ADVERTISEMENT

ನಾಡದೇವತೆ ಚಿತ್ರ: ಅಭಿಪ್ರಾಯ ಸಂಗ್ರಹಿಸಿ ಅಧಿಕೃತಗೊಳಿಸಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:10 IST
Last Updated 23 ನವೆಂಬರ್ 2022, 13:10 IST
   

ಗದಗ: ‘ನಾಡದೇವತೆ ಚಿತ್ರವನ್ನು ಅಧಿಕೃತಗೊಳಿಸಲು ಸರ್ಕಾರಐದು ಮಂದಿ ಕಲಾವಿದರ ಸಮಿತಿ ರಚಿಸಿರುವ ವಿಷಯ ಕೇಳಿ ಅಚ್ಚರಿಯಾಯಿತು. ಕನ್ನಡವನ್ನು ಪ್ರೀತಿಸುವವರು ಹಾಗೂ ಕರ್ನಾಟಕ ಏಕೀಕರಣದ ಇತಿಹಾಸ ಗೊತ್ತಿರುವವರೆಲ್ಲರಿಗೂ ಇದು ಆಘಾತಕಾರಿ ವಿಷಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಏಕೀಕರಣಕ್ಕೂ ಮುನ್ನವೇ ರಚನೆಯಾದ ಸಿ.ಎನ್‌.ಪಾಟೀಲ ಅವರ ತೈಲವರ್ಣದ ಭುವನೇಶ್ವರಿ ಚಿತ್ರ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಕನ್ನಡಿಗರೆಲ್ಲರೂ ಒಂದಾಗಬೇಕು. ಒಂದು ನಕ್ಷೆಯ ವ್ಯಾಪ್ತಿಗೆ ಬರಬೇಕು ಎಂಬ ಹೋರಾಟ ಸ್ವಾತಂತ್ರ್ಯ ಚಳವಳಿಯ ಜತೆಜತೆಗೆ ಬಂತು. ಈ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ಹೋರಾಟಗಳಾದವು. ಆ ಹೋರಾಟಕ್ಕೆ ಪ್ರಾತಿನಿಧಿಕ ಶಕ್ತಿಯ ರೂಪದಲ್ಲಿ ಕನ್ನಡ ಮಾತೆ ಇರಬೇಕು. ಹೋರಾಟಕ್ಕೆ ಚೈತನ್ಯ ತುಂಬಬೇಕು ಎಂಬ ಪರಿಕಲ್ಪನೆಯನ್ನು ಅಂದಾನಪ್ಪ ದೊಡ್ಡಮೇಟಿ ಹೊಂದಿದ್ದರು. ಅವರ ಪರಿಕಲ್ಪನೆಯನ್ನು ಸಿ.ಎನ್‌.ಪಾಟೀಲರು ಚಿತ್ರರೂಪಕ್ಕೆ ಇಳಿಸಿದರು’ ಎಂದು ಹೇಳಿದರು.

‘1953ರಲ್ಲಿ ಜಕ್ಕಲಿ ಗ್ರಾಮದಲ್ಲಿರುವ ಅನ್ನದಾನೇಶ್ವರ ಮಠದಲ್ಲಿ ನಡೆಯುತ್ತಿದ್ದ ಏಕೀಕರಣ ಚಳವಳಿಗಾರರ ಶಿಬಿರದಲ್ಲಿ ಈ ಚಿತ್ರವನ್ನು ಪ್ರಥಮವಾಗಿ ಪೂಜಿಸಲಾಯಿತು. ಇದು ಕರ್ನಾಟಕದ ಸಮಗ್ರತೆಯನ್ನು ಬಿಂಬಿಸುವಂತಹ ಚಿತ್ರ. ಇದು ಸಮಗ್ರ ಕನ್ನಡಿಗರ ಚಿತ್ರವಾಗಿರುವುದರಿಂದ ಸರ್ಕಾರ ಇದನ್ನೇ ಅಧಿಕೃತಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಚಿತ್ರದ ಚಾರಿತ್ರಿಕ ಹಿನ್ನಲೆ ಅಧ್ಯಯನ ಮಾಡಿ, ತಜ್ಞರ ಸಮಿತಿ ನೇಮಿಸಿ, ವರದಿ ತರಿಸಿಕೊಂಡು ಅಧಿಕೃತ ಎಂದು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

ದೊಡ್ಡಮೇಟಿ ಅವರ ಮೊಮ್ಮಗ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಎಲ್ಲ ಕನ್ನಡಿಗರ ಭಾವದಲ್ಲಿ ಪ್ರತಿಷ್ಠಾಪನೆಗೊಂಡು ಚಿರಸ್ಥಾಯಿಯಾಗಿರುವ ತೈಲವರ್ಣದ ಚಿತ್ರವನ್ನು ಅಧಿಕೃತ ಚಿತ್ರವನ್ನಾಗಿಸಿದರೆ ಮಾತ್ರ ಹೋರಾಟಗಾರರಿಗೆ ನ್ಯಾಯ ದೊರಕಿಸಿದಂತಾಗುತ್ತದೆ ಎಂದು ಹೇಳಿದರು.

‘ಜಕ್ಕಲಿಯಲ್ಲಿರುವ ಭುವನೇಶ್ವರಿ ಚಿತ್ರ ಕನ್ನಡಿಗರ ಆಸ್ತಿ. ಅದನ್ನೇ ಅಧಿಕೃತಗೊಳಿಸುವಂತೆ ಎಲ್ಲ ಕನ್ನಡಿಗರು ಸರ್ಕಾರವನ್ನು ಒತ್ತಾಯಿಸಬೇಕು. ಈಗಿನ ಸಿಎಂ ಬೊಮ್ಮಾಯಿ ಅವರು ನಮ್ಮ ಮನೆಗೆ ಬಂದಾಗ ಪ್ರತಿಸಲವೂ ಈ ಚಿತ್ರವನ್ನು ನೋಡಿ, ಗೌರವಿಸಿ ಪೂಜೆ ಸಲ್ಲಿಸಿ ಹೋಗಿದ್ದಾರೆ. ಭುವನೇಶ್ವರಿ ಚಿತ್ರದ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಆಸೆಯಂತೆ ಈ ಚಿತ್ರವನ್ನೇ ಅಧಿಕೃತಗೊಳಿಸಬೇಕು’ ಎಂದು ಒತ್ತಾಯಿಸಿದರು.

ಸಾಹಿತಿ ಚಂದ್ರಶೇಖರ ವಸ್ತ್ರದ ಮಾತನಾಡಿ, ಕನ್ನಡ ತಾಯಿ ಭುವನೇಶ್ವರಿ ಭವ್ಯ ಮೂರ್ತಿ ಭೌತಿಕವಾಗಿ ನೆಲೆಗೊಂಡಿದ್ದು ಹಂಪಿಯಲ್ಲಾದರೆ, ಕರ್ನಾಟಕದ ಸಮಸ್ತ ಜನರ ಭಾವ ಸಿಂಹಾಸನ ಆಳುತ್ತಿರುವುದು ಈ ಭಾವಚಿತ್ರ. ಸರ್ಕಾರ ಇದನ್ನೇ ಅಧಿಕೃತಗೊಳಿಸಬೇಕು. ಚಿತ್ರವೆಂದರೆ ಕೇವಲ ಚಿತ್ರವಷ್ಟೇ ಅಲ್ಲ. ಅದರ ಹಿಂದೆ ಧರ್ಮ, ಸಂಸ್ಕೃತಿ, ಸಾಹಿತ್ಯ, ಪರಿಸರ ಎಲ್ಲವೂ ಅಡಕವಾಗಿರುತ್ತದೆ’ ಎಂದರು.

ಯಾವ ವಿಚಾರವಾದರೂ ಅನುಷ್ಠಾನಕ್ಕೆ ಮುನ್ನ ಸಾರ್ವಜನಿಕ ಚರ್ಚೆಗೆ ಇಡಬೇಕು. ಸಮಿತಿ ಮಾಡಿದ್ದು ಸ್ವಾಗತಾರ್ಹ. ಆದರೆ, ಚರ್ಚೆಗೆ ಇಡದಿರುವುದು ಸರಿಯಲ್ಲ. ಇದಕ್ಕೆ ಗದುಗಿನ ಎಲ್ಲ ಸಾಹಿತಿಗಳು, ಸಂಸ್ಕೃತಿ ಚಿಂತಕರು, ಕಲಾವಿದರ ವಿರೋಧ ಇದೆ ಎಂದರು.

ಕಲಾವಿದ ಅನ್ನದಾನಿ ಹಿರೇಮಠ ಮಾತನಾಡಿ, ಸಿ ಎನ್‌ ಪಾಟೀಲರು ರಚಿಸುವುದು ಕಾಲ್ಪನಿಕ ಚಿತ್ರ ಅಲ್ಲ; ಪರಂಪರೆಯ ತಳಹದಿಯಲ್ಲಿ ರಚಿತವಾದ ಪಾರಂಪರಿಕ ಚಿತ್ರ. ಆರಡಿ ಎತ್ತರದ ಈ ಚಿತ್ರವನ್ನು ಸರ್ಕಾರ ಅಧಿಕೃತಗೊಳಿಸಬೇಕು ಎಂದು ಒತ್ತಾಯಿಸಿದರು.

ಡಾ. ಜಿ.ಬಿ.ಪಾಟೀಲ ಮಾತನಾಡಿ, ನಾಡಿನ ಅಸ್ಮಿತೆಯ ಸಂಕೇತಗಳನ್ನು ಪ್ರಮಾಣೀಕರಿಸಬೇಕು ಎಂಬ ಸರ್ಕಾರದ ನಡೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಅದು ಸಾರ್ವತ್ರಿಕವಾಗಿ ಬಂದಾಗ ಹೆಚ್ಚು ಅರ್ಥಪೂರ್ಣವೆನಿಸುತ್ತದೆ ಎಂದರು.

ನಾಡದೇವತೆ ಚಿತ್ರ ಅಧಿಕೃತಗೊಳಿಸುವ ವಿಷಯ ಹೋರಾಟದ ಸ್ವರೂಪಕ್ಕೆ ಹೋಗಬಾರದು. ಸಾರ್ವಜನಿಕರು, ತಜ್ಞರೊಂದಿಗೆ ಚರ್ಚೆ ನಡೆಸಿ, ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿ ನಿರ್ಣಯ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕಲಾವಿದ ಸಿ.ಎನ್‌.ಪಾಟೀಲ ಅವರ ಪುತ್ರಿ ಲಲಿತಾ ಪಾಟೀಲ ಮಾತನಾಡಿದರು. ಶಿವಾನಂದ ಗಿಡ್ನಂದಿ, ಚಂದ್ರು ಚವ್ಹಾಣ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.