ADVERTISEMENT

ಬೊಫೋರ್ಸ್‌ ಫಿರಂಗಿ ಬಳಸಿ ಸೆದೆಬಡಿದೆವು..

ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ಸೈನಿಕ ಹನುಮಂತಪ್ಪನವರ ನೆನಪು

ಕಾಶಿನಾಥ ಬಿಳಿಮಗ್ಗದ
Published 25 ಜುಲೈ 2019, 19:45 IST
Last Updated 25 ಜುಲೈ 2019, 19:45 IST
ನಿವೃತ್ತ ಯೋಧ ಹನುಮಂತಪ್ಪ ಗಡಗಿ
ನಿವೃತ್ತ ಯೋಧ ಹನುಮಂತಪ್ಪ ಗಡಗಿ   

ಮುಂಡರಗಿ: 'ಸೇನಾ ಶಿಬಿರದಿಂದ ರಜೆಯ ಮೇಲೆ ಊರಿಗೆ ಬಂದಿದ್ದೆ. ಎರಡು ದಿನವೂ ಕಳೆದಿರಲಿಲ್ಲ. ತಕ್ಷಣ ಶಿಬಿರಕ್ಕೆ ಮರಳುವಂತೆ ಸೇನೆಯಿಂದ ಟೆಲಿಗ್ರಾಂ ಬಂತು. ಮನೆಯವರೆಲ್ಲರೂ ಆತಂಕಗೊಂಡರು. ಆದರೆ, ಮಾತೃಭೂಮಿಯ ಸೇವೆಗಾಗಿ ಬಂದ ಆ ಕರೆಯನ್ನು ನಿರ್ಲಕ್ಷ್ಯ ಮಾಡುವಂತಿರಲಿಲ್ಲ. ಟೆಲಿಗ್ರಾಂ ಜೇಬಿನಲ್ಲಿಟ್ಟುಕೊಂಡು ಅದೇ ದಿನ ರೈಲು ಹತ್ತಿದೆ.

ಗಡಿ ತಲುಪಿದ ನಂತರ, ಅಲ್ಲಿ ನಡೆದದ್ದು ತಿಂಗಳ ಪರ್ಯಂತ ಘನಘೋರ ಯುದ್ಧ. ಅಂತಿಮವಾಗಿ ವಿಜಯಮಾಲೆ ಭಾರತ ಮಾತೆಗೆ. ತಾಲ್ಲೂಕಿನ ಡಂಬಳ ಗ್ರಾಮದ ಹನುಮಂತಪ್ಪ ಮಲ್ಲಪ್ಪ ಗಡಗಿ ಕಾರ್ಗಿಲ್ ಯುದ್ಧದ ಸಂದರ್ಭದ ನೆನಪುಗಳನ್ನು ಮೆಲುಕು ಹಾಕಿದರು.

ಕಾರ್ಗಿಲ್ ಯುದ್ಧ ನಡೆದಾಗ ಹನುಮಂತಪ್ಪನವರ ಅವರು ಸೇನೆಯ ಅಟ್ಲರಿ 143 ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತರೆ ಸೈನಿಕರೊಂದಿಗೆ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿದ ರೋಚಕ ಅನುಭವಗಳು, ನಿನ್ನೆ, ಮೊನ್ನೆ ನಡೆದಂತೆ ಅವರ ಕಣ್ಣೆದುರಿಗಿವೆ.

ADVERTISEMENT

ಸಾವಿರಾರು ಸೈನಿಕರನ್ನು ಒಳಗೊಂಡಿದ್ದ ರೆಜಿಮೆಂಟಿನಲ್ಲಿ ತಲಾ ಐವರು ಸೈನಿಕರ ಕಿರು ಗುಂಪುಗಳು ರಚಿಸಿ, ಲೋಡೆಡ್ ಗನ್ನುಗಳನ್ನು ಹಿಡಿದುಕೊಂಡು ಮುನ್ನುಗ್ಗಬೇಕಿತ್ತು. ನಿಖರ ಗುರಿ ಹಿಡಿದು ಗುಂಡು ಹಾರಿಸುವಷ್ಟು ಸಮಯ ಇರಲಿಲ್ಲ. ಶತ್ರುಪಾಳೆಯದ ಮೇಲೆ ಅಕ್ಷರಶಃ ಗುಂಡಿನ ಮಳೆಗೆರೆಯುತ್ತಲೇ ಮುನ್ನುಗ್ಗಬೇಕಿತ್ತು. ಹಗಲು ರಾತ್ರಿ ಎನ್ನದೇ ಕಾದಾಡಬೇಕಿತ್ತು.

ಈಗ ಬಹು ಚರ್ಚೆಯಾಗುತ್ತಿರುವ ಬೊಫೋರ್ಸ್‌ ಫಿರಂಗಿಯನ್ನು ಆಗ ಅತ್ಯಂತ ಚಾಕಚಕ್ಯತೆಯಿಂದ ಹಾರಿಸಿದ್ದು, ಸೈನಿಕ ಜೀವನದಲ್ಲಿ ಮರೆಯಲಾರದ ಘಟನೆ. ಸ್ವಯಂ ಚಾಲಿತ ಬೊಫೋರ್ಸ್‌ ಫಿರಂಗಿ ಹಾರಿಸುವಾಗ ಇಡೀ ದೇಹವೇ ನಡುಗುತ್ತಿತ್ತು. ಇದು ಅತ್ಯಂತ ರೋಮಾಂಚಕ ಅನುಭವ ಎಂದರು. ಒಮ್ಮೆ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸುತ್ತಿದ್ದೆವು. ಕತ್ತಲಿನಲ್ಲಿ ಕಾರ್ಗಿಲ್ ಪರ್ತವ ಶ್ರೇಣಿಯಲ್ಲಿ ಬೊಫೋರ್ಸ್‌ ಫಿರಂಗಿ ಇದ್ದ ಭಾರಿ ಗಾತ್ರದ ವಾಹನ ಮುಗುಚಿಬಿತ್ತು. ರೆಜಿಮೆಂಟ್ ಮುಖ್ಯಸ್ಥರ ನೇತೃತ್ವದಲ್ಲಿ ಸೈನಿಕರೆಲ್ಲ ಸೇರಿ ಜತೆಯಾಗಿ, ನಿಂತು, ಮುಗುಚಿ ಬಿದ್ದ ವಾಹವನ್ನು ಮೇಲೆತ್ತಿ ನಿಲ್ಲಿಸಿದ್ದೆವು. ಇದು ಮರೆಯಲಾಗದ ಘಟನೆ ಎಂದು ಸ್ಮರಿಸಿದರು.

ಯುದ್ಧ ನಡೆಯುತ್ತಿದ್ದ ಕೆಲವು ಸಂದರ್ಭಗಳಲ್ಲಿ ಅನ್ನ ಆಹಾರವಿಲ್ಲದೇ ಹಗಲು ರಾತ್ರಿ ಕಳೆಯಬೇಕಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ತುಂಬಾ ಅಪರೂಪಕ್ಕೆ ಭೆಟಿಯಾಗುತ್ತಿದ್ದ ಕುರಿಗಾಯಿಗಳಿಂದ ಕುರಿಯನ್ನು ಪಡೆದು ಅದನ್ನೇ ಬೇಯಿಸಿ ತಿನ್ನಬೇಕಾಗಿತ್ತು. ಪಾಕಿಸ್ತಾನಿ ಸೈನಿಕರು ದಾಳಿ ಮಾಡಲು ಸದಾ ಗಡಿಯಲ್ಲಿ ಹೊಂಚುಹಾಕಿ ಕಾಯುತ್ತಿದ್ದರು. ಅವರ ನರಿ ಬುದ್ದಿಯನ್ನು ಅರಿತಿದ್ದ ಸೇನೆಯ ಹಿರಿಯ ಅಧಿಕಾರಿಗಳು ಮುಂಜಾಗ್ರತೆ ವಹಿಸುತ್ತಿದ್ದರು.

ಅಪ್ರಚೋದಿತ ದಾಳಿಯ ಸಂದರ್ಭದಲ್ಲಿ ಗಡಿಯಿಂದ ತೂರಿ ಬರುತ್ತಿದ್ದ ಗುಂಡುಗಳಿಗೆ ಎದೆಯೊಡ್ಡಿ ನಮ್ಮ ಸೈನಿಕರು ಪ್ರಾಣ ತೆತ್ತಾಗ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಜತೆಗೆ ಶತ್ರುಗಳನ್ನು ಸೆದೆಬಡಿಯಬೇಕು ಎಂಬ ಸಿಟ್ಟು ದೇಹವನ್ನೆಲ್ಲ ಆಕ್ರಮಿಸಿಕೊಂಡು, ವೈರಿ ಪಡೆ ಇದ್ದೆಡೆಗೆ ಮುನ್ನುಗ್ಗುತ್ತಿದ್ದವು. ಅವರನ್ನು ಸೆದೆಬಡಿಯುತ್ತಿದ್ದೆವು. ರಣಾಂಗಣದಲ್ಲಿ ಕಳೆದ ಪ್ರತೀ ಕ್ಷಣವೂ ರೋಚಕವಾಗಿತ್ತು. ಅಂತಿಮವಾಗಿ ಯುದ್ದ ಗೆದ್ದು ಬಂದಾಗ ದೇಶವನ್ನು ರಕ್ಷಿಸಿದ ಹೆಮ್ಮೆ ನಮ್ಮಲ್ಲಿ ಮನೆ ಮಾಡಿತ್ತು ಎಂದು ಅಭಿಮಾನದಿಂದ ಕಾರ್ಗಿಲ್‌ ಕಥನವನ್ನು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.