
ಗದಗ: ‘ರಿತ್ತಿ ಅವರ ಜಾಗದಲ್ಲಿ ಸಿಕ್ಕ ನಿಧಿಯಲ್ಲಿ 466 ಗ್ರಾಂ ತೂಕದಷ್ಟು ಚಿನ್ನಾಭರಣ ಇದ್ದವು. ಅವು ಜಿಲ್ಲಾಡಳಿತದ ವಶದಲ್ಲಿವೆ. ಇದು ಬೆಳಕಿಗೆ ಬರಲು ಕಾರಣನಾದ 14 ವರ್ಷದ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆ ಅನುಕರಣೀಯ’ ಎಂದು ಸಚಿವ ಎಚ್.ಕೆ.ಪಾಟೀಲ ಮಂಗಳವಾರ ಇಲ್ಲಿ ಹೇಳಿದರು.
ನಿಧಿಗೆ ಸಂಬಂಧಿಸಿ ಲಕ್ಕುಂಡಿಯ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ವಿಷಯ ಮುಖ್ಯಮಂತ್ರಿ ಅವರ ಗಮನಕ್ಕೆ ಬಂದಾಗ, ನಿಧಿ ಎಷ್ಟೇ ಇರಲಿ. ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿದ ಬಾಲಕನ ನಡೆ ನಿಧಿಗಿಂತಲೂ ದೊಡ್ಡದೆಂದು ಶ್ಲಾಘಿಸಿದರು’ ಎಂದರು.
‘ಜ.26ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ರಿತ್ತಿ ಕುಟುಂಬದವರನ್ನು ಜಿಲ್ಲಾಡಳಿತ ಸನ್ಮಾನಿಸಲಿದೆ. ನೆರವು ನೀಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಿದ್ದು, ಈ ಮಾಹಿತಿಯನ್ನು ಅಂದೇ ಪ್ರಕಟಿಸಲಾಗುವುದು’ ಎಂದರು.
‘ರಾಷ್ಟ್ರಕೂಟರು, ಚಾಲುಕ್ಯರು ಆಳ್ವಿಕೆಯ ಐತಿಹಾಸಿಕ ಹಿನ್ನೆಲೆಯುಳ್ಳ ಲಕ್ಕುಂಡಿ ವಿಶಿಷ್ಟ ಸ್ಥಳ. ಈಗ ಸಿಕ್ಕಿರುವ ನಿಧಿಯನ್ನು ವಸ್ತುಸಂಗ್ರಹಾಲಯದಲ್ಲಿ ಇಡಲಾಗುವುದು. ಲಕ್ಕುಂಡಿಯ ಪ್ರಾಚ್ಯಾವಶೇಷ ಸಂಗ್ರಹ ಅಭಿಯಾನ ನಡೆಸಿದಾಗ ಗ್ರಾಮಸ್ಥರು ಈಗಾಗಲೇ 1,100ಕ್ಕೂ ಹೆಚ್ಚು ಪ್ರಾಚ್ಯವಸ್ತುಗಳನ್ನು ಒಪ್ಪಿಸಿದ್ದಾರೆ’ ಎಂದರು.
ನಿಧಿ ಒಪ್ಪಿಸಿದ ಪ್ರಜ್ವಲ್ ರಿತ್ತಿ, ತಾಯಿ ಗಂಗವ್ವ ಬಸವರಾಜ ರಿತ್ತಿ ಹಾಗೂ ಅಜ್ಜಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ, ಸದಸ್ಯ ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ರಮೇಶ ಮೂಲಿಮನಿ ಇದ್ದರು.
ರಿತ್ತಿ ಅವರ ಕುಟುಂಬಕ್ಕೆ ಎಷ್ಟು ಗೌರವ ಸಲ್ಲಿಸಿದರೂ ಕಡಿಮೆ. ಅವರಾಗಿ ಏನೂ ಕೇಳಿಲ್ಲ. ಅವರಿಗೆ ಮನೆ ಕಟ್ಟಿಕೊಡುವ ಹಾಗೂ ತಾಯಿ ಕಸ್ತೂರವ್ವಗೆ ಕೆಲಸ ಕೊಡುವ ಬಗ್ಗೆ ಚರ್ಚಿಸುತ್ತೇವೆಎಚ್.ಕೆ.ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.