
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿನ ಹಲವು ಓಣಿಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಗ್ರಾಮದಲ್ಲಿನ ಚರಂಡಿಗಳು ಹೂಳು ತುಂಬಿಕೊಂಡಿದ್ದು, ಗ್ರಾಮದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ.
ಗ್ರಾಮದಲ್ಲಿರುವ ಮುಖ್ಯ ಚರಂಡಿಗಳು ಶಿಥಿಲಗೊಂಡಿದ್ದು, ಚರಂಡಿಗಳು ಹೂಳು ತುಂಬಿಕೊಂಡಿವೆ. ಗ್ರಾಮದಿಂದ ದಿಂಡೂರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಚರಂಡಿ ಹಾಗೂ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮುಂದಿನ ಮುಖ್ಯ ರಸ್ತೆ ಚರಂಡಿಗಳು ಶಿಥಿಲಗೊಂಡು ಕಟ್ಟಿಕೊಂಡಿದ್ದರಿಂದ ಚರಂಡಿಯ ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.
ಗ್ರಾಮ ಪಂಚಾಯಿತಿ ಕಚೇರಿಯಿಂದ ಬೇವಿನಕಟ್ಟಿ ಗ್ರಾಮದ ರಸ್ತೆಯಲ್ಲಿನ ಚರಂಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಹೂಳು ತುಂಬಿಕೊಂಡಿವೆ. ನಿರ್ವಹಣೆ ಕೊರತೆಯಿಂದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ಹೆಚ್ಚಾಗಿರುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಸೂಡಿ ರಸ್ತೆಯಲ್ಲಿರುವ ತಾಂಡಾ, ಜನತಾ ಪ್ಲಾಟ್‌ನಲ್ಲಿ ಒಂದು ಗಂಟೆ ಮಾತ್ರ ನೀರು ಬಿಡುತ್ತಿರುವುದರಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅಲ್ಲದೆ ಸಾರ್ವಜನಿಕ ನಲ್ಲಿ ಅಳವಡಿಸುವಂತೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದರು.
ಲಂಬಾಣಿ ತಾಂಡಾದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹೊಸದಾಗಿ ಪೈಪ್ ಲೈನ್ ಮಾಡಬೇಕಿದೆ. ಅಳಬಸವೇಶ್ವರ ಜಾತ್ರೆ ಸಂದರ್ಭದಲ್ಲಿ ಚರಂಡಿಗಳ ಹೂಳು ತೆಗೆಸಲಾಗಿದೆ. ಗ್ರಾಮಸ್ಥರು ಕಸ ಇನ್ನಿತರ ತ್ಯಾಜ್ಯಗಳನ್ನು ಚರಂಡಿಗಳಿಗೆ ಎಸೆಯುವುದರಿಂದ ಮತ್ತೆ ಹೂಳು ತುಂಬಿಕೊಳ್ಳುತ್ತಿದೆಎಸ್.ಎಸ್.ರಿತ್ತಿ ಪಿಡಿಒ ಲಕ್ಕಲಕಟ್ಟಿ
ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ‘ಶಾಸಕರು ₹70 ಲಕ್ಷ ಅನುದಾನದಲ್ಲಿ ಲಕ್ಕಲಕಟ್ಟಿ ಗ್ರಾಮದಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಮರಗಟ್ಟಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಬೆನಕನವಾರಿಯವರ ಓಣಿ ಮಾರನಬಸರಿಯವರ ಓಣಿ ಜನತಾ ಪ್ಲಾಟ್ ಆನಂದ ನಗರ ಗಂಜಿಹಾಳವರ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆ ಶಿಥಿಲಗೊಂಡಿರುವ ಚರಂಡಿಗಳ ದುರಸ್ಥಿ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದುʼ ಎಂದು ಲಕ್ಕಲಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಬೆನಕನವಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.