ADVERTISEMENT

ಲಕ್ಷ್ಮೇಶ್ವರ: ಮೆಕ್ಕೆಜೋಳದ ಖರೀದಿ ಕೇಂದ್ರಕ್ಕೆ ಅಧಿಕೃತ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 4:49 IST
Last Updated 2 ಡಿಸೆಂಬರ್ 2025, 4:49 IST
ಲಕ್ಷ್ಮೇಶ್ವರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶ್ರೀಧರ ಎನ್. ಅವರು ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು
ಲಕ್ಷ್ಮೇಶ್ವರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶ್ರೀಧರ ಎನ್. ಅವರು ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು   

ಲಕ್ಷ್ಮೇಶ್ವರ: ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಜಿಲ್ಲಾಧಿಕಾರಿ ಶ್ರೀಧರ ಎನ್. ಅವರು ಸೋಮವಾರ ಲಕ್ಷ್ಮೇಶ್ವರದಲ್ಲಿ ರೈತರು ನಡೆಸುತ್ತಿರುವ ಹೋರಾಟ ವೇದಿಕೆಯಲ್ಲಿ ಹಸಿರು ರಿಬ್ಬನ್ ಕತ್ತರಿಸುವುದರ ಮೂಲಕ ಚಾಲನೆ ನೀಡಿದರು.

ಲಕ್ಷ್ಮೇಶ್ವರದಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಸಮಗ್ರ ರೈತಪರ ಸಂಘಟನಗಳು ಕಳೆದ ಹದಿನೆಂಟು ದಿನಗಳಿಂದ ಪಟ್ಟಣದ ಶಿಗ್ಲಿ ಕ್ರಾಸ್‍ನ ಸಂಗೊಳ್ಳಿ ರಾಯಣ್ಣ ವೃತ್ತದ ಹತ್ತಿರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು.

ಧರಣಿಗೆ ಬೆಂಬಲ ವ್ಯಕ್ತಪಡಿಸಿ ಆದರಹಳ್ಳಿ ಕುಮಾರ ಮಹಾರಾಜರಂತೂ ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇ ನಡೆಸಿದ್ದರು. ಅವರೊಂದಿಗೆ ಕೆಲ ರೈತರು ಸರಣಿ ಉಪವಾಸ ಕೈಗೊಂಡಿದ್ದರು. ಅಹೋರಾತ್ರಿ ಧರಣಿ ಸಮಯದಲ್ಲಿ ರೈತರು ದೀಡ್ ನಮಸ್ಕಾರ, ಬಾರ್‍ಕೋಲು, ರಸ್ತೆ ಮೇಲೆ ಬುತ್ತಿ ಊಟ, ಮೆಕ್ಕೆಜೋಳ ರಸ್ತೆ ಸುರುಯುವುದು ಸೇರಿ ವಿಭಿನ್ನ ರೀತಿಯ ಹೋರಾಟ ನಡೆಸಿದ್ದರು. ಕೊನೆಗೂ ರೈತರ ಹೋರಾಟಕ್ಕೆ ಸರ್ಕಾರ ಮಣಿದಿದ್ದು ಇಂದಿನಿಂದ ಖರೀದಿ ಕೇಂದ್ರ ಶುರು ಮಾಡಿದ್ದು ಹೋರಾಟಗಾರರಲ್ಲಿ ಸಂತಸ ಮೂಡಿಸಿದೆ.

ADVERTISEMENT

ಜಿಲ್ಲಾಧಿಕಾರಿ ಶ್ರೀಧರ ಎನ್. ಅವರು ನೋಂದಣಿ ಮಾಡಿಸಿಕೊಂಡ ರೈತರಿಗೆ ಪ್ರಮಾಣ ನೀಡಿ ಮಾತನಾಡಿ, ‘ಸದ್ಯ ಒಬ್ಬ ರೈತರಿಂದ ಐದು ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಹೀಗಾಗಿ ಐದು ಕ್ವಿಂಟಲ್‍ಗಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಯಲಿದೆ’ ಎಂದು ಹೇಳಿದರು.

ಹೋರಾಟದ ನೇತೃತ್ವ ವಹಿಸಿದ್ದ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ, ನಾಗರಾಜ ಚಿಂಚಲಿ, ಹೊನ್ನಪ್ಪ ವಡ್ಡರ ಮಾತನಾಡಿ ‘ಒಬ್ಬ ರೈತರಿಂದ ಕನಿಷ್ಠ ನಲವತ್ತು ಕ್ವಿಂಟಲ್‍ನಷ್ಟು ಮೆಕ್ಕೆಜೋಳ ಖರೀದಿಸಬೇಕು. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಯದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನಕ್ಕೆ ತೆರಳಿ ಪ್ರತಿಭಟನೆ ನಡೆಸೋಣ’ ಎಂದು ತಿಳಿಸಿದರು.

ಕುಂದಗೋಳದ ಅಭಿನವ ಬಸವಣ್ಣಜ್ಞನವರು ಕಲ್ಯಾಣಪುರಮಠ, ಕಮಡೊಳ್ಳಿ ವಿರಕ್ತಮಠದ ರಾಚೋಟೇಶ್ವರ ದೇವರು, ಬಟಗುರ್ಕಿಯ ಗದಿಗೆಯ್ಯ ದೇವರು, ಜಮಖಂಡಿಯ ಮಹಾಂತ ದೇವರು, ಲಕ್ಷ್ಮೇಶ್ವರ ಕರೇವಾಡಿಮಠದ ಮಳೆ ಮಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ವೀರೇಂದ್ರಗೌಡ ಪಾಟೀಲ, ಹುಲ್ಲೂರು ಅಮೋಘಿಮಠದ ಅಮೋಘಿಸಿದ್ಧೇಶ್ವರ ಸ್ವಾಮೀಜಿ, ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ, ಎಂ.ಎಸ್. ದೊಡ್ಡಗೌಡ್ರ, ಸುರೇಶ ಹಟ್ಟಿ, ಟಾಕಪ್ಪ ಸಾತಪುತೆ, ಮಹೇಶ ಹೊಗೆಸೊಪ್ಪಿನ, ಚೆನ್ನಪ್ಪ ಷಣ್ಮುಖಿ, ಅಪರಜಿಲ್ಲಾಧಿಕಾರಿ ದುರ್ಗೇಶ ಕೆ.ಆರ್., ಜಿಲ್ಲಾಉಪವಿಭಾಗಾಧಿಕಾರಿ ಗಂಗಪ್ಪ, ತಹಶೀಲ್ದಾರ ಎಂ.ಧನಂಜಯ, ಬಸಣ್ಣ ಹಂಜಿ, ಶರಣು ಗೋಡಿ, ಶಿವಾನಂದ ಲಿಂಗಶೆಟ್ಟಿ, ಎಸ್.ಎಸ್. ಪಾಟೀಲ, ಅಜಯ ಕರಿಗೌಡ್ರ, ದಾದಾಪೀರ್ ಮುಚ್ಛಾಲೆ, ಎಂ.ಎಂ, ಗದಗ, ಶಂಕರ ಬ್ಯಾಡಗಿ, ನೀಲಪ್ಪ ಶೆರಸೂರಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.