ADVERTISEMENT

ಗದಗ | ನಗರದಲ್ಲಿ ಚಿರತೆ ಸಂಚಾರ: ಭೀತಿಯಲ್ಲಿ ಜನರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:07 IST
Last Updated 27 ನವೆಂಬರ್ 2025, 5:07 IST
ಗದುಗಿನ ಪಂಚಾಕ್ಷರಿ ನಗರ, ಎಪಿಎಂಸಿ ಯಾರ್ಡ್‌ ಬಳಿ ಚಿರತೆ ಸಂಚಾರ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಚಿರತೆಗಾಗಿ ಹುಡುಕಾಟ ನಡೆಸಿದರು
ಗದುಗಿನ ಪಂಚಾಕ್ಷರಿ ನಗರ, ಎಪಿಎಂಸಿ ಯಾರ್ಡ್‌ ಬಳಿ ಚಿರತೆ ಸಂಚಾರ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಚಿರತೆಗಾಗಿ ಹುಡುಕಾಟ ನಡೆಸಿದರು   

ಗದಗ: ನಗರದ ಪಂಚಾಕ್ಷರಿ ಬಡಾವಣೆಯ ಆರನೇ ಕ್ರಾಸ್‌ ಹಾಗೂ ಎಪಿಎಂಸಿ ಬಳಿ ಚಿರತೆ ಸಂಚಾರ ಕಂಡುಬಂದಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಬುಧವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಪಂಚಾಕ್ಷರಿ ನಗರ ಹಾಗೂ ಎಪಿಎಂಸಿ ಆವರಣದ ಬಳಿ ಚಿರತೆ ಸಂಚರಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. 

ಪಂಚಾಕ್ಷರಿ ನಗರದ ಉದ್ಯಾನದ ಸಮೀಪದ ರಸ್ತೆಯಲ್ಲಿ ಚಿರತೆ ಓಡಾಡುತ್ತಿರುವುದು ಮೊದಲು ಕಾಣಿಸಿದೆ. ನಾಯಿಗಳ ಸತತ ಬೊಗಳುವಿಕೆ ಕೇಳಿ ಸ್ಥಳೀಯರು ಹೊರಬಂದಾಗ ರಸ್ತೆಯಲ್ಲಿ ಚಿರತೆ ಓಡಾಟ ಕಂಡು ಬಂದಿದೆ ಎನ್ನಲಾಗಿದೆ.

ADVERTISEMENT

ಈ ಮಧ್ಯೆ ಚಿರತೆ ಓಡಿಹೋಗುತ್ತಿರುವ ದೃಶ್ಯಗಳು ಸಮೀಪದ ಗೋದಾಮಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

​ಪಂಚಾಕ್ಷರಿ ಬಡಾವಣೆಯಿಂದ ಹೊರಟ ಚಿರತೆ ನಂತರ ಎಪಿಎಂಸಿ ಯಾರ್ಡ್ ಕಡೆಗೆ ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಚಿರತೆಗಾಗಿ ಹುಡುಕಾಟ ನಡೆಸಿದರು. ಆದರೆ, ಅದು ಎಲ್ಲೂ ಕಂಡುಬರಲಿಲ್ಲ.

‘ಚಿರತೆ ಕಾಣಿಸಿಕೊಂಡಿರುವುದರಿಂದ ಬಡಾವಣೆಯ ನಿವಾಸಿಗಳು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ಚಿರತೆ ಹಿಡಿಯಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

‘ಚಿರತೆ ಸಂಚರಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಚಿರತೆ ಒಂದೇ ಸ್ಥಳದಲ್ಲಿ ಇರುವುದಿಲ್ಲ. ಈಗಾಗಲೇ ನಮ್ಮ‌ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ನಾಲ್ಕೈದು ದಿನಗಳು ರಾತ್ರಿಪೂರ್ತಿ ಗಸ್ತು ಕಾಯಲಿದ್ದಾರೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಆದರೆ, ಎಚ್ಚರಿಕೆಯಿಂದ ಇರಬೇಕು’ ಎಂದು ಡಿಸಿಎಫ್‌ ಸಂತೋಷ್‌ ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.