ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಲಕ್ಷ್ಮೇಶ್ವರದ ಬಾಲಾಜಿ ಆಸ್ಪತ್ರೆಯಲ್ಲಿ ತಾಲ್ಲೂಕಿನ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು
ಲಕ್ಷ್ಮೇಶ್ವರ: ‘ಕಾರ್ಗಿಲ್ ವಿಜಯೋತ್ಸವ ನಮ್ಮ ಸೈನಿಕರ ಸಾಹಸದ ಪ್ರತೀಕವಾಗಿದೆ. ಈಗ ಭಾರತದ ಜೊತೆ ಯುದ್ಧ ಮಾಡಲು ಬೇರೆ ದೇಶಗಳು ನೂರು ಬಾರಿ ಯೋಚನೆ ಮಾಡಬೇಕಾದ ಸಮಯ ಬಂದಿದೆ’ ಎಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಕಾರ್ಗಿಲ್ ವಿಜಯೋತ್ಸವದಲ್ಲಿ ವೀರ ಮರಣವನ್ನಪ್ಪಿದ ಯೋಧರಿಗೆ ನಮನ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
‘ಬರೋಬ್ಬರಿ ಐದು ಸಾವಿರ ಮೀಟರ್ ಎತ್ತರದಲ್ಲಿರುವ ಕಾರ್ಗಿಲ್ ಪ್ರದೇಶ ವಶಪಡಿಸಿಕೊಂಡಿದ್ದು ಭಾರತೀಯ ಸೈನ್ಯದ ಪರಾಕ್ರಮ ತೋರಿಸುತ್ತಿದೆ. ಪಹಲ್ಗಾಮ್ ದಾಳಿಯಲ್ಲಿ ಮಡಿದ 18 ಕುಟುಂಬಗಳ ನೋವಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಭಾರತದ ಯೋಧರು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪ್ರತಿದಾಳಿ ನಡೆಸಿ ಪಾಕಿಸ್ತಾನದ ವಾಯು ನೆಲೆಗಳನ್ನು ಧ್ವಂಸ ಮಾಡಿ ಅವರ ಸೊಕ್ಕನ್ನು ಅಡಗಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸೇನೆಗೆ ಬಲ ತುಂಬುವ ಕೆಲಸ ಮಾಡಿದ್ದಾರೆ’ ಎಂದು ತಿಳಿಸಿದರು.
‘ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಭಾರತೀಯರು ಸಿದ್ಧರಾಗಬೇಕು. ಯುವ ಜನತೆಯಲ್ಲಿ ದೇಶ ಪ್ರೇಮ ಬಿತ್ತುವ ಕೆಲಸ ಬಾಲ್ಯದಿಂದಲೇ ನಡೆಯಬೇಕು’ ಎಂದರು.
ಗಂಗಾಧರ ಮೆಣಸಿನಕಾಯಿ, ಪೂರ್ಣಾಜಿ ಖರಾಟೆ, ಜಗದೀಶಗೌಡ ಪಾಟೀಲ, ಪರಶುರಾಮ ಇಮ್ಮಡಿ, ಕಲ್ಲಪ್ಪ ಹಡಪದ, ನವೀನ ಹಿರೇಮಠ, ಭೀಮಣ್ಣ ಯಂಗಾಡಿ, ಶಕ್ತಿ ಕತ್ತಿ, ಅನಿಲ ಮುಳಗುಂದ, ಮೆಕ್ಕಿ, ದುಂಡೇಶ ಕೊಟಗಿ, ಪ್ರವೀಣ ಬೋಮಲೆ, ಮಂಜುನಾಥ ಗದಗ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಮಾಜಿ ಸೈನಿಕರ ಸಂಘದ ಅಧ್ಯಕ್ಷರು, ಸದಸ್ಯರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.