ADVERTISEMENT

ಗದಗ: 29ಕ್ಕೆ ಬಾಗಲಕೋಟೆಯಲ್ಲಿ ಸಮಾವೇಶ

ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಶಕ್ತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 16:49 IST
Last Updated 26 ನವೆಂಬರ್ 2020, 16:49 IST

ಗದಗ: ‘ಮೀಸಲಾತಿ ಪ್ರಮಾಣ ಹೆಚ್ಚಿಸಿ ಕುರುಬರನ್ನೂ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಇದೇ 29ಕ್ಕೆ ಬಾಗಲಕೋಟೆಯ ಕಾಳಿದಾಸ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಹಾಲುಮತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.

‘ಕುರುಬರು ದೇಶದ ಮೂಲನಿವಾಸಿಗಳು. ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲ ಅರ್ಹತೆಗಳೂ ಈ ಸಮುದಾಯಕ್ಕೆ ಇದೆ. ಹಿಂದಿನವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಮುದಾಯದ ಈಗಿನ ಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸಮುದಾಯದ ರಾಜಕೀಯ ನಾಯಕರೆಲ್ಲರೂ ಪಕ್ಷಭೇದ ಮರೆತು ಕುರುಬ ಸಮಾಜದ ಹಕ್ಕಿಗಾಗಿ ಹೋರಾಟ ಮಾಡಬೇಕು. ದಶಕಗಳ ಹೋರಾಟಕ್ಕೆ ಅಂತಿಮ ರೂಪ ನೀಡಲು ಎಲ್ಲರೂ ಒಗ್ಗೂಡಬೇಕು’ ಎಂದು ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಸಮಾವೇಶದಲ್ಲಿ ಗದಗ ಜಿಲ್ಲೆಯಿಂದ ಸುಮಾರು 50 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪೂರ್ವಭಾವಿಯಾಗಿ ರಾಜ್ಯದ ವಿವಿಧೆಡೆ ಸಮುದಾಯದ ಶಕ್ತಿ ಪ್ರದರ್ಶನ ಕೂಡ ನಡೆದಿದೆ. ನ. 28ಕ್ಕೆ ಬೆಳಗಾವಿಯಲ್ಲಿ ಹಾಲುಮತ ಸ್ವಾಮೀಜಿಗಳ ಸಮಾವೇಶ ನಡೆಯಲಿದೆ. ಜ.15ಕ್ಕೆ ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದಿಂದ ವಿಧಾನಸೌಧ ಚಲೋ ಪಾದಯಾತ್ರೆ ನಡೆಯಲಿದೆ. ಇದು ಫೆ.6ಕ್ಕೆ ಕೊನೆಗೊಂಡು ಫೆ.7ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿ‘ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿರುವ ಎಲ್ಲ ಕುರುಬರಿಗೂ ಎಸ್‌ಟಿ ಮೀಸಲಾತಿ ಕೊಡಬೇಕು ಎಂಬ ಮನವಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು‘ ಎಂದು ಕುರುಬರ ಎಸ್‌.ಟಿ. ಹೋರಾಟ ಸಮಿತಿಯ ಮಹಿಳಾ ಕಾರ್ಯದರ್ಶಿ ಚೆನ್ನಮ್ಮ ಹೇಳಿದರು. ಗೌರವ ಅಧ್ಯಕ್ಷ ನಾಗರಾಜ ಮೆಣಸಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.