ಗದಗ: ‘ಭಾರತೀಯ ಯೋಧರು ವೀರರು, ಧೀರರು. ಮಳೆ, ಗಾಳಿ, ಬಿಸಿಲು, ಚಳಿ ಎನ್ನದೇ ದೇಶ ರಕ್ಷಣೆಯ ಕಾಯಕದಲ್ಲಿ ನಿರತರಾಗಿದ್ದು, ಅವರ ಸೇವೆ ಸ್ಮರಣೀಯ’ ಎಂದು ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಸಂಚಾಲಕ ಸುಧೀರ್‌ಸಿಂಹ ಘೋರ್ಪಡೆ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಹಾಗೂ ವೀರನಾರಿಯರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ 26ನೇ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದರು.
‘ಭಾರತೀಯ ಸೈನಿಕರು ತ್ಯಾಗ ದೊಡ್ಡದಿದ್ದು, ಅವರೆಲ್ಲರಿಗೂ ನಾವು ಬೆಂಬಲ. ಧೈರ್ಯ ನೀಡಬೇಕಿದೆ’ ಎಂದರು.
ಕಾರ್ಗಿಲ್ ಯುದ್ದದಲ್ಲಿ ವೀರಮರಣ ಹೊಂದಿದ ಯೋಧರಿಗೆ ನಮನ ಸಲ್ಲಿಸಿದರು.
ಹಾಲಿ ಮತ್ತು ಮಾಜಿ ಪ್ಯಾರಾ ಮಿಲಿಟರಿ ಯೋಧರ ಸಂಘದ ಅಧ್ಯಕ್ಷ ನಾಗರಾಜ ಕುಂದರಗಿ ಮಾತನಾಡಿ, ‘ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶ ರಕ್ಷಣೆ, ಗಡಿ ಕಾಯುವ ಕಾಯಕದಲ್ಲಿ ಸಮರ್ಪಿಸಿಕೊಂಡವರು’ ಎಂದು ಹೇಳಿದರು.
ಕಾರ್ಗಿಲ್ ಯುದ್ಧದ ಘಟನಾವಳಿಗಳನ್ನು ಎಸ್.ಎಸ್.ಪೆಂಟಾ ವಿವರಿಸಿದರು. ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ ಮಾತನಾಡಿದರು.
ಪ್ರಾರಂಭದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಹುತಾತ್ಮ ಯೋಧರ ಗೌರವಾರ್ಥವಾಗಿ ಮೌನಾಚರಣೆ ನಡೆಸಲಾಯಿತು.
ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಕಾರ್ಯದರ್ಶಿ ಸಿ.ಜಿ.ಸೊನ್ನದ, ಸಹ ಕಾರ್ಯದರ್ಶಿ ಮಹೇಶ ಆಶಿ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ನಿರ್ದೇಶಕರಾದ ವಿ.ಬಿ.ಬಿಂಗಿ, ಶರಣಪ್ಪ ಸರ್ವಿ, ಕೆ.ಎಸ್.ಹಿರೇಮಠ, ಜಿ.ಬಿ.ಅರವಟಗಿಮಠ, ಎ.ಎಂ.ತಹಶೀಲ್ದಾರ್, ಯಲ್ಲಪ್ಪಗೌಡ ಹುಲ್ಲೂರ, ಶಂಕರಗೌಡ ಪಾಟೀಲ, ಶರೀಫ ಹಿರೇಹಾಳ, ಮಮ್ಮದ್‍ಹನೀಫ್, ಬಸನಗೌಡ ಪಾಟೀಲ, ಶಂಕರ ಹಾದಿಮನಿ ಸೇರಿದಂತೆ ನೂರಾರು ಮಂದಿ ಮಾಜಿ ಸೈನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇಶಕ್ಕಾಗಿ ಪ್ರಾಣವನ್ನೇ ನೀಡಿದ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸುವ ಕೆಲಸವನ್ನು ಸರ್ಕಾರ ಜಿಲ್ಲಾಡಳಿತ ಮಾಡಬೇಕು. ಆದರೆ ಮಾಜಿ ಸೈನಿಕರ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿ ಅಧಿಕಾರಿಗಳನ್ನು ಆಮಂತ್ರಿಸುವುದು ಎಷ್ಟು ಸಮಂಜಸ– ನಾಗರಾಜ ಕುಂದರಗಿ, ಹಾಲಿ ಮತ್ತು ಮಾಜಿ ಪ್ಯಾರಾ ಮಿಲಿಟರಿ ಯೋಧರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.