ಲಕ್ಷ್ಮೇಶ್ವರ: ಸತ್ಯ ಮನುಷ್ಯ ಜೀವನವನ್ನು ಬದಲಿಸುತ್ತದೆ. ನಮ್ಮ ನಡೆ ನುಡಿಗಳು ಯಾವಾಗಲೂ ಸತ್ಯದ ಪರವಾಗಿರಬೇಕು. ಸುಳ್ಳಿನ ಜೊತೆ ದುಷ್ಟಶಕ್ತಿ ಇದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ’ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಗುರುವಾರ ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳ 43ನೇ ವರ್ಷದ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ ಸಮಾರಂಭದ ಸಾನ್ನಿಧ್ಯದಿಂದ ಅವರು ಮಾತನಾಡಿದರು.
‘ಬದುಕಿ ಬಾಳುವ ಜೀವಾತ್ಮರಿಗೆ ಭಗವಂತ ಕೊಟ್ಟ ಕೊಡುಗೆ ಅಪಾರ. ಅರಿವುಳ್ಳ ಮಾನವ ಜನ್ಮ ಸಾರ್ಥಕಪಡಿಸಿಕೊಳ್ಳಲು ಶ್ರಮ ಮತ್ತು ಸಾಧನೆ ಅಗತ್ಯ. ಒಳ್ಳೆಯವರಿಗೆ ಇರುವಷ್ಟು ವೈರಿಗಳು ದುರ್ಜನರಿಗೆ ಇರುವುದಿಲ್ಲ. ದುರ್ಜನರಿಗೆ ಇರುವಷ್ಟು ಸ್ನೇಹಿತರು ಒಳ್ಳೆಯವರಿಗೆ ಇರುವುದಿಲ್ಲ. ಮೌಲ್ಯಗಳ ಉಳಿವು ಅಳಿವು ಮಾನವನ ಆಚರಣೆಯಲ್ಲಿವೆ. ನೀತಿವಂತರು ನಿರಾಶರಾಗದೇ ನೋವು ನುಂಗಿ ನಲಿವನ್ನು ಹೊಂದಿ ಮುನ್ನಡೆಯಬೇಕು’ ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ವಿಚಾರ, ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನಾ ಜನರನ್ನು ನಾಸ್ತಿಕರನ್ನಾಗಿ ಮಾಡಬಾರದು. ತಾಳ್ಮೆ ಮತ್ತು ಸಹನೆ ಗುಣಗಳು ಮನುಷ್ಯನಲ್ಲಿ ಇಲ್ಲದಿರುವುದೇ ಇಂದಿನ ಆಶಾಂತಿ ಮತ್ತು ಅತೃಪ್ತಿಗಳಿಗೆ ಕಾರಣ. ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಸಂಕಲ್ಪದಂತ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆಯ ಕಾಲ ಇದೀಗ ಕೂಡಿ ಬರುತ್ತಿದೆ. ಈ ಮಹತ್ಕಾರ್ಯಕ್ಕಾಗಿ ತಮ್ಮೆಲ್ಲರ ಸೇವೆ ಸದಾ ಮೀಸಲಾಗಿರಲಿ’ ಎಂದರು.
ಸಮಾರಂಭ ಉದ್ಘಾಟಿಸಿದ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಶಾಮನೂರ ಮಾತನಾಡಿ, ‘ಪರಮ ಪೂಜ್ಯ ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ 43ನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳುವ ಸೌಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ. ಅವರು ಸಾರಿದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ನಾಡಿನ ಜನಮನದಲ್ಲಿ ಸದಾ ಹಸಿರಾಗಿದೆ’ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಕೊಡಮಾಡಿದ ಶ್ರೀರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿಯನ್ನು ಡಾ.ಪ್ರಭಾ ಸ್ವೀಕರಿಸಿದರು.
ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು, ಬಂಕಾಪುರ ರೇವಣಸಿದ್ದ ಶ್ರೀ, ಸುಳ್ಳ ಶಿವಸಿದ್ಧರಾಮೇಶ್ವರ ಶ್ರೀ, ಬನ್ನಿಕೊಪ್ಪ ಸುಜ್ಞಾನದೇವ ಶ್ರೀ, ಸಿದ್ಧರಬೆಟ್ಟದ ವೀರಭದ್ರ ಶ್ರೀ, ಮಳಲಿಮಠದ ಡಾ.ನಾಗಭೂಷಣ ಶ್ರೀ, ಚಳಗೇರಿ ವೀರಸಂಗಮೇಶ್ವರ ಶ್ರೀ, ಕಲಘಟಗಿ ರೇವಣಸಿದ್ದೇಶ್ವರ ಸ್ವಾಮೀಜಿ, ಸವದತ್ತಿ ಮಲ್ಲಿಕಾರ್ಜುನ ಶ್ರೀ, ಶಿರಕೋಳ ಗುರುಸಿದ್ದೇಶ್ವರ ಸ್ವಾಮೀಜಿ, ಗಿರಿಸಾಗರ ರುದ್ರಮುನಿ ಸ್ವಾಮೀಜಿ, ಬಿಲ್ ಕೆರೂರು ಸಿದ್ದಲಿಂಗ ಶಿವಾಚಾರ್ಯರು, ಪುಣ್ಯಕೋಟಿ ಮಠದ ಜಗದೀಶ್ವರ ಸ್ವಾಮೀಜಿ, ಲಕ್ಷೇಶ್ವರದ ಮಳೆಮಲ್ಲಿಕಾರ್ಜುನ ಸ್ವಾಮೀಜಿ, ಶಿವಗಂಗೆ ಮಲಯ ಶಾಂತಮುನಿ ಶಿವಾಚಾರ್ಯರು, ನಾಗಣಸೂರು ಶ್ರೀಕಂಠ ಶಿವಾಚಾರ್ಯರು, ಕಲಾದಗಿ ಗಂಗಾಧರ ಶಿವಾಚಾರ್ಯರು, ಮಂಗಳೂರು ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.
ಸಮಾರಂಭಕ್ಕಿಂತ ಮೊದಲು ಲಿಂ.ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಬಾಳೆಹೊನ್ನೂರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ವಿಠಲಾಪುರ ಹಿರೇಮಠದ ಗಂಗಾಧರಸ್ವಾಮಿ ಅವರಿಂದ ಭಕ್ತಿಗೀತೆ ಜರುಗಿತು. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಮಲೆಬೆನ್ನೂರಿನ ಸದ್ಭಕ್ತರು ಅನ್ನದಾಸೋಹ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.