ADVERTISEMENT

ಓದಿನ ಮನೆಯಲ್ಲಿ ಸ್ವಾತಂತ್ರ್ಯದ ಸೊಡರು!

ಸ್ವಾತಂತ್ರ್ಯ ದಿನಾಚರಣೆಯ ದಿನ ಉದ್ಘಾಟನೆಗೊಳ್ಳುತ್ತಿರುವ ಗ್ರಂಥಾಲಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 2:50 IST
Last Updated 15 ಆಗಸ್ಟ್ 2021, 2:50 IST
ಬಸವರಾಜ ಸೂಳಿಭಾವಿ
ಬಸವರಾಜ ಸೂಳಿಭಾವಿ   

ಗದಗ: ‘ಈ ವರ್ಷ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜಯಪುರ ಜಿಲ್ಲೆ ದೇವರ ಹಿಪ್ಪರಗಿ ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಜನ, ಅದರಲ್ಲಿಯೂ ದಲಿತ ಸಮುದಾಯದವರು ಸೇರಿ ಗ್ರಾಮದಲ್ಲಿ ಗ್ರಂಥಾಲಯವನ್ನು ಆರಂಭಿಸುವ ಮೂಲಕ ಆಚರಿಸಲು ನಿರ್ಧಾರಮಾಡಿರುವುದು ಖುಷಿಯ ವಿಚಾರ’ ಎಂದು ಗದುಗಿನ ಲಡಾಯಿ ಪ್ರಕಾಶನದ ಪ್ರಕಾಶಕ ಬಸವರಾಜ ಸೂಳಿಭಾವಿ ತಿಳಿಸಿದ್ದಾರೆ.

‌‘ಊರಿಗೊಂದು ಗ್ರಂಥಾಲಯ ಇರಬೇಕು ಎಂಬ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕನಸನ್ನು ತಮ್ಮೂರಿನಲ್ಲಿ ನನಸು ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಸಹೃದಯನಿಗೂ ಇದು ಸ್ವತಂತ್ರ ಭಾರತದಲ್ಲಿ ತುಂಬ ಮುಖ್ಯ ಸಂಗತಿ ಅನಿಸುತ್ತದೆ. ದೇಶದಲ್ಲಿ ಎಷ್ಟೆಲ್ಲಾ ನಕಾರಾತ್ಮಕ ಘಟನೆಗಳು ಇಂದು ನಿತ್ಯ ನಡೆಯುತ್ತಿವೆ. ಅದರ ನಡುವೆ ಗ್ರಾಮೀಣ ಭಾಗದ ಈ ಜನಗಳು ಅರಿವು ತುಂಬಿಕೊಳ್ಳುವ ದಾರಿ ಕಾಣುವುದನ್ನು ಯೋಚಿಸಿ, ಅದನ್ನು ಅನುಷ್ಠಾನಗೊಳಿಸುತ್ತಿರುವುದು ತುಂಬ ಮಹತ್ವದ ಕ್ರಿಯೆ’ ಎಂದು ಅವರು ತಿಳಿಸಿದ್ದಾರೆ.

‘ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಸಕಾರಾತ್ಮಕ ಕ್ರಿಯೆಗಳು ಹೆಚ್ಚಿದಲ್ಲಿ, ಖಂಡಿತವಾಗಿಯೂ ಭವಿಷ್ಯದಲ್ಲಿ ಜನವಿರೋಧಿ ರಾಜಕಾರಣದ ನಡುವೆಯೂ ಭಾರತದ ಆರೋಗ್ಯ ಸುಧಾರಣೆಯಾಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಈಗ ಇಂಗ್ಲೆಂಡಿನಲ್ಲಿರುವ ಬಸಲಿಂಗಪ್ಪಗೌಡ ಪಾಟೀಲ ಕೊಂಡಗೂಳಿಯವರೇ. ಆ ಗ್ರಂಥಾಲಯಕ್ಕೆ ಅವರು ಲಡಾಯಿ ಪ್ರಕಾಶನದಿಂದ ₹12 ಸಾವಿರ ಮೌಲ್ಯದ ಪುಸ್ತಕಗಳನ್ನು ಖರೀದಿಸಿ ಆಗಸ್ಟ್ 15ರಂದು ಆರಂಭವಾಗಲಿರುವ ಗ್ರಂಥಾಲಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಗ್ರಂಥಾಲಯದಲ್ಲಿ ಈ ರೀತಿಯ ಪ್ರಗತಿಪರ ಚಿಂತನೆಗಳ ಪುಸ್ತಕಗಳು ಇರಬೇಕೆಂಬ ಅವರ ಚಿಂತನೆಯ ಭಾಗವಾಗಿ ಈ ಲಡಾಯಿ ಪ್ರಕಾಶನದ ಪುಸ್ತಕಗಳು ಗ್ರಂಥಾಲಯ ತಲುಪಿವೆ’ ಎಂದು ತಿಳಿಸಿದ್ದಾರೆ.

‘ಉತ್ಸಾಹಿ ತರುಣ, ಪಂಪನ ಊರಿನವರಾದ ಅಣ್ಣಿಗೇರಿಯ ಶಾಂತಕುಮಾರ ಹರ್ಲಾಪುರ ಅವರ ಸಲಹೆಯೇ ಇದಕ್ಕೆ ಕಾರಣ. ಮಂಜುನಾಥ ಯಾವಗಲ್ಲ, ಮಡಿವಾಳಪ್ಪ ಕರದಳ್ಳಿ ಮೊದಲಾದ ಒಳ್ಳೆಯ ಮನಸ್ಸಿನ ಯುವಪಡೆ ಇಂತಹ ಕಾರ್ಯದ ಭಾಗವಾಗಿ ಕೆಲಸ ಮಾಡುತ್ತಿದೆ. ಬೆಳಕಿನ ದೊಂದಿ ಹಿಡಿಯುವರು ಅಲ್ಲಲ್ಲಿ ಇಂಥವರು ಕಾಣುವರೆಂದೇ ನಿಂತ ನೆಲದ ಮೇಲೆ ಭರವಸೆ ಹುಟ್ಟುತ್ತದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.