ADVERTISEMENT

ಲಕ್ಷ್ಮೇಶ್ವರ: ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಪಟ್ಟಣದ ಸ್ವಚ್ಛತೆ ಕಾಪಾಡಲು ಪುರಸಭೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 4:59 IST
Last Updated 15 ಆಗಸ್ಟ್ 2025, 4:59 IST
ಲಕ್ಷ್ಮೇಶ್ವರದ ಪುರಸಭೆಯಲ್ಲಿ ಬುಧವಾರ ಲೋಕಾಯುಕ್ತ ಡಿವೈಎಸ್‍ಪಿ ಅವರ ಎದುರು ಕರೇಗೌರಿ ಆಶ್ರಯ ಕಾಲೋನಿ ನಿವಾಸಿಗಳು ತಮ್ಮ ಸಮಸ್ಯೆ ಹೇಳಿಕೊಂಡರು
ಲಕ್ಷ್ಮೇಶ್ವರದ ಪುರಸಭೆಯಲ್ಲಿ ಬುಧವಾರ ಲೋಕಾಯುಕ್ತ ಡಿವೈಎಸ್‍ಪಿ ಅವರ ಎದುರು ಕರೇಗೌರಿ ಆಶ್ರಯ ಕಾಲೋನಿ ನಿವಾಸಿಗಳು ತಮ್ಮ ಸಮಸ್ಯೆ ಹೇಳಿಕೊಂಡರು   

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಲವು ವರ್ಷಗಳಿಂದ ಆಶ್ರಯ ನಿವೇಶನ ಹಂಚಿಕೆಯಾಗದ ಕಾರಣ ಅರ್ಹ ಪಲಾನುಭವಿಗಳನ್ನು ಗುರುತಿಸಿ ಆದಷ್ಟು ಬೇಗನೇ ನಿವೇಶನ ಹಂಚಿಕೆ ಮಾಡಬೇಕು ಎಂದು ನಾಗರಾಜ ಚಿಂಚಲಿ ಹಾಗೂ ಬಸವರಾಜ ಹಿರೇಮನಿ ಆಗ್ರಹಿಸಿದರು.

ಪಟ್ಟಣದ ಪುರಸಭೆಯಲ್ಲಿ ಬುಧವಾರ ಲೋಕಾಯುಕ್ತ ಡಿವೈಎಸ್‍ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ನಡೆಸಿದ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮನವಿ ಸಲ್ಲಿಸಿದರು.

ಪಟ್ಟಣದ ಪ್ರಮುಖ ರಸ್ತೆಗಳು ಹಾಳಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದುವರೆಗೂ ಪುರಸಭೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಪಟ್ಟಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಚರಂಡಿಗಳ ಅಸ್ವಚ್ಛತೆಯಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ’ ಎಂದು ಮಂಜುನಾಥ ಮಾಗಡಿ ಹಾಗೂ ಟಾಕಪ್ಪ ಸಾತಪುತೆ ಸಮಸ್ಯೆ ಹೇಳಿಕೊಂಡರು.

ADVERTISEMENT

ಕರೇಗೌರಿ ಆಶ್ರಯ ಕಾಲೊನಿ ನಿರ್ಮಾಣವಾಗಿ ಮೂರು ದಶಕ ಕಳೆದರೂ ಯಾವುದೇ ಮೂಲ ಸೌಲಭ್ಯ ಒದಗಿಸದ ಕಾರಣ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಸಾರ್ವಜನಿಕರು ಸಮಸ್ಯೆ ಬಿಚ್ಚಿಟ್ಟರು.

ವಿಜಯ ಬಿರಾದಾರ ಅವರು ಮಾತನಾಡಿ, ‘ಪಟ್ಟಣದಲ್ಲಿ ಸ್ವಚ್ಛತೆ ಕೊರತೆ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಲೋಕಾಯುಕ್ತರು ಕ್ರಮಕೈಗೊಳ್ಳುವ ಮೊದಲು ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಬೇಕು. ಹೆಚ್ಚುವರಿ ಪೌರ ಕಾರ್ಮಿಕರ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಒಳ ಚರಂಡಿ ಮಂಡಳಿ ಕೆಲಸ ಪೂರ್ಣಗೊಳ್ಳದಿದ್ದರೂ ಎನ್‍ಒಸಿ ನೀಡಿದವರ ವಿರುದ್ಧ ಕ್ರಮ ಸೂಚಿಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಹಾಗೂ ವೃದ್ಧರನ್ನು ಪದೇ ಪದೇ ಬರುವಂತೆ ಮಾಡಬಾರದು. ಕಚೇರಿಗಳಲ್ಲಿ ಜನರು ಕುಳಿತುಕೊಳ್ಳಲು ಆಸನ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಆಸ್ಪತ್ರೆ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ನಿಗಾವಹಿಸಬೇಕು. ಲೋಕಾಯುಕ್ತರ ಹೆಸರಲ್ಲಿ ಯಾರಾದರೂ ಫೋನ್ ಮಾಡಿದರೆ ತಕ್ಷಣ ಅಂಥವರ ವಿರುದ್ಧ ಪಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು’ ಎಂದು ತಿಳಿಸಿದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.