ADVERTISEMENT

ಉತ್ಖನನ ಎಂಟು ದಿನಗಳು ಪೂರ್ಣ; ಪಚ್ಚೆ ಕಲ್ಲುಪತ್ತೆ

ಪ್ರತಿಭಟನೆ ಮಾಡಲು ಬಂದವರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸ್ಥಳೀಯ ಜನತೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 4:36 IST
Last Updated 24 ಜನವರಿ 2026, 4:36 IST
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಕೆಲಸ ಶುಕ್ರವಾರಕ್ಕೆ ಎಂಟು ದಿನಗಳನ್ನು ಪೂರೈಸಿದೆ
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಕೆಲಸ ಶುಕ್ರವಾರಕ್ಕೆ ಎಂಟು ದಿನಗಳನ್ನು ಪೂರೈಸಿದೆ   

ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಕಾರ್ಯ ಎಂಟು ದಿನಗಳನ್ನು ಪೂರೈಸಿದ್ದು, ದಿನದ ಅಂತ್ಯಕ್ಕೆ ಮೂಳೆ ತುಂಡುಗಳು, ಹಸಿರು ಬಣ್ಣದ ಚಿಕ್ಕ ಕಲ್ಲು ಹಾಗೂ ಕಬ್ಬಿಣದ ತುಂಡು ಸಿಕ್ಕಿದೆ.

ರಾಜ್ಯ ಪುರಾತತ್ವ ಇಲಾಖೆ, ಜಿಲ್ಲಾಡಳಿತ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ಉತ್ಖನನ ನಡೆಯುತ್ತಿದ್ದು, ಈವರೆಗೆ ಪ್ರಾಚೀನ ಅವಶೇಷಗಳು, ಮೂಳೆಗಳು, ಕವಡೆಗಳು, ಒಡೆದ ಮಡಿಕೆ ಚೂರುಗಳು, ನಾಗಶಿಲೆ, ಶಿವಲಿಂಗದ ಪಾಣಿಪೀಠ, ಜಿನ ಚಿತ್ರವಿರುವ ಕಲ್ಲು, ಟೆರ‍್ರಾಕೋಟಾ ಬಿಲ್ಲೆ ಸೇರಿದಂತೆ ಅನೇಕ ವಸ್ತುಗಳು ಪತ್ತೆ ಆಗಿವೆ.

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಕೂಲಿ ಹೆಚ್ಚಳ ಹಾಗೂ ಮೂಲಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ ನೆರವು ಕಾರ್ಮಿಕರ ಸಂಘ ಅಲ್ಲಿ ಪ್ರತಿಭಟನೆ ನಡೆಸಲು ಮುಂದಾಯಿತು. ಈ ವೇಳೆ ಸ್ಥಳೀಯರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ADVERTISEMENT

ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶ್ವತ್ಥ್‌ ಮರಿಗೌಡರ ಮತ್ತು ಅವರ ತಂಡ ಉತ್ಖನನ ನಡೆಯುವ ಸ್ಥಳಕ್ಕೆ ಬಂದು, ಕೆಲಸ ಸ್ಥಗಿತಗೊಳಿಸಲು ಯತ್ನಿಸಿದರು. ಈ ವೇಳೆ ಪ್ರತಿಭಟನಕಾರರ ವಿರುದ್ಧ ತಿರುಗಿಬಿದ್ದ ಲಕ್ಕುಂಡಿ ಗ್ರಾಮಸ್ಥರು, ‘ಲಕ್ಕುಂಡಿಯ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಕೆಲಸ ನಡೆಯುತ್ತಿದೆ. ಈ ಅಭಿವೃದ್ಧಿ ಕಾರ್ಯವನ್ನು ಕೆಡಿಸುವ ಉದ್ದೇಶದಿಂದಲೇ ನೀವು ಬಂದಿದ್ದೀರಿ’ ಎಂದು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಆದೇಶದಂತೆ ಉತ್ಖನನ ನಡೆಯುವ ಸ್ಥಳವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ‘ಅನುಮತಿ ಇಲ್ಲದೆ ನಿಷೇಧಿತ ಸ್ಥಳಕ್ಕೆ ಹೇಗೆ ಬಂದಿರಿ?’ ಕೆಲಸ ಹಾಳು ಮಾಡಬೇಡಿ, ಏನಾದರೂ ಸಮಸ್ಯೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಎಂದು ಹೇಳಿ ಪ್ರತಿಭಟನಕಾರರನ್ನು ಸ್ಥಳದಿಂದ ಹೊರಕ್ಕೆ ಕಳಿಸಿದರು.

ಗದಗ ಗ್ರಾಮೀಣ ಪೊಲೀಸರು ಮಾತಿನ ಚಕಮಕಿ ತಡೆದು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಶ್ವತ್ಥ್‌ ಮರಿಗೌಡರ ಹಾಗೂ ಸದಸ್ಯರಾದ ವೆಂಕಟೇಶ, ರವಿರಾಜ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ಖನನದ ವೇಳೆ ಸಿಕ್ಕ ಪಚ್ಚೆ ಕಲ್ಲು

ಪ್ರಜ್ವಲ್‌ ಪ್ರಾಮಾಣಿಕತೆಗೆ ಬೆರಗಾದ ವಿದೇಶಿ ಪ್ರವಾಸಿಗರು

ಶುಕ್ರವಾರ ಲಕ್ಕುಂಡಿಗೆ ಭೇಟಿ ನೀಡಿದ್ದ 15 ಮಂದಿ ಇದ್ದ ವಿದೇಶಿಗರ ತಂಡ ಇಲ್ಲಿನ ಐತಿಹಾಸಿಕ ಶ್ರೀಮಂತಿಕೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿತು. ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಹಿಂದಿರುಗಿಸಿದ ಪ್ರಜ್ವಲ್‌ ರಿತ್ತಿ ಬಗ್ಗೆ ತಿಳಿದುಕೊಂಡ ಫ್ರಾನ್ಸ್‌ ಪ್ರಜೆಗಳು ಅವನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಕೆಲಸವನ್ನು ಕೌತುಕದಿಂದ ವೀಕ್ಷಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.