ಗದಗ: ‘ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ಇ.ಡಿ (ಜಾರಿ ನಿರ್ದೇಶನಾಲಯ) ಸೀಳು ನಾಳಿ ಇದ್ದಂತೆ. ಅದು ಬಿಜೆಪಿಯ ಅಂಗಸಂಸ್ಥೆಯಾಗಿದೆ. ವಿರೋಧ ಪಕ್ಷಗಳನ್ನು ಗುರಿಪಡಿಸಿ, ಅಲ್ಲಿನ ನಾಯಕರನ್ನು ಬಲಿ ಹಾಕುವುದೇ ಅದರ ಉದ್ಯೋಗ. ಒಂದರ್ಥದಲ್ಲಿ ವಿಚ್ ಹಂಟಿಂಗ್ ಏಜೆನ್ಸಿ (ಬೇಟೆಯಾಡುವ ಮಾಟಗಾರರ ಏಜೆನ್ಸಿ)’ ಎಂದು ಸಚಿವ ಕೃಷ್ಣಬೈರೇಗೌಡ ಹರಿಹಾಯ್ದರು.
ಇಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೇವಲ ರಾಜಕೀಯ ವಿರೋಧಿಗಳ ಮೇಲೆ ಮಾತ್ರ ಕೇಸ್ ಹಾಕಿದ್ದಾರೆ. ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಇಟ್ಟವರ ಮೇಲೆ ಪ್ರಕರಣ ದಾಖಲಿಸಿದ್ದಾರೆಯೇ’ ಎಂದು ಪ್ರಶ್ನಿಸಿದರು.
‘ಈವರೆಗೆ ಇ.ಡಿ ಎಷ್ಟು ಪ್ರಕರಣ ದಾಖಲಿಸಿದೆಯೋ, ಅದರಲ್ಲಿ ಶೇ 90ರಷ್ಟು ಪ್ರಕರಣಗಳು ವಿರೋಧ ಪಕ್ಷಗಳ ಮೇಲೆಯೇ ಇವೆ. ಆ ಪೈಕಿ ಶೇ 1.5ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಆಗಿದೆ. ಉಳಿದವುಗಳನ್ನು ಅವರಿಗೆ ಸಾಬೀತುಪಡಿಸಲು ಆಗಿಲ್ಲ. ಹಿಟ್ ಆ್ಯಂಡ್ ರನ್ ಮಾಡುವುದೇ ಇದರ ಕೆಲಸ’ ಎಂದು ಅವರು ಆರೋಪಿಸಿದರು.
‘ಜಾರಿ ನಿರ್ದೇಶನಾಲಯದವರು ದೇಶದಲ್ಲಿ ಒಬ್ಬ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆಯೇ? ಇದು ರಾಜಕೀಯ ಪ್ರೇರಿತ ದಾಳಿ. ಬಿಜೆಪಿ ಸೋತು ನಿರಾಸೆಯಾಗಿ ಇ.ಡಿಯನ್ನು ಛೂ ಬಿಟ್ಟಿದೆ. ಅದನ್ನು ನಾವು ಕಾನೂನಾತ್ಮಕವಾಗಿ ಹಾಗೂ ಜನತಾ ನ್ಯಾಯಾಲಯದಲ್ಲೂ ಎದುರಿಸುತ್ತೇವೆ’ ಎಂದರು.
ಬಿಜೆಪಿಯ ಎರಡು ಬಣಗಳ ವಕ್ಫ್ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ಮೇಲುಗೈ ಸಾಧಿಸಲು ನಡೆಸುತ್ತಿರುವ ಹೋರಾಟ. ವಕ್ಫ್ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲೇ ನಾಲ್ಕು ಸಾವಿರ ಖಾತೆಗಳು ಬದಲಾಗಿವೆ. ಇವರೆಲ್ಲರೂ ಆಗ ಎಲ್ಲಿಗೆ ಹೋಗಿದ್ದರು? ಜನರನ್ನು ಯಾಮಾರಿಸಲು ವಕ್ಫ್ ಹೋರಾಟ ನಡೆಸುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.