ಲಕ್ಷ್ಮೇಶ್ವರ: ‘ರಾಜ್ಯ ಸರ್ಕಾರ ನಾಗರಿಕರ ಅನುಕೂಲಕ್ಕಾಗಿ ಆನ್‌ಲೈನ್ ಸೇವೆಗಳು ಒಂದೇ ಸೂರಿನಲ್ಲಿ ದೊರೆಯಬೇಕು ಎಂಬ ಉದ್ದೇಶದಿಂದ ಕರ್ನಾಟಕ ಒನ್ ಸೇವಾ ಕೇಂದ್ರಗಳನ್ನು ಅನುಷ್ಠಾನಕ್ಕೆ ತಂದಿದೆ. ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳು ಕೇಂದ್ರದಲ್ಲಿ ಒಂದೇ ಸ್ಥಳದಲ್ಲಿ ಸಿಗುತ್ತವೆ. ಸಾರ್ವಜನಿಕರು ಕರ್ನಾಟಕ ಒನ್ ಕೇಂದ್ರದ ಉಪಯೋಗ ಪಡೆದುಕೊಳ್ಳಬೇಕು’ ಎಂದು ಕಾಂಗ್ರೆಸ್ ಯುವ ನಾಯಕ ಆನಂದ ಗಡ್ಡದೇವರಮಠ ಹೇಳಿದರು.
ಪಟ್ಟಣದ ಕಾಶೆಟ್ಟಿ ಓಣಿಯಲ್ಲಿ ಭಾನುವಾರ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಪುನರ್ ಚಾಲನೆ ನೀಡಿ ಮಾತನಾಡಿದರು.
‘ಈ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ ಸೇರಿದಂತೆ 48 ಸೇವೆಗಳು ಲಭ್ಯ ಇವೆ. ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆಗಳನ್ನು ಕರ್ನಾಟಕ ಒನ್ ಕೇಂದ್ರದಲ್ಲಿ ಪಾವತಿಸಬಹುದು. ಹಂತ– ಹಂತವಾಗಿ ಕೇಂದ್ರದಿಂದ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ದೊರೆಯಲಿ’ ಎಂದರು.
ಕೇಂದ್ರದ ಮುಖ್ಯಸ್ಥ ಶಬ್ಬೀರ್ ಶೇಖ್ ಮಾತನಾಡಿ ‘ಕರ್ನಾಟಕ ಸರ್ಕಾರವು ಒದಗಿಸುವ ವಿವಿಧ ಸೇವೆಗಳನ್ನು ಪಡೆಯಲು ಜನರು ಕರ್ನಾಟಕ ಒನ್ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬಹುದು. ಇದು ಆನ್‍ಲೈನ್ ಪಾವತಿಗಳನ್ನೂ ಸುಲಭಗೊಳಿಸುತ್ತದೆ. ಆಸ್ತಿ ತೆರಿಗೆ, ನೀರಿನ ಬಿಲ್ ಅನ್ನೂ ಇಲ್ಲಿ ಪಾವತಿಸಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೇವೆಗಳನ್ನು ಇಲ್ಲಿ ಪಡೆಯಬಹುದು. ಕೇಂದ್ರ ನಾಗರಿಕರಿಗೆ 15 ಇಲಾಖೆಗಳ ಸೇವೆ ಒದಗಿಸಲಿದೆ’ ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷ ಪೀರ್ದೋಷ್ ಅಡೂರ, ಸದಸ್ಯರಾದ ಎಸ್.ಕೆ.ಹವಾಲ್ದಾರ, ಮುಸ್ತಾಕ್‍ಅಹ್ಮದ್ ಶಿರಹಟ್ಟಿ, ಸಿಕಂದರ್ ಕಣಕೆ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಂ.ಎಂ.ಗದಗ, ಇಬ್ರಾಹಿಂ ಮುಲ್ಲಾ, ಗಂಗಾಧರ ಮ್ಯಾಗೇರಿ, ನಾರಾಯಣಸಾ ಪವಾರ, ಕಿರಣ ನವಲೆ, ನಿರಂಜನ ವಾಲಿ, ಚಂದ್ರಶೇಖರ ಸುಂಕದ, ನೀಲಪ್ಪ ಪಡಗೇರಿ, ವಾಸು ಬೋಮಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.