ಲಕ್ಷ್ಮೇಶ್ವರ: ತಾಲ್ಲೂಕಿನಾದ್ಯಂತ ಮುಂಗಾರು ಬಿತ್ತನೆ ಪೂರ್ವ ಮಾಗಿ ಉಳುಮೆಯ ಕೃಷಿ ಕೆಲಸ ಭರದಿಂದ ಸಾಗಿದೆ. ಕಳೆದ ವರ್ಷದ ಅನಾನುಕೂಲ ವಾತಾವರಣದಿಂದಾಗಿ ಕಂಗೆಟ್ಟಿರುವ ರೈತರು ಮತ್ತೆ ಈ ವರ್ಷದ ಅದೃಷ್ಟಕ್ಕಾಗಿ ಪರೀಕ್ಷೆಗೆ ಇಳಿದಿದ್ದಾರೆ.
ಮುಂಗಾರು ಬಿತ್ತನೆಗೆ ಭೂಮಿಯನ್ನು ರಂಟಿ ಹೊಡೆಯುವುದು, ಹರಗುವುದು, ಕಸಕಡ್ಡಿ ಆರಿಸಿ ತೆಗೆಯುವ, ಹೊಲಗಳಲ್ಲಿನ ಕಲ್ಲುಗಳನ್ನು ಆರಿಸಿ ತೆಗೆಯುವ ಹಾಗೂ ತಿಪ್ಪೆ ಗೊಬ್ಬರ ಹಾಕುವ ಕೆಲಸಕ್ಕೆ ರೈತರು ಮಾಗಿ ಉಳುಮೆ ಎನ್ನುತ್ತಾರೆ. ಸಧ್ಯ ತಾಲ್ಲೂಕಿನೆಲ್ಲೆಡೆ ಮಳೆ ಸುರಿದಿದ್ದು ಕೃಷಿಹೊಂಡಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ. ಇದರಿಂದ ಖುಷಿಗೊಂಡ ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 35,775 ಹೆಕ್ಟೇರ್ ಬಿತ್ತನೆ ಪ್ರದೇಶ ಇದ್ದು, ಅದರಲ್ಲಿ ಏಕದಳ ಮತ್ತು ದ್ವಿದಳ ಧಾನ್ಯ, ಎಣ್ಣೆಕಾಳು ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ವಿಶೇಷವಾಗಿ ಮುಂಗಾರು ಹಂಗಾಮಿನಲ್ಲಿ ಹೆಸರು, ಕಂಠಿಶೇಂಗಾ ಹಾಗೂ ಮೆಕ್ಕೆಜೋಳ ಬಿತ್ತನೆ ಮಾಡುವುದು ವಾಡಿಕೆ.
ಕೃಷಿ ಇಲಾಖೆಯ ಮೂಲಗಳ ಪ್ರಕಾರ ಈ ವರ್ಷ 12,600 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, 50 ಹೆಕ್ಟೇರ್ ಹೈಬ್ರೀಡ್ ಜೋಳ, 10 ಹೆಕ್ಟೇರ್‌ನಲ್ಲಿ ಇತರೇ ಧಾನ್ಯಗಳು, 50 ಹೆಕ್ಟೇರ್ ತೊಗರಿ, 15 ಹೆಕ್ಟೇರ್ ಹುರುಳಿ, 10 ಹೆಕ್ಟೇರ್ ಉದ್ದು, 5,000 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 25 ಹೆಕ್ಟೇರ್ ಅಲಸಂದಿ, ಎಂಟು ಹೆಕ್ಟೇರ್‌ನಲ್ಲಿ ಅವರೆ ಮತ್ತು 10,000 ಹೆಕ್ಟೇರ್ ಪ್ರದೇಶದಲ್ಲಿ ಕಂಠಿಶೇಂಗಾ, 20 ಹೆಕ್ಟೇರ್ ಎಳ್ಳು, 35 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 10 ಹೆಕ್ಟೇರ್ ಗುರೆಳ್ಳು, 30 ಹೆಕ್ಟೇರ್‌ನಲ್ಲಿ ಸೋಯಾಬಿನ್, 8,100 ಹೆಕ್ಟೇರ್‌ನಲ್ಲಿ ಹತ್ತಿ ಮತ್ತು 555 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ.
ಮುಂಗಾರು ಬಿತ್ತನೆ ಬೀಜದ ಮಾರಾಟಕ್ಕಾಗಿ ಕೃಷಿ ಇಲಾಖೆ ಸಜ್ಜುಗೊಂಡಿದ್ದು ಇನ್ನು ಕೆಲ ದಿನಗಳಲ್ಲೇ ಬೀಜ ಮಾರಾಟ ಆರಂಭಗೊಳ್ಳಲಿದೆಚಂದ್ರಶೇಖರ ನರಸಮ್ಮನವರ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ
ಮಳಿ ಬರಲಿ ಬಿಡ್ಲಿ ನಮ್ಮ ಕೆಲಸ ನಾವು ಮಾಡ್ತೇವಿ. ಒಂದಲ್ಲದ ಒಂದ್ ದಿನಾ ಭೂತಾಯಿ ನಮ್ಮ ಕೈ ಹಿಡೀತಾಳ್ರೀಮಹಾಂತೇಶ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.