ನರೇಗಲ್: ಚುಟುಕು ಸಾಹಿತ್ಯ ಕನ್ನಡ ಸಾಹಿತ್ಯದ ಒಂದು ಸಣ್ಣ ಪ್ರಕಾರವಾಗಿದೆ. ಇದು ಚಿಕ್ಕದಾಗಿದ್ದರು ಸಹ ಅರ್ಥಗರ್ಭಿತವಾಗಿ ಇರುತ್ತದೆ ಎಂದು ನಿವೃತ್ತ ಶಿಕ್ಷಕ ಎಂ. ಎಸ್. ಧಡೆಸೂರಮಠ ಹೇಳಿದರು.
ಪಟ್ಟಣ ಸಮೀಪದ ನಿಡಗುಂದಿ ಗ್ರಾಮದ ಭೀಮಾಂಬಿಕಾ ದೇವಸ್ಥಾನದಲ್ಲಿ ಚುಟುಕು ಸಾಹಿತ್ಯ ಪರಿಷತ್ ಗಜೇಂದ್ರಗಡ ತಾಲ್ಲೂಕು ಘಟಕದ ವತಿಯಿಂದ ಈಚೆಗೆ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಾಹಿತ್ಯದಲ್ಲಿ ಕಡಿಮೆ ಸಾಲುಗಳಲ್ಲಿ ಹೆಚ್ಚು ವಿಷಯವಿರುತ್ತದೆ. ಸಾಮಾನ್ಯವಾಗಿ ಜೀವನ ಮೌಲ್ಯಗಳು, ನೀತಿಗಳು, ತತ್ವಗಳು, ವಿಡಂಬನೆ ಅಥವಾ ಹಾಸ್ಯವನ್ನು ಒಳಗೊಂಡಿರುತ್ತದೆ. ಅದರೊಳಗೆ ಉಪಮೆಯ, ರೂಪಕ, ದೃಷ್ಟಾಂತಗಳು ದಾರಿ ದೀಪವಾಗಿರುತ್ತವೆ ಎಂದರು. ಚುಟುಕು ಸಮಾಜಕ್ಕೊಂದು ಹೊಸ ಸಂದೇಶ ನೀಡುವ ಸಾಹಿತ್ಯ. ಈ ಸಾಹಿತ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಅದರಂಥ ಸಂತೋಷ ಬೇರೊಂದಿಲ್ಲ. ಇಡೀ ಸಮಾಜದ ಒಳ, ತಿರುಳನ್ನು ಕೇವಲ ನಾಲ್ಕೈದು ಸಾಲುಗಳಲ್ಲಿ ಅರ್ಥಗರ್ಭಿತವಾಗಿರುತ್ತದೆ ಎಂದರು.
ಮುಖಂಡ ವಿ. ಬಿ. ಸೋಮನಕಟ್ಟಿಮಠ ಮಾತನಾಡಿ, ಮಕ್ಕಳಿಗೆ ಚುಟುಕು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಂಡು ಈ ಸಾಹಿತ್ಯದ ಅಭಿರುಚಿಯನ್ನು ತಿಳಿಸಬೇಕು. ಆಗ ತಾನಾಗಿಯೇ ಚುಟುಕು ಸಾಹಿತ್ಯ ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಶಿಕ್ಷಕ ಶರಣಪ್ಪ ಅರಮನಿ ಮಾತನಾಡಿದರು. ಇಟಗಿ-ನಿಡಗುಂದಿಯ ಧರ್ಮರಮಠದ ಷಣ್ಮುಖಪ್ಪಜ್ಜನವರು ಸಾನಿಧ್ಯ ವಹಿಸಿದ್ದರು.
ಗಜೇಂದ್ರಗಡ ತಾಲ್ಲೂಕು ಅಧ್ಯಕ್ಷೆ ರೇಣುಕಾ ಏವೂರ್, ನಾಗರಾಜ ನಾಯಕ, ಶಂಕರ ಏವೂರ್, ದರ್ಶನ ಡುಮ್ಮನವರ, ಶರಣವ್ವ ಬೆಳದಡಿ, ನಾಗರತ್ನ, ಅನ್ನಪೂರ್ಣ ಜವಳಿಗೇರಿ, ರೋಶನ್ ಶಿರಗುಂಪಿ, ಪೂರ್ಣಿಮಾ, ಪ್ರೇಮ ಇಟಗಿ, ವಿರುಪಮ್ಮಾ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.