ADVERTISEMENT

ಲಕ್ಷ್ಮೇಶ್ವರ: ಹೆಸರು ಬೆಳೆ- ಹಸಿರು ಬಂಗಾರಕ್ಕೆ ಹಳದಿ ರೋಗ

ಹೆಸರು ಬೆಳೆಯ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ

ನಾಗರಾಜ ಎಸ್‌.ಹಣಗಿ
Published 15 ಜುಲೈ 2025, 6:53 IST
Last Updated 15 ಜುಲೈ 2025, 6:53 IST
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಬೆಳೆದಿರುವ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಬೆಳೆದಿರುವ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿರುವುದು   

ಲಕ್ಷ್ಮೇಶ್ವರ: ಹೆಸರು ಬೆಳೆ- ಹಸಿರು ಬಂಗಾರಕ್ಕೆ ಹಳದಿ ರೋಗ

ಲಕ್ಷ್ಮೇಶ್ವರ: ಕೃಷಿ ವಲಯದಲ್ಲಿ ಹಸಿರು ಬಂಗಾರ ಎಂದೇ ಕರೆಸಿಕೊಳ್ಳುವ ಹೆಸರು ಬೆಳೆಗೆ ಇದೀಗ ಹಳದಿ ರೋಗ ಕಾಣಿಸಿಕೊಂಡಿದ್ದು, ಕಷ್ಟಪಟ್ಟು ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಮೂಡಿದೆ.

ಪ್ರತಿವರ್ಷ ಸಾವಿರಾರು ಹೆಕ್ಟೇರ್‌ನಲ್ಲಿ ಹೆಸರು ಬೆಳೆಯಲಾಗುತ್ತದೆ. ಈ ವರ್ಷ ಉತ್ತಮವಾಗಿ ಸುರಿದ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆಗೆ ಖುಷಿಗೊಂಡ ರೈತರು ಹೆಸರು, ಗೋವಿನಜೋಳ, ಬಿಟಿ ಹತ್ತಿ, ಹೈಬ್ರೀಡ್ ಜೋಳದ ಬಿತ್ತನೆ ಕೈಗೊಂಡಿದ್ದರು. ಉತ್ತಮ ತೇವಾಂಶದಿಂದಾಗಿ ಹೆಸರು ಚೆನ್ನಾಗಿ ಬೆಳೆದಿದೆ. ಆದರೆ ಸೊಗಸಾಗಿ ಬೆಳೆಯುತ್ತಿರುವ ಬೆಳೆಯಲ್ಲಿ ಈಗ ಹಳದಿ ರೋಗ ಕಾಣಿಸಿಕೊಂಡಿದ್ದು ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ರೈತರು ತಿಳಿಸಿದ್ದಾರೆ.

ADVERTISEMENT

ತಾಲ್ಲೂಕಿನ ಲಕ್ಷ್ಮೇಶ್ವರ, ಆದರಹಳ್ಳಿ, ನಾದಿಗಟ್ಟಿ, ಹರದಗಟ್ಟಿ, ಉಳ್ಳಟ್ಟಿ, ಮುನಿಯಾನ ತಾಂಡಾ, ದೊಡ್ಡೂರು, ಸೋಗಿವಾಳ, ನೆಲೂಗಲ್ಲ, ಸೇರಿದಂತೆ ಇತರೇ ಭಾಗದಲ್ಲಿ ಬೆಳೆದಿರುವ ಹೆಸರು ಬೆಳೆಗೆ ಹಳದಿ ರೋಗ ಗಂಟು ಬಿದ್ದಿದೆ.

‘ಹಳದಿ ರೋಗ ವೈರಸ್‍ನಿಂದ ಬರುವ ರೋಗವಾಗಿದ್ದು ಸಾಮೂಹಿಕವಾಗಿ ಇದರ ನಿಯಂತ್ರಣಕ್ಕೆ ರೈತರು ಮುಂದಾಗಬೇಕು. ಹಳದಿ ರೋಗಕ್ಕೆ ವೈಟ್ ಪ್ಲೇ (ಬಿಳಿನೊಣ) ಕಾರಣವಾಗಿದ್ದು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ರೋಗ ವೈರಾಣು ಮೂಲಕ ಗಿಡದಿಂದ ಗಿಡಕ್ಕೆ ಹರಡುತ್ತದೆ. ರೋಗದ ನಿಯಂತ್ರಣಕ್ಕಾಗಿ ರೈತರು ರೋಗಬಾಧೆಗೆ ತುತ್ತಾದ ಗಿಡದ ಎಲೆಗಳು ಮತ್ತು ಭಾಗವನ್ನು ಕಿತ್ತು ಮಣ್ಣಲ್ಲಿ ಮುಚ್ಚಬೇಕು’ ಎಂದು ಲಕ್ಷ್ಮೇಶ್ವರದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ ನರಸಮ್ಮನವರ ಸಲಹೆ ನೀಡಿದ್ದಾರೆ.

ರೈತರು ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಕೂಡ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ರೋಗ ನಿಯಂತ್ರಣಕ್ಕೆ ಬಾರದಿದ್ದರೆ ಬೆಳೆ ಬೆಳೆಯಲು ಈವರೆಗೆ ಖರ್ಚು ಮಾಡಿರುವ ಹಣ ವಾಪಸ್ ಬರುವ ಭರವಸೆಯೂ ಇಲ್ಲ

-ಶಂಕರ ಲಮಾಣಿ ಹರದಗಟ್ಟಿ ಗ್ರಾಮದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.