ADVERTISEMENT

ಮುಂಡರಗಿ: ಲಕ್ಷ್ಮಿಕನಕನರಸಿಂಹನ ಜಾತ್ಯಾತೀತ ಜಾತ್ರೆ

ಒಂದು ವಾರ ನಡೆಯುವ ಜಾತ್ರೆಯಲ್ಲಿ ವೈವಿಧ್ಯಮಯ ಆಚರಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 6:53 IST
Last Updated 13 ಮಾರ್ಚ್ 2025, 6:53 IST
ಮುಂಡರಗಿ ಕನಕಪ್ಪನ ಗುಡ್ಡದ ಮೇಲಿರುವ ಲಕ್ಷ್ಮಿಕನಕನರಸಿಂಹ ಸ್ವಾಮಿ ದೇವಸ್ಥಾನ. 
ಮುಂಡರಗಿ ಕನಕಪ್ಪನ ಗುಡ್ಡದ ಮೇಲಿರುವ ಲಕ್ಷ್ಮಿಕನಕನರಸಿಂಹ ಸ್ವಾಮಿ ದೇವಸ್ಥಾನ.    

ಮುಂಡರಗಿ: ಸಾಮಾನ್ಯವಾಗಿ ಆಯಾ ಭಾಗದ ದೇವಸ್ಥಾನಗಳಲ್ಲಿ ನಡೆಯುವ ಹಬ್ಬ, ಹರಿದಿನ, ಜಾತ್ರೆ, ಉತ್ಸವ ಮೊದಲಾದವುಗಳಲ್ಲಿ ಬ್ರಾಹ್ಮಣರು, ಜಂಗಮರು ಅಥವಾ ಒಂದು ಸೀಮಿತ ಸಮುದಾಯಕ್ಕೆ ಸೇರಿದವರು ಜಾತ್ರೆಯ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುತ್ತಾರೆ. ಆದರೆ, ಎಂಟು ದಿನಗಳ ಕಾಲ ಅದ್ಧೂರಿಯಿಂದ ನಡೆಯುವ ಪಟ್ಟಣದ ಲಕ್ಷ್ಮಿಕನಕನರಸಿಂಹ ದೇವರ ಜಾತ್ರೆಯ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಎಲ್ಲ ಜಾತಿಯ ಜನರು ನೆರವೇರಿಸುವ ಮೂಲಕ ಲಕ್ಷ್ಮಿಕನಕನರಸಿಂಹನ ಜಾತ್ರೆಯನ್ನು ನಿಜವಾದ ಅರ್ಥದಲ್ಲಿ ಜಾತ್ಯಾತೀತ ಜಾತ್ರೆಯನ್ನಾಗಿಸಿದ್ದಾರೆ.

ಮುಂಡರಗಿ ಪಟ್ಟಣದ ಈಗಿನ ಕೋಟೆ ಭಾಗವು ಮೂಲ ಮುಂಡರಗಿಯಾಗಿದ್ದು, ಅಲ್ಲಿ ಈಗಲೂ ದಲಿತರು ಸೇರಿದಂತೆ ಎಲ್ಲ ಜಾತಿ ಹಾಗೂ ಉಪಜಾತಿಗಳ ಜನರು ಅನ್ಯೋನ್ಯವಾಗಿ ವಾಸಿಸುತ್ತಿದ್ದಾರೆ. ಹೋಳಿ ಹುಣ್ಣಿಮೆಯ ಮುನ್ನಾ ದಿನದಿಂದ ಆರಂಭವಾಗುವ ಎಂಟು ದಿನಗಳ ಜಾತ್ರೆಯಲ್ಲಿ ಎಲ್ಲ ಜಾತಿಯ ಜನರೂ ಮುಕ್ತವಾಗಿ ಪಾಲ್ಗೊಂಡು ಲಕ್ಷ್ಮಿಕನಕನರಸಿಂಹನಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಎಂಟು ದಿನ ನಡೆಯುವ ಜಾತ್ರೆಯಲ್ಲಿ ಒಂದೊಂದು ದಿನ ಒಂದೊಂದು ಜಾತಿಯ ಜನರಿಗೆ ಜಾತ್ರೆಯ ವಿಧಿ ವಿಧಾನಗಳನ್ನು ನೆರವೆರಿಸುವ ಅವಕಾಶ ನೀಡಲಾಗುತ್ತದೆ. ಹೀಗಾಗಿ ಈ ಜಾತ್ರೆಯು ಈ ಭಾಗದ ತುಂಬಾ ವೈಶಿಷ್ಟ್ಯಪೂರ್ಣ ಜಾತ್ರೆ ಎಂದು ಪರಿಗಣಿಸಲ್ಪಟ್ಟಿದೆ.

ADVERTISEMENT

ಮಾರ್ಚ್‌ 13ರಂದು ಲಕ್ಷ್ಮಿಕನಕನರಸಿಂಹನ ಜಾತ್ರೆ ಆರಂಭಗೊಳ್ಳಲಿದ್ದು, ಅಂದು ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯುವ ಎಲ್ಲ ಪೂಜಾ ಕೈಂಕರ್ಯಗಳ ಉಸ್ತುವಾರಿಯನ್ನು ಬ್ರಾಹ್ಮಣ ಸಮಾಜದವರು ನೆರವೇರಿಸುತ್ತಾರೆ. ಮಾರ್ಚ್‌ 15ರಂದು ಇಡೀ ದಿನ ಹಾಲುಮತ (ಕುರುಬರ) ಹಾಗೂ ಉಪ್ಪಾರ ಸಮಾಜದವರು ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾರೆ. ಮಾರ್ಚ್‌ 16ರಂದು ವಾಲ್ಮೀಕಿ ಸಮಾಜದವರಿಂದ ಲಕ್ಷ್ಮಿಕನಕನರಸಿಂಹನ ಪಲ್ಲಕ್ಕಿ ಸೇವೆ, ಲಘು ರಥೋತ್ಸವ, ಮಹಾಮಂಗಳಾರತಿ ಮೊದಲಾದವುಗಳನ್ನು ನೆರವೇರಿಸುತ್ತಾರೆ.

ಮಾರ್ಚ್‌ 17ರಂದು ವಿಶ್ವಕರ್ಮ ಹಾಗೂ ವೈಶ್ಯ ಸಮಾಜದವರಿಂದ ಲಕ್ಷ್ಮಿಕನಕನರಸಿಂಹನಿಗೆ ಲಘು ರಥೋತ್ಸವ, ಮಹಾನೈವೇದ್ಯ, ಮಹಾಮಂಗಳಾರತಿ ಮೊದಲಾದ ಕಾರ್ಯಗಳು ನಡೆಯುತ್ತವೆ.

ಮಾರ್ಚ್‌ 18ರಂದು ಲಕ್ಷ್ಮಿಕನಕನರಸಿಂಹನಿಗೆ ರುದ್ರ ಪುಷ್ಕರಣಿ ಸ್ನಾನ, ರಥ ಬಲಿಹರಣ, ಬ್ರಹ್ಮ ರಥೋತ್ಸವ, ಮಹಾರಥೋತ್ಸವ ಹಾಗೂ ಮತ್ತಿತರ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.

ಮಾರ್ಚ್‌ 19ರಂದು ಸರ್ವ ಜನರು ಸೇರಿ ಮುಳ್ಳಾವುಗೆ, ಗುಡಿ ಪ್ರವೇಶ, ನಾಂದಿ ವಿಸರ್ಜನೆ ಮೊದಲಾದವುಗಳನ್ನು ನೆರವೇರಿಸಲಾಗುತ್ತದೆ. ಮಾರ್ಚ್‌ 20ಕ್ಕೆ ಜಾತ್ರೆ ಸಂಪನ್ನವಾಗುತ್ತದೆ. ಜಾತ್ರೆಯ ಅಂಗವಾಗಿ ವಾರದುದ್ದಕ್ಕೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಲಕ್ಷ್ಮಿಕನಕನರಸಿಂಹನ ಜಾತ್ರೆಯಲ್ಲಿ ಎಲ್ಲ ಸಮಾಜದವರೂ ಮುಕ್ತವಾಗಿ ಪಾಲ್ಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸುತ್ತಾರೆ. ಹೀಗಾಗಿ ಇಲ್ಲಿಯ ಲಕ್ಷ್ಮಿಕನಕನರಸಿಂಹನು ಎಲ್ಲರ ಆರಾಧ್ಯದೈವವಾಗಿದ್ದಾನೆ.
–ವಿ.ಎಲ್.ನಾಡಗೌಡರ ಜಾತ್ರಾ ಮೇಲುಸ್ತುವಾರಿ ಮುಖಂಡ

ದಲಿತರಿಂದ ಗರುಡಾರುತಿ

ಮಾರ್ಚ್‌ 18ರಂದು ಬೆಳಿಗ್ಗೆ ಪಟ್ಟಣದ ದಲಿತ ಸಮಾಜದವರಿಂದ ಲಕ್ಷ್ಮಿಕನಕನರಸಿಂಹನಿಗೆ ವಿಶೇಷವಾದ ಗಂಡಾರುತಿ (ಗರುಡಾರತಿ) ಸೇವೆ ಜರುಗುತ್ತದೆ. ಪ್ರತಿವರ್ಷ ದಲಿತ ಸಮಾಜದವರು ಲಕ್ಷ್ಮಿಕನಕನರಸಿಂಹನಿಗೆ ಅರ್ಪಿಸಲು ನೂತನ ಬೃಹತ್ ಪಾದರಕ್ಷೆಗಳನ್ನು ತಯಾರಿಸುತ್ತಾರೆ. ಮಹಾರಥೋತ್ಸವದಂದು ಬೆಳಿಗ್ಗೆ ಭಾಜಾ ಭಜಂತ್ರಿ ಆರತಿ ಮೊದಲಾದ ಮಂಗಳ ವಾದ್ಯಗಳೊಂದಿಗೆ ಬೃಹತ್ ಪಾದರಕ್ಷೆಗಳನ್ನು ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕೊಂಡೊಯ್ದು ದೇವರಿಗೆ ಅರ್ಪಿಸುತ್ತಾರೆ. ಹೀಗೆ ಅರ್ಪಿಸಿದ ಬೃಹತ್ ಪಾದರಕ್ಷೆಗಳನ್ನು ದೇವಸ್ಥಾನದ ಮುಂದೆ ಸಣ್ಣ ಗುಡಿಯೊಂದರಲ್ಲಿ ಇರಿಸಲಾಗುತ್ತದೆ. ವರ್ಷದುದ್ದಕ್ಕೂ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಲಕ್ಷ್ಮಿಕನಕನರಸಿಂಹನ ಪಾದರಕ್ಷೆಗಳಿಂದ ತಮ್ಮನ್ನು ಹೊಡೆದುಕೊಳ್ಳುತ್ತಾರೆ. ಹೀಗೆ ದೇವರ ಪಾದರಕ್ಷೆಗಳಿಂದ ಹೊಡೆದುಕೊಂಡರೆ ದೇಹದಲ್ಲಿರುವ ಪೀಡೆ ಪಿಶಾಚಿ ದಾರಿದ್ರ್ಯಗಳು ದೂರವಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.