ADVERTISEMENT

ಆರ್‌ಎಸ್‌ಎಸ್‌, ಬಿಜೆಪಿಗರಿಂದ ಮೀರ್‌ ಸಾದಿಕ್‌ ಕೆಲಸ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 12:38 IST
Last Updated 19 ಏಪ್ರಿಲ್ 2022, 12:38 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಚಾಮರಾಜನಗರ: ‘ನಾನು ಮೀರ್‌ ಸಾದಿಕ್‌ ಕೆಲಸ ಮಾಡಿಲ್ಲ. ಆರ್‌ಎಸ್ಎಸ್‌, ಸಂಘಪರಿವಾರ ಹಾಗೂ ಬಿಜೆಪಿಯವರು ಆ ಕೆಲಸ ಮಾಡುತ್ತಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ತಿರುಗೇಟು ನೀಡಿದರು.

ಹುಬ್ಬಳ್ಳಿ ಗಲಭೆಯಲ್ಲಿ ಕಾಂಗ್ರೆಸ್‌ ಪಿತೂರಿ ಇದೆ ಎಂದು ಆರೋಪಿಸಿ ಹಾಗೂ ಸಿದ್ದರಾಮಯ್ಯ ಅವರನ್ನು ಮೀರ್‌ ಸಾದಿಕ್‌ ಎಂದು ಉಲ್ಲೇಖಿಸಿ ರಾಜ್ಯ ಬಿಜೆಪಿ ಮಾಡಿರುವ ಟ್ವೀಟ್‌ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ‘ಹುಬ್ಬಳ್ಳಿಯಲ್ಲಿ ಗಲಭೆಯನ್ನು ಮೊದಲು ಹುಟ್ಟು ಹಾಕಿದ್ದು ಯಾರು? ಮೊದಲು ವಿಡಿಯೊ ಪೋಸ್ಟ್‌ ಮಾಡಿದವನು ಯಾರು? ಆತ ಬಜರಂಗದಳದ ಕಾರ್ಯಕರ್ತ. ಈಗ ಆತನನ್ನು ಬಂಧಿಸಲಾಗಿದೆ. ಆತ ಪೋಸ್ಟ್‌ ಹಾಕಿದ ನಂತರ ಗಲಾಟೆಯಾಗಿದೆ. ತ‍ಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಶಿಕ್ಷೆಯನ್ನೂ ಕೊಡಲಿ. ಆದರೆ, ತಮ್ಮ ತಪ್ಪು, ಭ್ರಷ್ಟಾಚಾರ ಹಾಗೂ ಸುಳ್ಳುಗಳನ್ನು ಮುಚ್ಚಿಕೊಳ್ಳಲುಬಿಜೆಪಿಯವರು ಕಾಂಗ್ರೆಸ್‌ ಮೇಲೆ ಆರೋಪಿಸುತ್ತಿದ್ದಾರೆ’ ಎಂದರು.

ದ್ವೇಷದ ರಾಜಕಾರಣ: ಸಣ್ಣ ವಿಚಾರವನ್ನು (ಸಂತೋಷ್‌ ಪಾಟೀಲ ಆತ್ಮಹತ್ಯೆ) ಮುಂದಿಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ ಬಗ್ಗೆ ಕೇಳಿದ್ದಕ್ಕೆ, ‘ವ್ಯಕ್ತಿಯೊಬ್ಬ ಮೃತಪಟ್ಟಿರುವ ವಿಷಯಕ್ಕೆ ಹೋರಾಟ ಮಾಡುತ್ತಿರುವುದು ಸಣ್ಣ ವಿಚಾರವೇ? ಶಿವಮೊಗ್ಗದಲ್ಲಿ ಹರ್ಷನ ಶವ ಇಟ್ಟುಕೊಂಡು ನಿಷೇಧಾಜ್ಷೆ ಇದ್ದರೂ ಇವರು ಶವಯಾತ್ರೆ ಮಾಡಿದ್ದರು. ಬೆಳ್ತಂಗಡಿಯಲ್ಲಿ ದಿನೇಶ್ ಸತ್ತಾಗ ಯಾಕೆ ಪಾದಯಾತ್ರೆ ಮಾಡಲಿಲ್ಲ?ನರಗುಂದ ಮುಸ್ಲಿಂ ವ್ಯಕ್ತಿ ಸತ್ತಾಗ ಯಾಕೆ ಮಾಡಲಿಲ್ಲ?ಹರ್ಷನ ಕುಟುಂಬಕ್ಕೆ ₹25 ಲಕ್ಷ ಕೊಟ್ಟರು.ದಿನೇಶ್‌ ಕುಟುಂಬಕ್ಕೆ ಯಾಕೆ ಕೊಡಲಿಲ್ಲ?ಬಿಜೆಪಿಯವರು ದ್ವೇಷದ ರಾಜಕಾರಣ ಮಾಡಲು ಆರಂಭಿಸಿದ್ದಾರೆ.ಜನರ ಮಧ್ಯೆ ಬೆಂಕಿ ಹಚ್ಚುತ್ತಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.