ರೋಣ: ಗ್ಯಾರಂಟಿ ಯೋಜನೆಗಳಲ್ಲಿ ದಿನ ಕಳೆಯುತ್ತಿರುವ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣ ಕಡೆಗಣಿಸುತ್ತ ಬಂದಿದೆ. ಆಡಳಿತ ಪಕ್ಷದ ಶಾಸಕರೇ ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂದು ನರಗುಂದ ಶಾಸಕ ಮಾಜಿ ಸಚಿವ ಸಿ.ಸಿ. ಪಾಟೀಲ ಟೀಕಿಸಿದರು.
ಶುಕ್ರವಾರ ತಾಲ್ಲೂಕಿನ ಯಾ.ಸ.ಹಡಗಲಿ ಮತ್ತು ಮಾಳವಾಡ ಗ್ರಾಮಗಳ ಶಾಲಾ ಕೊಠಡಿ ಉದ್ಘಾಟನೆ ಮತ್ತು ಮಾಳವಾಡ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಅನುದಾನ ನೀಡಿದ್ದು ನರಗುಂದ ಮತಕ್ಷೇತ್ರಕ್ಕೆ. ರಾಜ್ಯ ಸರ್ಕಾರದ ಅನುದಾನ ಹೊರತುಪಡಿಸಿ ಹೆಚ್ಚುವರಿ ₹12 ಕೋಟಿ ಅನುದಾನ ನೀಡಿದ್ದು ಗದಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ.
‘ಸರ್ಕಾರಿ ಶಾಲೆಗಳ ಅಭಿವೃದ್ಧಿ ಹೊಂದುವಲ್ಲಿ ಶಿಕ್ಷಕರು, ಪಾಲಕರು ಮತ್ತು ಗ್ರಾಮಸ್ಥರ ಪಾತ್ರ ಪ್ರಮುಖವಾಗಿದೆ. ಶಿಕ್ಷಕರನ್ನು ಸಮಾಜ ಗೌರವಿಸಬೇಕು. ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳಂತೆ ಕಾಣದೇ ಸಂಸ್ಕಾರಯುತ ಸತ್ಸಂಪ್ರದಾಯ ಹೊಂದುವ ವ್ಯಕ್ತಿತ್ವ ಮಕ್ಕಳಲ್ಲಿ ಒಡಮೂಡುವಂತೆ ಮಾಡಬೇಕು’ ಎಂದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ಮಾತನಾಡಿ, ‘ಬೆಣ್ಣೆಹಳ್ಳದ ಪ್ರವಾಹದ ಸಂದರ್ಭದಲ್ಲಿ ಪ್ರವಾಹ ಪೀಡಿತ ಎಲ್ಲ ಗ್ರಾಮಗಳನ್ನು ಯಶಸ್ವಿಯಾಗಿ ಸ್ಥಳಾಂತರಗೊಳಿಸಲಾಗಿದ್ದು ಶಾಸಕ ಸಿ.ಸಿ. ಪಾಟೀಲ ಅವರು. ನರಗುಂದ ಕ್ಷೇತ್ರದ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಶಾಸಕರು ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ನರಗುಂದ ಕ್ಷೇತ್ರದ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪ್ರಬಲ ಪೈಪೋಟಿ ನೀಡುವಂತೆ ಮಾಡಿದ್ದಾರೆ’ ಎಂದರು.
ರೋಣ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ, ಯಾವಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಮಶಾದ ಬೇಗಂ ಬಾಬಾನಗರ, ಮುತ್ತನಗೌಡ ಪಾಟೀಲ, ಹೊಳೆಆಲೂರು ಬಿಜೆಪಿ ಮಂಡಲ ಅಧ್ಯಕ್ಷ ಸೋಮಲಿಂಗಪ್ಪ ಚರೇದ, ವೈ.ಬಿ. ಆಲೂರ, ಅಂದಪ್ಪ ಸವದತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.