ADVERTISEMENT

ಭೂ ಪರಿಹಾರ ನೀಡದೆ ಜಮೀನು ವಶ

ಕೆಐಡಿಬಿ ವಿರುದ್ಧ ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 9:44 IST
Last Updated 9 ಮಾರ್ಚ್ 2020, 9:44 IST
ಸಂತ್ರಸ್ತರಾದ ಮಹ್ಮದ್ ಗೌಸ್ ಮತ್ತು ಹರಿ ಸೋಮ್ಲಾ
ಸಂತ್ರಸ್ತರಾದ ಮಹ್ಮದ್ ಗೌಸ್ ಮತ್ತು ಹರಿ ಸೋಮ್ಲಾ   

ವಾಡಿ: ವಾಡಿ-ಗದಗ ರೈಲು ಮಾರ್ಗ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಡಿಬಿ) ರೈತರಿಗೆ ಪರಿಹಾರ ನೀಡದೆ ರೈತರ ಪಹಣಿಯಲ್ಲಿ ತನ್ನ ಹೆಸರು ಸೇರಿಸಿಕೊಂಡಿದೆ. ಬಲವಂತವಾಗಿ ನಮ್ಮ ಜಮೀನು ಕಬ್ಜೆ ಮಾಡಲಾಗಿದೆ ಎಂದು ಬಸವೇಶ್ವರ ನಗರದ ರೈತರು ದೂರಿದ್ದಾರೆ.

ರೈತರಿಗೆ ಸೂಕ್ತ ಪರಿಹಾರ ನೀಡದೆ ಸಂಬಂಧಿಸಿದ ಜಮೀನುಗಳನ್ನು ಸರ್ಕಾರ ಕೆಐಡಿಬಿಗೆ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ನಮ್ಮ ಒಡೆತನದಲ್ಲಿನ ಜಮೀನನ್ನು ನಮಗೆ ಗೊತ್ತಿಲ್ಲದೆ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ನ್ಯಾಯಯುತ ಪರಿಹಾರ ನೀಡಿದ ಬಳಿಕ ಜಮೀನು ನೋಂದಣಿ ಮಾಡಿಸಿಕೊಳ್ಳಬೇಕು. ಆದರೆ ಪರಿಹಾರ ನೀಡದೆ ಜಮೀನು ಕಬ್ಜೆ ಮಾಡಿಕೊಂಡಿರುವುದು ಅನ್ಯಾಯದ ಪರಮಾವಧಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಇದಕ್ಕೂ ಮೊದಲು ಭೂಮಿ ದರ ಇತ್ಯರ್ಥಕ್ಕೆ ಸಂಬಂಧಿಸಿ ಕಲಬುರ್ಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಾಲ್ಕೈದು ಬಾರಿ ರೈತರು ಹಾಗೂ ಕೆಐಡಿಬಿ ಅಧಿಕಾರಿಗಳ ಸಭೆ ನಡೆದಿದೆ. ಆದರೆ ಒಮ್ಮತ ಮೂಡದ ಕಾರಣ ಸಭೆ ವಿಫಲವಾಗಿದೆ. ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದರ ನಡುವೆ ರೈತರ ಗಮನಕ್ಕೆ ತಾರದೆ ಕೆಐಡಿಬಿ ಸಂಸ್ಥೆ ಕಂದಾಯ ಇಲಾಖೆ ಮೂಲಕ ಪಹಣಿ ಪತ್ರದಲ್ಲಿ ತನ್ನ ಹೆಸರು ನಮೂದಿಸಿಕೊಂಡಿದೆ.

ಇದರಿಂದ ಹೌಹಾರಿದ ಹಲವು ರೈತರು ಜಮೀನು ಕಳೆದುಕೊಂಡು ಆತಂಕಕ್ಕೆ ಸಿಲುಕಿದ್ದಾರೆ. ಪಹಣಿಯಲ್ಲಿ ಹೆಸರು ತೆಗೆಯಿರಿ ಇಲ್ಲವೇ ಸೂಕ್ತ ಪರಿಹಾರ ಕೊಡಿ ಎಂದು ರೈತರು ಆಗ್ರಹಿಸಿದ್ದಾರೆ.

ಬಸವೇಶ್ವರ ನಗರದ ಮಹ್ಮದ್ ಗೌಸ್ ಅವರ ಪಹಣಿ ಪತ್ರ ಸ.ನಂ–74 ರಲ್ಲಿ 2.29 ಎಕರೆ ಜಮೀನು, ನಾರಾಯಣ ಸೋಮ್ಲಾ ಅವರ ಪಹಣಿ ಪತ್ರ ಸ.ನಂ–72(3) ರಲ್ಲಿ 27 ಗುಂಟೆ, ಹರಿ ಸೋಮ್ಲಾ ಅವರ ಪಹಣಿ ಪತ್ರ ಸ.ನಂ 72(2)ರಲ್ಲಿ 13 ಗುಂಟೆ ಜಮೀನಿಗೆ ಕೆಐಡಿಬಿ ಸಂಸ್ಥೆ ಆಕ್ರಮವಾಗಿ ತನ್ನ ಹೆಸರು ನಮೂದಿಸಿಕೊಂಡಿದೆ ಎಂದು ರೈತರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.