ಲಕ್ಷ್ಮೇಶ್ವರ: ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಬಸ್‍ನಲ್ಲಿ ಪ್ರಯಾಣಿಸುವ ಶಾಲಾ ಕಾಲೇಜು ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಮಹಿಳಾ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಬಸ್‍ಗಳನ್ನು ಯೋಜಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕಡಿಮೆ ಬಸ್‍ಗಳಲ್ಲಿ ಪ್ರಯಾಣಿಕರು ಪ್ರಯಾಣಿಸಲು ತೊಂದರೆ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದಿಂದ ಹಾಳಾದ ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಗೆ ಅನುದಾನ ಬಂದಿಲ್ಲ. ಹೀಗಾಗಿ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಿ ಕೆಲ ಬಸ್‍ಗಳು ಮೂಲೆ ಸೇರುತ್ತಿದ್ದು, ಇದರಿಂದಾಗಿ ಬಸ್‍ಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಹೀಗಾಗಿ ಓಡಾಡುವ ಬಸ್‍ಗಳಲ್ಲಿ ಪ್ರಯಾಸದಿಂದ ತಿರುಗಾಡುತ್ತಿದ್ದಾರೆ.
ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಬಸ್‍ಗಳು ಜನರಿಂದ ತುಂಬಿ ತುಳುಕುತ್ತಿದ್ದು, ಶಾಲಾ ಕಾಲೇಜು ಮಕ್ಕಳು ಅನಿವಾರ್ಯವಾಗಿ ಬಸ್ ಬಾಗಿಲಿಗೆ ಜೋತು ಬಿದ್ದು ಊರಿಗೆ ಹೋಗಬೇಕಾಗಿದ್ದು, ಆಯತಪ್ಪಿ ಬಿದ್ದರೆ ಮಕ್ಕಳ ಪ್ರಾಣಕ್ಕೆ ಸಂಚಕಾರ ಉಂಟಾಗುವ ಭಯ ಸೃಷ್ಟಿಯಾಗಿದೆ.
‘ಎರಡು ವರ್ಷದಿಂದ ಬಸ್‍ನ ಬಾಗಿಲಿಗೆ ಜೋತು ಬಿದ್ದು ಊರಿಗೆ ಹೋಗಬೇಕಾಗೇತಿ’ ಎಂದು ಕಾಲೇಜು ವಿದ್ಯಾರ್ಥಿ ಬಸವರಾಜ ಬೇಸರ ವ್ಯಕ್ತಪಡಿಸಿದರು.
‘ಸರ್ಕಾರ ಏನೋ ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಘೋಷಣೆ ಮಾಡುತ್ತಿದೆ. ಆದರೆ, ಇನ್ನಷ್ಟು ಬಸ್‍ಗಳನ್ನು ವ್ಯವಸ್ಥೆ ಮಾಡಲು ಅದಕ್ಕೆ ಆಗುತ್ತಿಲ್ಲ’ ಎಂದು ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.