ADVERTISEMENT

ಗೋವಿನಜೋಳ ಖರೀದಿ ಕೇಂದ್ರ ಆರಂಭಿಸಿ: ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ

ಅಹೋರಾತ್ರಿ ಧರಣಿ: ಮುಖಂಡರಿಂದ ಹೋರಾಟಕ್ಕೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:02 IST
Last Updated 17 ನವೆಂಬರ್ 2025, 5:02 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಕ್ಷ್ಮೇಶ್ವರದಲ್ಲಿ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸಭೆಯಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಲಕ್ಷ್ಮೇಶ್ವರದಲ್ಲಿ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸಭೆಯಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು   

ಲಕ್ಷ್ಮೇಶ್ವರ: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು, ರೈತರಿಗೆ ಬೆಳೆವಿಮೆ ಮತ್ತು ಬೆಳೆಹಾನಿ ಪರಿಹಾರ ಜಮೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರದಿಂದ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ವಿವಿಧ ಪಕ್ಷಗಳ ಮುಖಂಡರು ಧರನಿರತ ರೈತರನ್ನು ಭೇಟಿ ಮಾಡಿ, ಬೆಂಬಲಿಸಿದ್ದು ಹೋರಾಟಕ್ಕೆ ಮತ್ತಷ್ಟು ನೈತಿಕ ಬೆಂಬಲ ದೊರೆತಿದೆ.

ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ‘ಇದು ರೈತಪರ ಹೋರಾಟ ಆಗಿದ್ದು ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ಹೀಗಾಗಿ ಅವರ ಹೋರಾಟಕ್ಕೆ ನೈತಿಕ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆತರೆ ಅವರು ನೆಮ್ಮದಿಯಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಸಂಬಂಧಿಸಿದ ಕೃಷಿ ಸಚಿವರು, ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ತೆಗೆದು ಅನುಕೂಲ ಮಾಡಿಕೊಡಬೇಕು’ ಎಂದು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಟಿ. ಈಶ್ವರ, ‘ರೈತರ ನೋವು ನಮಗೂ ಅರ್ಥ ಆಗುತ್ತದೆ. ಹಗಲೂ ರಾತ್ರಿ ಮಳೆ, ಬಿಸಿಲು ಲೆಕ್ಕಿಸದೆ ದೇಶದ ಜನರಿಗೆ ಅನ್ನ ನೀಡುವಲ್ಲಿ ಅವರು ಬೆವರು ಹರಿಸಿ ದುಡಿಯುತ್ತಾರೆ. ಇಂಥ ರೈತರಿಗೆ ಬೆಳೆ ಬಂದ ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದೆ ಪದೇ ಪದೆ ಕಷ್ಟ ಅನುಭವಿಸುವುದು ನಿಜಕ್ಕೂ ರೈತರಿಗೆ ಮಾಡುವ ಅವಮಾನವೇ ಸರಿ. ರೈತರೊಂದಿಗೆ ನಾವಿದ್ದೇವೆ. ಇದು ಪಕ್ಷಾತೀತ ಹೋರಾಟವಾಗಿದ್ದು ನಿಮ್ಮ ಹೋರಾಟದಲ್ಲಿ ನಾವು ಭಾಗಿಯಾಗುತ್ತೇವೆ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಹಾಗೂ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ತಾಲ್ಲೂಕು ಅಧ್ಯಕ್ಷ ಟಾಕಪ್ಪ ಸಾತಪುತೆ ಮಾತನಾಡಿ, ‘ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರದ ಗದ್ದುಗೆ ಏರುವ ಸರ್ಕಾರಗಳು ಇದೀಗ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಸಮಗ್ರ ರೈತ ಹೋರಾಟ ಸಂಘಟನೆಗಳು ಪಕ್ಷಾತೀತವಾಗಿ ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿರುವ ರೈತರ ಕೂಗು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮುಟ್ಟಿಸಬೇಕಿದೆ. ಅದಕ್ಕಾಗಿ ಈ ಹೋರಾಟದ ಸ್ವರೂಪ ಇನ್ನಷ್ಟು ತೀವ್ರಗೊಳಿಸಬೇಕಾಗಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದರು.

ಆದರಹಳ್ಳಿಯ ಕುಮಾರಮಹಾರಾಜರು ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ‘ರೈತರ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅನ್ನದಾತನ ಹೆಸರು ಹೇಳಿಕೊಂಡು ಓಡಾಡುವ ರಾಜಕಾರಣಿಗಳು ಅವರ ಕೂಗಿಗೆ ಧನಿಯಾಗಬೇಕು. ಆದಷ್ಟು ಬೇಗನೇ ಗೋವಿನಜೋಳದ ಬೆಂಬಲ ಖರೀದಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿದರು.

ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ವಕೀಲ ರವಿಕಾಂತ ಅಂಗಡಿ, ಪೂರ್ಣಾಜಿ ಖರಾಟೆ, ಬಸವರಾಜ ಬೆಂಡಿಗೇರಿ, ಎಂ.ಎಸ್. ದೊಡ್ಡಗೌಡ್ರ, ಸುರೇಶ ಹಟ್ಟಿ, ಶಿವಾನಂದ ಬನ್ನಿಮಟ್ಟಿ, ಸಿದ್ದು ಹವಳದ, ಗಂಗಾಧರ ಗೋಡಿ, ಗಿರೀಶ ಕಳ್ಳಿಮನಿ, ಫಕ್ಕೀರೇಶ ಅಣ್ಣಿಗೇರಿ, ಚನ್ನಪ್ಪ ಷಣ್ಮುಖಿ, ಬಸವರಾಜ ಮೇಲ್ಮುರಿ, ಪ್ರವೀಣ ನೆಲೊಗಲ್ಲ, ಅಮರೇಶ ತೆಂಬದಮನಿ, ನೀಲಪ್ಪ ಶರಸೂರಿ, ಮಲ್ಲಯ್ಯ ಮೂಲಿಮಠ, ಪ್ರಭು ಮತ್ತಿಕಟ್ಟಿ, ಗಂಗಾಧರ ಖರಾಟೆ, ರಮೇಶ ದೊಡ್ಡೂರ, ಮಲ್ಲೇಶ ಒಡ್ಡರ, ಮುದಕಣ್ಣ ಗದ್ದಿ ಇದ್ದರು.


ಧರಣಿನಿರತ ಸ್ಥಳದಲ್ಲಿ ಹೋಮ ಇಂದು: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಎರಡು ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳದಲ್ಲಿ ಸೋಮವಾರ ರೈತರಿಗೆ ಒಳಿತಾಗಲಿ. ಸರ್ಕಾರಗಳಿಗೆ ಬುದ್ಧಿ ಬರಲಿ ಎಂಬ ಉದ್ಧೇಶದಿಂದ ಸೋಮವಾರ ಬೆಳಿಗ್ಗೆ ವಿಶೇಷ ಹೋಮ ಹಮ್ಮಿಕೊಳ್ಳಲಾಗಿದೆ. ಲಕ್ಷ್ಮೇಶ್ವರದ ಹಾವಳಿ ಆಂಜನೇಯ ದೇವಸ್ಥಾನದ ಅರ್ಚಕರಾದ ಮುರಘೇಂದ್ರಸ್ವಾಮಿ ಹಿರೇಮಠ ಅವರು ಹೋಮವನ್ನು ನಡೆಸಿಕೊಡಲಿದ್ದಾರೆ. ಎಲ್ಲ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ ಮತ್ತು ನಾಗರಾಜ ಚಿಂಚಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.