ADVERTISEMENT

ಗದಗ: ಬದ್ಧತೆಯ ಕೊರತೆ; ಸೊರಗಿದ ಉದ್ಯಾನಗಳು

ನಗರದ ಸೌಂದರ್ಯ ಹೆಚ್ಚಿಸುವ ಉದ್ಯಾನಗಳ ನಿರ್ವಹಣೆಗೆ ಗಮನ ಹರಿಸದ ಸ್ಥಳೀಯ ಆಡಳಿತಗಳು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 2:33 IST
Last Updated 30 ನವೆಂಬರ್ 2020, 2:33 IST
ಗಜೇಂದ್ರಗಡದ ಬಡಾವಣೆಯೊಂದರಲ್ಲಿ ಉದ್ಯಾನ ವನಕ್ಕೆ ಮಿಸಲಿಟ್ಟಜಾಗದಲ್ಲಿ ಗಿಡಗಳನ್ನು ಬೆಳೆಸದೆ ಅದರ ಸುತ್ತ ಸುಸಜ್ಜಿತ ಗೋಡೆ ನಿರ್ಮಿಸಿರುವುದು
ಗಜೇಂದ್ರಗಡದ ಬಡಾವಣೆಯೊಂದರಲ್ಲಿ ಉದ್ಯಾನ ವನಕ್ಕೆ ಮಿಸಲಿಟ್ಟಜಾಗದಲ್ಲಿ ಗಿಡಗಳನ್ನು ಬೆಳೆಸದೆ ಅದರ ಸುತ್ತ ಸುಸಜ್ಜಿತ ಗೋಡೆ ನಿರ್ಮಿಸಿರುವುದು   
"ಹೆಲ್ತ್‌ ಕ್ಯಾಂಪ್‌ನಲ್ಲಿರುವ ಉದ್ಯಾನದ ಪುಟ್ಟ ತೊರೆಯಲ್ಲಿ ಕಸ ಕಟ್ಟಿಕೊಂಡಿರುವುದು."
"ಮಕ್ಕಳ ಉದ್ಯಾನದಲ್ಲಿ ಆಟಿಕೆಗಳು ಮುರಿದು ಬಿದ್ದಿರುವುದು"
"ಬೆಟಗೇರಿಯ ಕಿತ್ತೂರು ರಾಣಿ ಚನ್ನಮ್ಮ ಉದ್ಯಾನದಲ್ಲಿ ಆಟವಾಡುತ್ತಿರುವ ಮಕ್ಕಳು. ಪ್ರಜಾವಾಣಿ ಚಿತ್ರ: ಬನೇಶ್‌ ಕುಲಕ"
"ಶಿರಹಟ್ಟಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಉದ್ಯಾನ ವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದು"
"ನರೇಗಲ್ ಪಟ್ಟಣದ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ಐದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಉದ್ಯಾನವನ ಇಂದಿಗೂ ಉದ್ಘಾಟನೆ ಭಾಗ್ಯವನ್ನು ಕಂಡಿಲ್ಲ. ಒಳಗೆ ಮುಳ್ಳಿನ ಕಂಟಿಗಳು ಬೆಳೆದಿವೆ"
"ನರಗುಂದ ಪುರಸಭೆ ಎದುರಿಗೆ ಇರುವ ಅಲ್ಪ ಜಾಗೆಯಲ್ಲಿರುವ ಉದ್ಯಾನವನ."

ಗದಗ: ಮನಸ್ಸಿಗೆ ಆಹ್ಲಾದಕರ ಅನುಭವ ನೀಡುವ, ಪಟ್ಟಣದ ಅಂದ ಹೆಚ್ಚಿಸುವ ಗುಣ ಹೊಂದಿರುವ ಉದ್ಯಾನಗಳ ನಿರ್ವಹಣೆ ಜಿಲ್ಲೆಯಲ್ಲಿ ಅಷ್ಟಕ್ಕಷ್ಟೇ ಎಂದು ಹೇಳಬಹುದು. ಉದ್ಯಾನಗಳ ನಿರ್ವಹಣೆಗೆಂದು ಪ್ರತಿವರ್ಷ ಸಾಕಷ್ಟು ಅನುದಾನ ಮೀಸಲಿಡಲಾಗುತ್ತದೆ. ಆದರೂ, ಹೆಚ್ಚಿನ ಉದ್ಯಾನಗಳು ಸೊರಗಿವೆ. ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯ ಹಾಗೂ ಉದ್ಯಾನಗಳ ಬಗ್ಗೆ ಜನರಿಗೆ ಇರುವ ಅಸಡ್ಡೆ ಮನೋಭಾವ ಇದಕ್ಕೆ ಕಾರಣವಾಗಿದೆ.

ಗದಗ ನಗರದಲ್ಲಿ ಒಟ್ಟು 31 ಉದ್ಯಾನಗಳಿದ್ದು, ಹೆಚ್ಚಿನವು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಕೆಲವು ಉದ್ಯಾನಗಳಲ್ಲಿ ಗಿಡಗಳ ನಿರ್ವಹಣೆ ಸರಿಯಿಲ್ಲ. ಮತ್ತೆ ಕೆಲವು ಉದ್ಯಾನಗಳಲ್ಲಿ ಅಳವಡಿಸಿರುವ ಆಟಿಕೆಗಳನ್ನು ಸಾರ್ವಜನಿಕರು ಮುರಿದು ಹಾಕಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸರಿ ಇಲ್ಲ. ಇಷ್ಟೆಲ್ಲ ಇಲ್ಲಗಳ ನಡುವೆಯೂ ಇಲ್ಲಿನ ಜನರು ಉದ್ಯಾನವನ್ನು ಸಂಜೆಯ ವಾಯು ವಿಹಾರಕ್ಕೆ ಬಳಸುತ್ತಾರೆ. ಪುಟ್ಟ ಮಕ್ಕಳನ್ನು ಉದ್ಯಾನಕ್ಕೆ ಕರೆತಂದು ಆಟವಾಡಿಸಿ ಖುಷಿ ಪಡುತ್ತಾರೆ.

‘ಅಮೃತ್‌ ಯೋಜನೆ ಅಡಿಯಲ್ಲಿ ಎಂಟು ಉದ್ಯಾನ ಹಾಗೂ ನಗರಸಭೆ ವತಿಯಿಂದ 23 ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ನಗರ ವ್ಯಾಪ್ತಿಯಲ್ಲಿರುವ ಹೆಚ್ಚಿನ ಉದ್ಯಾನಗಳು ಉತ್ತಮವಾಗಿವೆ. ನಿರ್ವಹಣೆಯನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ವಹಿಸಲಾಗಿದ್ದು, ಅವರಿಗೆ ಪ್ರತಿ ತಿಂಗಳೂ ಇಂತಿಷ್ಟು ಎಂದು ಗೌರವಧನ ನೀಡಲಾಗುತ್ತದೆ’ ಎಂದು ಗದಗ–ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ತಿಳಿಸಿದರು.

ADVERTISEMENT
ಹೆಲ್ತ್‌ ಕ್ಯಾಂಪ್‌ನಲ್ಲಿರುವ ಉದ್ಯಾನದ ಪುಟ್ಟ ತೊರೆಯಲ್ಲಿ ಕಸ ಕಟ್ಟಿಕೊಂಡಿರುವುದು.

ಬಡಾವಣೆಗಳು ಬೆಳೆಯುತ್ತಿವೆ, ಗಿಡಗಳು ಚಿಗುರುತ್ತಿಲ್ಲ

ಗಜೇಂದ್ರಗಡ ಪಟ್ಟಣ ಬೆಳೆದಂತೆಲ್ಲ ಸುತ್ತಲಿನ ಜಮೀನುಗಳು ಬಡಾವಣೆಗಳಾಗಿ ಮಾರ್ಪಾಡಾಗಿ ಅಲ್ಲಿ ವಸತಿ ಸಮುಚ್ಚಯಗಳು ತಲೆ ಎತ್ತುತ್ತಿವೆ. ಆದರೆ, ಹೊಸ ಬಡಾವಣೆಗಳಲ್ಲಿ ಮೂಲಸೌಲಭ್ಯ ನಿರ್ಮಿಸುವುದರ ಜೊತೆಗೆ ಪ್ರತಿ ನಿವೇಶನಕ್ಕೊಂದು ಮರ ನೆಡಬೇಕು ಎಂಬ ನಿಯಮವಿದೆ. ಆದರೆ ಸ್ಥಳಿಯ ಆಡಳಿತದ ನಿರ್ಲಕ್ಷ್ಯದಿಂದ ಈ ಉದ್ಯಾನಗಳಲ್ಲಿ ಗಿಡಗಳು ಮಾತ್ರ ಬೆಳೆಯುತ್ತಿಲ್ಲ.

ಪಟ್ಟಣದ ಸುತ್ತಲಿನ ಹಾಗೂ ಮುಖ್ಯರಸ್ತೆಗೆ ಹೊಂದಿಕೊಂಡಿ ರುವ ರಾಮಾಪೂರ, ರಾಜೂರ, ಕುಂಟೋಜಿ, ಸೂಡಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಬರುವ ಜಮೀನುಗಳನ್ನು ವಸತಿ ಉದ್ದೇಶಕ್ಕಾಗಿ ಪರಿವರ್ತಿಸುತ್ತಿದ್ದಾರೆ. ಶೇ 60ರಷ್ಟು ನಿವೇಶನಗಳನ್ನು ಮಾಲೀಕರಿಗೆ ಹಸ್ತಾಂತರಿಸಿ, ಶೇ 40ರಷ್ಟು ನಿವೇಶನಗಳನ್ನು ಮೂಲಸೌಲಭ್ಯ, ನಾಗರಿಕ ಸೌಲಭ್ಯ ಹಾಗೂ ಉದ್ಯಾನ ಅಭಿವೃದ್ಧಿಯಾದ ನಂತರ ಹಸ್ತಾಂತರಿಸಬೇಕು. ಆದರೆ ಬಹುತೇಕ ಕಡೆಗಳಲ್ಲಿ ಈ ನಿಯಮಗಳನ್ನು ಗಾಳಿಗೆ ತೂರಿ ಹಸ್ತಾಂತರಿಸಲಾಗುತ್ತಿದೆ. ಅಲ್ಲದೆ ನಾಗರಿಕ ಸೌಲಭ್ಯ ಹಾಗೂ ಉದ್ಯಾನಕ್ಕೆ ಮೀಸಲಿಟ್ಟ ಈ ಜಾಗಗಳನ್ನು ನಕಲಿ ಸಂಘ-ಸಂಸ್ಥೆಗಳ ಹೆಸರಿನಲ್ಲಿ ಅಧಿಕಾರಿಗಳು ಪ್ರಭಾವಿಗಳ ಹೆಸರಿಗೆ ನೋಂದಾಯಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಶಿರಹಟ್ಟಿ: ಸಾರ್ವಜನಿಕ ಉಪಯೋಗಕ್ಕೆ ಬಾರದ ಉದ್ಯಾನ

ಶಿರಹಟ್ಟಿ ತಾಲ್ಲೂಕು ಕೇಂದ್ರವಾಗಿ ದಶಕಗಳೇ ಕಳೆದರೂ ಪಟ್ಟಣದಲ್ಲಿ ಹಸಿರಿನಿಂದ ಕಂಗೊಳಿಸುವ ಒಂದೇ ಒಂದು ಉದ್ಯಾನ ಕೂಡ ಇಲ್ಲ. ಪಟ್ಟಣದಲ್ಲಿ ಸುಮಾರು 30 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು, ಐದಾರು ಹೊಸ ಬಡಾವಣೆಗಳು ನಿರ್ಮಾಣವಾಗಿದ್ದರೂ ಉದ್ಯಾನಗಳನ್ನು ನಿರ್ಮಿಸುವಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಪಟ್ಟಣದ ಬಸವೇಶ್ವರ ನಗರದಲ್ಲಿರುವ ಉದ್ಯಾನದ ಅಭಿವೃದ್ಧಿಗಾಗಿ 2015ರಲ್ಲಿ ಶಿರಹಟ್ಟಿ ಪಟ್ಟಣ ಪಂಚಾಯ್ತಿ ವತಿಯಿಂದ ಒಟ್ಟು 5.72 ಲಕ್ಷ ಖರ್ಚು ಮಾಡಲಾಗಿದೆ. ಆದರೆ, ಸರಿಯಾದ ನಿರ್ವಹಣೆಯಿಲ್ಲದೆ ಉದ್ಯಾನದ ತುಂಬೆಲ್ಲಾ ಮುಳ್ಳು ಕಂಟಿಗಳು ಬೆಳೆದು ಸ್ಮಶಾನದಂತೆ ಭಾಸವಾಗುತ್ತಿದೆ.

ಶಿರಹಟ್ಟಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಉದ್ಯಾನ ವನ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವುದು

ಪಟ್ಟಣದಲ್ಲಿ ಹೊಸ ಬಡಾವಣೆಗಳಾಗಿ ನಿರ್ಮಾಣವಾಗಿರುವ ಶಬ್ಬೀರ ನಗರ, ನವನಗರ, ವಿದ್ಯಾನಗರ, ಫಕ್ಕೀರೇಶ್ವರ ಬಡಾವಣೆ, ವಿಜಯನಗರ, ಏಳುಕೋಟಿ ನಗರಗಳಲ್ಲಿ ಉದ್ಯಾನಕ್ಕಾಗಿ ನಿವೇಶನಗಳು ಮೀಸಲಿದ್ದರೂ ಅಧಿಕಾರಿಗಳು ಮಾತ್ರ ಉದ್ಯಾನ ನಿರ್ಮಾಣಕ್ಕೆ ಆಸಕ್ತಿ ವಹಿಸುತ್ತಿಲ್ಲ ಎಂದು ಗುಲಾಬಷ್ಯಾ ಮಕಾನದಾರ ಆರೋಪಿಸಿದರು.

ಸುಸಜ್ಜಿತ ಉದ್ಯಾನಗಳು ಬೇಕಿವೆ

ನರಗುಂದ ಪಟ್ಟಣದಲ್ಲಿ ಸುಸಜ್ಜಿತವಾದ ಉದ್ಯಾನಗಳಿಲ್ಲ. ಹೊಸ ಬಡಾವಣೆಗಳಲ್ಲಿ ಉದ್ಯಾನಕ್ಕೆ ಜಾಗ ಮೀಸಲಿದ್ದರೂ ನಿರ್ಮಾಣಗೊಂಡಿಲ್ಲ. ಪಟ್ಟಣದಲ್ಲಿ ಐದು ಉದ್ಯಾನಗಳಿದ್ದು ಅವುಗಳಲ್ಲಿ ಯಾವ ಉದ್ಯಾನ ಕೂಡ ತನ್ನತನ ತೋರಿ ಸಾರ್ವಜನಿಕರನ್ನು ಆಕರ್ಷಿಸುವ ರೀತಿಯಲ್ಲಿ ಇಲ್ಲ.

ನರಗುಂದ ಪುರಸಭೆ ಎದುರಿಗೆ ಇರುವ ಅಲ್ಪ ಜಾಗೆಯಲ್ಲಿರುವ ಉದ್ಯಾನವನ.

ವಯೋವೃದ್ಧರಿಗೆ, ಪರಿಸರ ಪ್ರೇಮಿಗಳಿಗೆ ವಾಯುವಿಹಾರಿಗಳಿಗೆ ಸುಸಜ್ಜಿತ ಉದ್ಯಾನಗಳಿಲ್ಲದೇ ಇರುವುದು ಬೇಸರ ತರಿಸಿದೆ. ವಿನಾಯಕ ನಗರದಲ್ಲಿರುವ ಉದ್ಯಾನದ ನಿರ್ವಹಣೆ ಸರಿ ಇಲ್ಲ. ಅನ್ಯ ಚಟುವಟಿಕೆಗಳ ತಾಣವಾಗುತ್ತಿದೆ.

ಪುರಸಭೆ ಎದುರಿನ ಅಲ್ಪ ಜಾಗಯಲ್ಲಿ ಉದ್ಯಾನ ನಿರ್ಮಾಣಗೊಂಡಿದೆ. ಆದರೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ . ಬೆಳಿಗ್ಗೆ ಹೊತ್ತು ವಾಯುವಿಹಾರಿಗಳಿಗೆ ಕೆಲಹೊತ್ತು ಮಾತ್ರ ವಿಶ್ರಾಂತಿ ಅವಕಾಶವಿದೆ. ಕೆಎಚ್‌ಬಿ ಕಾಲೊನಿ, ದಂಡಾಪುರದಲ್ಲಿರುವ ಉದ್ಯಾನಗಳು ಸ್ವಲ್ಪ ಮಟ್ಟಿಗೆ ಉತ್ತಮವಾಗಿವೆ.

ಉತ್ತಮ ನಿರ್ವಹಣೆಯಲ್ಲಿ ಉದ್ಯಾನಗಳು

ಮುಳಗುಂದ: ಜನಸಂಖ್ಯೆ ಬೆಳೆದಂತೆಲ್ಲ ನಗರಗಳ ಸಂಖ್ಯೆ ಹೆಚ್ಚುತ್ತಿದೆ. ಪಟ್ಟಣದಲ್ಲಿರುವ ಮೂರು ಉದ್ಯಾನಗಳ ಪೈಕಿ ಎರಡು ಉತ್ತಮ ನಿರ್ವಹಣೆಯಲ್ಲಿದ್ದು ಮಹಿಳೆಯರು ಮತ್ತು ಮಕ್ಕಳನ್ನ ಆಕರ್ಷಿಸಿವೆ. ಇನ್ನೂಂದು ಉದ್ಯಾನ ಅಭಿವೃದ್ದಿ ಹಂತದಲ್ಲಿದೆ.

ಪಂಚಾಯ್ತಿ ಎದುರಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ ಉದ್ಯಾನವನ್ನು 2010ರಲ್ಲಿ ಮತ್ತು ಗಣೇಶ ದೇವಸ್ಥಾನದ ಹತ್ತಿರದ ಉದ್ಯಾನವನ್ನು 2013ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಮಕ್ಕಳಿಗಾಗಿ ಜೋಕಾಲಿ, ಜಾರುಬಂಡಿ, ಆಟೋಟ ಏಣಿ ಮತ್ತು ವಿಶ್ರಾಂತಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ನೀರಿನ ಲಭ್ಯತೆ ಇದ್ದು ಆವರಣದಲ್ಲಿ ಆಲಂಕಾರಿಕ ಸಸಿಗಳನ್ನು ನಡೆಲಾಗಿದೆ. ಇದರಿಂದಾಗಿ ನಿತ್ಯ ಸಂಜೆ ಮಕ್ಕಳು ಮತ್ತು ಮಹಿಳೆಯರ ವಿಶ್ರಾಂತಿಗಾಗಿ ತಾಣವಾಗಿ ಮಾರ್ಪಟ್ಟಿದೆ.

ಸಿದ್ದೇಶ್ವರ ದೇವಸ್ಥಾನದ ಹತ್ತಿರದಲ್ಲಿನ ಉದ್ಯಾನ ಅಭಿವೃದ್ಧಿಪಡಿಸಿ ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಲಾಗಿದ್ದು ಅಲಂಕಾರಿಕ ಗಿಡಗಳು ನೆಡಲಾಗಿದೆ. ಇನ್ನು ಹೊಸದಾಗಿ ಗದಗ ರಸ್ತೆಯಲ್ಲಿ ಆಶ್ರಯ ಯೋಜನೆಗೆ ಖರೀದಿಸಿದ ಜಮೀನಿನಲ್ಲೂ 15ನೇ ಹಣಕಾಸು ಅನುದಾನದಲ್ಲಿ ಉದ್ಯಾನದ ಅಭಿವೃದ್ಧಿಗೆ ಕ್ರಿಯಾಯೋಜನೆ ಮಾಡಲಾಗಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಂ.ಎಸ್.ಬೆಂತೂರ ತಿಳಿಸಿದರು.

ಉದ್ಯಾನಗಳೇ ಇಲ್ಲದ ಊರು ಲಕ್ಷ್ಮೇಶ್ವರ

ಲಕ್ಷ್ಮೇಶ್ವರ: ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಕ್ಷ್ಮೇಶ್ವರದಲ್ಲಿ ಒಂದೂ ಉದ್ಯಾನ ಇಲ್ಲ. ಇಲ್ಲಿನ ಜನಸಂಖ್ಯೆ ಅಂದಾಜು 42 ಸಾವಿರ ಸಮೀಪದ ಇದ್ದು ಉದ್ಯಾನಗಳ ಅಗತ್ಯ ಇದೆ.

ಪಟ್ಟಣದ ಈಶ್ವರ ನಗರ, ಇಂದಿರಾನಗರ, ಅಂಬೇಡ್ಕರ್ ನಗರ, ಮುಕ್ತಿನಗರ ಸೇರಿದಂತೆ ಹತ್ತಾರು ಕಡೆ ಉದ್ಯಾನಕ್ಕಾಗಿ ಜಾಗ ಕಾಯ್ದಿರಿಸಲಾಗಿದೆ. ಆದರೆ, ಈವರೆಗೂ ಒಂದೇ ಒಂದು ಸುಸಜ್ಜಿತ ಉದ್ಯಾನ ಮಾಡುವ ಗೋಜಿಗೆ ಪುರಸಭೆ ಹೋಗಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ವಿಶ್ರಾಂತಿಗೆ ಜಾಗವೇ ಇಲ್ಲದಂತಾಗಿದೆ.

ಪಟ್ಟಣದ ನಿವಾಸಿಗಳನ್ನು ಹೊರತುಪಡಿಸಿ ಪ್ರತಿದಿನ ಹತ್ತಾರು ಸಾವಿರ ಜನರು ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಬಂದು ಹೋಗುತ್ತಾರೆ. ಹೀಗೆ ಬಂದವರು ಆರಾಮವಾಗಿ ವಿಶ್ರಾಂತಿ ಪಡೆದುಕೊಳ್ಳಲು ಸೂಕ್ತ ಜಾಗ ಇಲ್ಲ.

‘ದೊಡ್ಡ ಊರಾದ ಲಕ್ಷ್ಮೇಶ್ವರದಲ್ಲಿ ಒಂದೂ ಉದ್ಯಾನ ಇಲ್ಲ. ಕಾರಣ ಪುರಸಭೆ ಆದಷ್ಟು ಬೇಗನೆ ಉದ್ಯಾನ ನಿರ್ಮಿಸಲು ಕ್ರಮಕೈಗೊಳ್ಳಬೇಕು’ ಎಂಬುದು ಜನರ ಆಗ್ರಹವಾಗಿದೆ.

ಉದ್ಯಾನಗಳು ಕಾಣೆಯಾಗಿವೆ!

ನರೇಗಲ್: ಪಟ್ಟಣದ ಯಾವ ಬಡಾವಣೆಯಲ್ಲಿಯೂ ಉದ್ಯಾನ ಕಣ್ಣಿಗೆ ಕಾಣುವುದಿಲ್ಲ. ಇಲ್ಲಿನ ಹಲವು ಬಡಾವಣೆಗಳಲ್ಲಿ ಉದ್ಯಾನಗಳು ಇರುವ ಕುರಿತು ಪಟ್ಟಣ ಪಂಚಾಯ್ತಿಯ ದಾಖಲೆಯಲ್ಲಿದೆ. ಅಷ್ಟೇ ಅಲ್ಲದೇ ಅವುಗಳ ನಿರ್ವಹಣೆಗೆ ಪ್ರತಿ ವರ್ಷ ಹಣವನ್ನು ಮೀಸಲಿಡಲಾಗುತ್ತದೆ! ಅಭಿವೃದ್ಧಿ ಹೆಸರಿನಲ್ಲಿ ಪ್ರತಿ ವರ್ಷ ಟೆಂಡರ್‌ ಕರೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ, ಅವುಗಳಲ್ಲಿ ಯಾವ ಉದ್ಯಾನ ಕೂಡ ಇಂದಿಗೂ ಅಭಿವೃದ್ಧಿ ಕಂಡಿಲ್ಲ. ಹಸಿರಿನಿಂದ ಕಂಗೊಳಿಸುತ್ತಿಲ್ಲ. ನಿರ್ವಹಣೆಯ ಸಂಪೂರ್ಣ ವಿಫಲತೆಯಿಂದ ಇಂದು ಹಾಳು ಕೊಂಪೆಯಾಗಿ ಮಾರ್ಪಟ್ಟಿದ್ದು, ಹಂದಿ, ನಾಯಿ, ಪುಂಡ ಪೋಕರಿಗಳು ಹಾಗೂ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿವೆ. ಹಸಿರಾಗಿಸುವ ಉದ್ದೇಶದಿಂದ ಪಟ್ಟಣದ ಬುಲ್ಡೋಜರ್ ನಗರ, ಅನ್ನದಾನೇಶ್ವರ ಮಹಾವಿದ್ಯಾಲಯ ಪಕ್ಕದಲ್ಲಿರುವ ಟೀಚರ್ಸ್ ಕಾಲೊನಿ, ಈಶ್ವರ ನಗರ, ಪಟ್ಟಣ ಪಂಚಾಯ್ತಿ ಹತ್ತಿರ ಇರುವ ಭೂತನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಉದ್ಯಾನಗಳನ್ನು ನಿರ್ವಿುಸಲಾಗಿತ್ತು. ಆದರೆ, ಉದ್ಯಾನ ನಿರ್ಮಾಣ ಮಾಡಿ ನಿರ್ವಹಣೆ ಮರೆತ ಅಧಿಕಾರಿಗಳ ನಿರ್ಲಕ್ಷತನದಿಂದ ಉದ್ಯಾನಗಳಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿವೆ. ಎಲ್ಲೆಂದರಲ್ಲಿ ಕಸ ತುಂಬಿದೆ. ನರೇಗಲ್ ಪಟ್ಟಣದಲ್ಲಿ ಉದ್ಯಾನಗಳು ಕಾಣೆಯಾಗಿದ್ದು ಎಲ್ಲಿವೆ ಎಂದು ಹುಡುಕುವ ಪರಿಸ್ಥಿತಿ ಎದುರಾಗಿದೆ.

ನರೇಗಲ್ ಪಟ್ಟಣದ 3ನೇ ವಾರ್ಡಿನ ಬುಲ್ಡೋಜರ್ ನಗರದಲ್ಲಿ ಐದು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಉದ್ಯಾನವನ ಇಂದಿಗೂ ಉದ್ಘಾಟನೆ ಭಾಗ್ಯವನ್ನು ಕಂಡಿಲ್ಲ. ಒಳಗೆ ಮುಳ್ಳಿನ ಕಂಟಿಗಳು ಬೆಳೆದಿವೆ


ಅಂಕಿ ಅಂಶ

31- ಗದಗ ನಗರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನಗಳ ಸಂಖ್ಯೆ

₹22,44,000 ಉದ್ಯಾನಗಳ ನಿರ್ವಹಣೆಗೆ ಪ್ರತಿ ವರ್ಷ ವಿನಿಯೋಗಿಸುವ ಹಣ

(ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಶ್ರೀಶೈಲ ಕುಂಬಾರ, ಖಲೀಲಅಹ್ಮದ ಶೇಖ, ನಾಗರಾಜ ಎಸ್‌.ಹಣಗಿ, ಚಂದ್ರು ಎಂ.ರಾಥೋಡ್‌, ನಾಗರಾಜ ಎಸ್‌.ಹಲಕುರ್ಕಿ, ಚಂದ್ರಶೇಖರ ಭಜಂತ್ರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.