ADVERTISEMENT

ಪೌರನೌಕರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ: ವೆಂಕನೌಡ ಆರ್‌. ಗೋವಿಂದಗೌಡ್ರ

​ಪ್ರಜಾವಾಣಿ ವಾರ್ತೆ
Published 28 ಮೇ 2025, 14:08 IST
Last Updated 28 ಮೇ 2025, 14:08 IST
ಗದಗ ಬೆಟಗೇರಿ ನಗರಸಭೆ ಎದುರು ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಆರ್‌.ಗೋವಿಂದಗೌಡ್ರ ಮಾತನಾಡಿದರು.
ಗದಗ ಬೆಟಗೇರಿ ನಗರಸಭೆ ಎದುರು ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಆರ್‌.ಗೋವಿಂದಗೌಡ್ರ ಮಾತನಾಡಿದರು.    

ಗದಗ: ರಾಜ್ಯದಾದ್ಯಂತ ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸುತ್ತಿರುವ ಪೌರ ನೌಕರರ ಪ್ರತಿಭಟನೆಗೆ ಗದಗ ಜಿಲ್ಲಾ ಜೆಡಿಎಸ್ ಘಟಕದ ಪದಾಧಿಕಾರಿಗಳು ಬುಧವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿದರು.

ಜೆಡಿಎಸ್‌ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಮಾತನಾಡಿ, ‘ಪೌರ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು ಅವುಗಳನ್ನು ರಾಜ್ಯ ಸರ್ಕಾರ ತ್ವರಿತವಾಗಿ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

‘ಸ್ಥಳೀಯ ಸಂಸ್ಥೆಗಳಿಗೆ ಪ್ರಶಸ್ತಿಗಳು ಸಿಕ್ಕಾಗ ಮಾತ್ರ ಚುನಾಯಿತ ಪ್ರತಿನಿಧಿಗಳು ಅದರಿಂದ ಹೆಸರು ಪಡೆಯುತ್ತಾರೆ. ಆದರೆ, ರೋಗರುಜಿನೆಗಳಿಗೆ ಎದೆಕೊಟ್ಟು ನಿಂತು ನಗರವಾಸಿಗಳಿಗೆ ಶುಚಿತ್ವವನ್ನು ಕೊಡುತ್ತಿರುವ ಪೌರಕಾರ್ಮಿಕರಿಗೆ, ಲೋಡರ್ಸ್, ಕ್ಲೀನರ್, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಇವರ ಪರಿವಾರಕ್ಕೆ ಆರೋಗ್ಯ ಹಾಗೂ ಜೀವ ರಕ್ಷಣೆಯ ಸೌಲಭ್ಯಗಳ ಸೇರಿದಂತೆ ಅವರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ’ ಎಂದು ಹರಿಹಾಯ್ದರು.

ADVERTISEMENT

‘ಎಲ್ಲರಿಗಿಂತ ಹೆಚ್ಚಿನ ಆಪತ್ತಿನ ಕೆಲಸವನ್ನು ಮಾಡುತ್ತಿರುವ ಪೌರಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯಗಳು ಸಿಗುವಂತಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಶೀಘ್ರ ಕ್ರಮವಹಿಸಬೇಕು’ ಎಂದರು.

ಜೆಡಿಎಸ್ ಮುಖಂಡ ಎಂ.ಎಸ್.ಪರ್ವತಗೌಡರ ಮಾತನಾಡಿ, ‘ಪೌರನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು ಅವುಗಳ ಈಡೇರಿಕೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಬೇಡಿಕೆಗಳು ಈಡೇರುವವರೆಗೂ ಮುಷ್ಕರವನ್ನು ಹಿಂದಕ್ಕೆ ಪಡೆಯಬಾರದು. ಕೇವಲ ಭರವಸೆಗಳನ್ನು ನಂಬಿ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬಾರದು’ ಎಂದರು.

ಜೆಡಿಎಸ್ ನಿಯೋಗದಲ್ಲಿ ರಮೇಶ್ ಹುಣಸಿಮರದ, ಸಂತೋಷ ಪಾಟೀಲ, ಪ್ರಫುಲ್‌ ಪುಣೇಕರ, ಬಸವರಾಜ ಅಪ್ಪಣ್ಣವರ, ಜೋಸೆಫ್‌ ಉದೋಜಿ ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.