ಗದಗ: ‘ಅತಿಕಡಿಮೆ ಸಂಬಳದಲ್ಲಿ ಶ್ರಮಪಟ್ಟು, ಹೆಚ್ಚು ಸಮಯ ದುಡಿಯುವ ಸಾರಿಗೆ ಸಂಸ್ಥೆ ನೌಕರರ ವೇತನವನ್ನು ಸರ್ಕಾರ ಕೂಡಲೇ ಹೆಚ್ಚಿಸಬೇಕು’ ಎಂದು ಜಂಟಿ ಸಂಘಟನೆಗಳ ಮುಖ್ಯ ಪದಾಧಿಕಾರಿಗಳಾದ ಶಾಂತಣ್ಣ ಮುಳವಾಡ, ಬಿ.ಎಚ್.ರಾಮೇನಹಳ್ಳಿ, ಎಚ್.ಸಿ.ಕೊಪ್ಪಳ, ಎಂ.ಆಂಜನೇಯ, ಎ.ಕೆ.ಕರ್ನಾಚಿ ಆಗ್ರಹಿಸಿದ್ದಾರೆ.
‘ಪ್ರಸ್ತುತ ಇರುವ ನಾಲ್ಕು ಸಾರಿಗೆ ನಿಗಮಗಳಲ್ಲಿ 1.15 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 25 ಸಾವಿರ ಬಸ್‌ಗಳಿವೆ. ಪ್ರತಿ ದಿನ 55 ಲಕ್ಷ ಕಿ.ಮೀ. ಸಂಚರಿಸುವ ಮೂಲಕ ಜನರಿಗೆ ಸೇವೆ ಒದಗಿಸುತ್ತಿವೆ. ಸಾರಿಗೆ ಸಂಸ್ಥೆಯ ಸಿಬ್ಬಂದಿಯಲ್ಲಿ ಶೇ 75ರಷ್ಟು ಚಾಲನಾ ಸಿಬ್ಬಂದಿ ಶೇ 25ರಷ್ಟು ತಾಂತ್ರಿಕ ಹಾಗೂ ಆಡಳಿತ ಮತ್ತು ಇತರೆ ಸಿಬ್ಬಂದಿ ಇದ್ದಾರೆ. 1992ರವರೆಗೆ ಸಂಸ್ಥೆಯ ನೌಕರರಿಗೆ, ಅಧಿಕಾರಿಗಳಿಗೆ ಪ್ರತಿ 4 ವರ್ಷಗಳಿಗೊಮ್ಮೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಿಸಿ ಉತ್ತಮ ಸಂಬಳ ಬರುತ್ತಿತ್ತು. ಅದರ ನಂತರ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಾರ್ಮಿಕ ಸಂಘಟನೆಗಳನ್ನು ಬಗ್ಗು ಬಡಿಯಲು ಉದ್ದೇಶಪೂರ್ವಕವಾಗಿಯೇ ಕಡಿಮೆ ಸಂಬಳ ನೀಡಿ, ಹೆಚ್ಚು ಕೆಲಸದ ಅವಧಿ ನಿಗದಿ ಮಾಡಿ, ನೌಕರರನ್ನು ಶೋಷಣೆ ಮಾಡುತ್ತ ಬಂದಿದ್ದಾರೆ’ ಎಂದು ಆರೋಪಿಸಿದ್ದಾರೆ.
‘2023ರ ಮಾರ್ಚ್‌ನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಶೇ 15ರ ವೇತನ ಹೆಚ್ಚಳ ಮಾಡಿ 1-1-2020ರಿಂದ 4 ವರ್ಷಗಳ ಅವಧಿಗೆ ಆದೇಶ ಹೊರಡಿಸಿದೆ. ಅದರಂತೆ ಪರಿಷ್ಕರಣೆಯಾಗಿ ವೇತನ ಪಾವತಿಯಾಗುತ್ತಿದೆ. ಸದ್ಯ 38 ತಿಂಗಳ ಶೇ 15ರ ವ್ಯತ್ಯಾಸದ ಹಣ ಹಾಗೂ 1-1-2024ರಿಂದ ಹೊಸ ವೇತನ ಪರಿಷ್ಕರಣೆ (ಶೇ 25) ಹೆಚ್ಚಿಸಲು ಒತ್ತಾಯಿಸಿ ಆಗಸ್ಟ್ 5ರಂದು ಜಂಟಿ ಸಂಘಟನೆಗಳು ಕರೆಕೊಟ್ಟಿವೆ. ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಗಳು ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ನೌಕರರ ಸಂಘಟನೆಗಳ ಸಭೆ ನಡೆಸಿದರೂ ಸೂಕ್ತ ತೀರ್ಮಾನ ಕೈಗೊಳ್ಳದೇ ಇರುವುದು ನ್ಯಾಯ ಸಮ್ಮತವಲ್ಲ’ ಎಂದು ಕಿಡಿಕಾರಿದ್ದಾರೆ.
‘ನಾಲ್ಕು ವರ್ಷಗಳ ಒಪ್ಪಂದದ ಅವಧಿಯಂತೆ 1-1-2024ರಿಂದ ಹೊಸ ವೇತನ ಪರಿಷ್ಕರಣೆ ಆದೇಶ ಮಾಡಬೇಕು. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಯಶಸ್ವಿಯಾಗಲು ಸಾರಿಗೆ ಸಂಸ್ಥೆಯ ಅಧಿಕಾರಿಗಳು, ನೌಕರರ ಅಪಾರ ಶ್ರಮ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.
‘ಪಂಚ ಗ್ಯಾರಂಟಿಗಳಿಗೆ ಸರ್ಕಾರ ₹56 ಸಾವಿರ ಕೋಟಿ ಹಣವನ್ನು ಪ್ರತಿ ವರ್ಷ ಪಾವತಿಸಿದ್ದು, ಅದು ರಾಜ್ಯದ ಆಯವ್ಯಯದ ಶೇ 15ರಷ್ಟಿದೆ. ಅವುಗಳನ್ನು ಬಿಪಿಎಲ್ ಹಾಗೂ ಅಂತ್ಯೋದಯ ಫಲಾನುಭವಿಗಳಿಗೆ ಮಾತ್ರ ನೀಡಿದರೆ ಶೇ 40 ಹಣ ಉಳಿಯುತ್ತದೆ. ಅಂದರೆ ವರ್ಷಕ್ಕೆ ₹15 ಸಾವಿರಕೋಟಿ ಹಣ ಉಳಿಯುತ್ತದೆ. ಅದರಲ್ಲಿ ಪ್ರತಿ ವರ್ಷ ₹2 ಸಾವಿರ ಕೋಟಿಯನ್ನು ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಪಾವತಿಸಿದರೆ ತನ್ನ ಆಂತರಿಕ ಸಂಪನ್ಮೂಲಗಳೊಂದಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಸದೃಢವಾಗುತ್ತವೆ’ ಎಂದು ತಿಳಿಸಿದ್ದಾರೆ.
ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 14 ಬಾರಿ ಆಯವ್ಯಯ ಮಂಡಿಸಿದ್ದಾರೆ. ಆದರೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವುದು ಸರಿಯಲ್ಲ. ಕೂಡಲೇ ಸಭೆ ನಡೆಸಿ, ಪರಿಹಾರ ನೀಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.