅಳವಂಡಿ, ರಮೇಶ ಪವಾರ, ಗವಿಸಿದ್ಧಯ್ಯ ಹಳ್ಳಿಕೇರಿಮಠ, ನಿಂಗನಗೌಡ ಹರ್ತಿ, ಹನಮಪ್ಪ ಗೋಡಿ, ಕಾಶಪ್ಪ ಹೊನ್ನೂರ, ಸಿದ್ಧನಗೌಡ ಪಾಟೀಲ, ಸತ್ಯಪ್ಪ ಚಲವಾದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.