ನರೇಗಲ್: ‘ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶೈಕ್ಷಣಿಕ ಪ್ರಗತಿ ಸಾಧಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು’ ಎಂದು ವೈದ್ಯ ಕೃಷ್ಣ ಜಿ. ಕಾಳೆ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಬೀಚಿ ಬಳಗದಿಂದ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಜೀವನದಲ್ಲಿ ಸೋಲು-ಗೆಲುವುಗಳು ಇರುತ್ತವೆ. ಸೋತಾಗ ಹೆದರಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬಾರದು. ವಿದ್ಯಾರ್ಥಿಗಳಲ್ಲಿ ಮಾನಸಿಕವಾಗಿ ಗಟ್ಟಿತನ ಬೆಳೆಸಿಕೊಂಡು ಜೀವನದಲ್ಲಿ ಏನೇ ಬರಲಿ ಧೃಢ ಮನಸ್ಸಿನಿಂದ ಎದುರಿಸಬೇಕು. ಆಗ ಮಾತ್ರ ಜೀವನದಲ್ಲಿ ಎತ್ತರದ ಸ್ಥಾನ ತಲುಪಲು ಸಾಧ್ಯ’ ಎಂದರು.
ಬೀಚಿ ಬಳಗದವರು ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ವಿದ್ಯಾರ್ಥಿಗಳಿಗೇನಾದರೂ ವಿಶೇಷ ಕೋಚಿಂಗ್ ವ್ಯವಸ್ಥೆಯನ್ನು ಮಾಡಲು ಮುಂದಾದರೆ ಅದಕ್ಕೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಹೇಳಿದರು.
ದೊಡ್ಡಯ್ಯ ಅರವಟಗಿಮಠ ಮಾತನಾಡಿ, ‘ಶಿಕ್ಷಣ ಸಮಾಜದ ಅಭಿವದ್ಧಿಗೆ ಮೂಲ ಅಸ್ತ್ರವಾಗಿದೆ. ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ ಮತ್ತು ಏಕಾಗ್ರತೆಯನ್ನು ಮೈಗೂಡಿಸಿಕೊಂಡು ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಇಂದು ಸನ್ಮಾನಗೊಂಡ ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಗುರಿಯನ್ನು ಇಂದೇ ನಿರ್ಧರಿಸಿಕೊಳ್ಳಬೇಕು. ಆ ಗುರಿಯನ್ನು ಸಾಧಿಸುವತ್ತ ಪ್ರಯತ್ನಪಡಬೇಕು. ನೀವುಗಳು ಮನಸ್ಸು ಮಾಡಿದರೆ ಏನೆಲ್ಲವನ್ನೂ ಸಾಧಿಸಲು ಸಾಧ್ಯವಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಕೆ. ಎಸ್. ಕಳಕಣ್ಣವರ ಮಾತನಾಡಿ, ‘ಪಟ್ಟಣದಲ್ಲಿ ಬೀಚಿ ಬಳಗ ತನ್ನ ವಿಧಾಯಕ ಕಾರ್ಯಕ್ರಮಗಳ ಮೂಲಕ ಜನಮಾನಸವನ್ನು ಗೆದ್ದಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಬೇಕು. ಡಾ. ಸಪ್ನಾ ಕಾಳೆ ಮಾತನಾಡಿದರು. ಸಂಚಾಲಕ ಈಶ್ವರ ಬೆಟಗೇರಿ, ಮುಖ್ಯ ಶಿಕ್ಷಕ ಬಿ. ಬಿ. ಕುರಿ, ಸುರೇಶ ಹಳ್ಳಿಕೇರಿ, ಸೀಮಾ ಕೊಂಡಿ, ಅರುಣ ಕುಲಕರ್ಣಿ, ಬಿ. ಟಿ. ತಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.