ADVERTISEMENT

ನರೇಗಲ್:‌ ಪವಾಡ ಪುರುಷ ಅಣ್ಣಯ್ಯ– ತಮ್ಮಯ್ಯ ಶರಣರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 2:51 IST
Last Updated 21 ಜುಲೈ 2024, 2:51 IST
ಅಣ್ಣಯ್ಯ-ತಮ್ಮಯ್ಯ ಶರಣರು
ಅಣ್ಣಯ್ಯ-ತಮ್ಮಯ್ಯ ಶರಣರು   

ನರೇಗಲ್:‌ ಹೋಬಳಿಯ ಜಕ್ಕಲಿ ಗ್ರಾಮದ ದೊಡ್ಡಮನಿ ಶೆಟ್ಟರ ಮನೆತನದ ಅಣ್ಣಯ್ಯ ತಮ್ಮಯ್ಯನವರು ಬಾಲ್ಯದಿಂದಲೇ ಅವತಾರಿಗಳಾಗಿ ಶರಣ ಸಂಸ್ಕೃತಿಯಲ್ಲಿ ತಮ್ಮದೇ ಗುರುತು ಮೂಡಿಸಿದ್ದಾರೆ.

ಧರ್ಮ, ಆಚರಣೆ, ಸಂಸ್ಕೃತಿಯು ಮಾನವೀಯ ಮೌಲ್ಯ ತಿಳಿಸಬೇಕು. ಮಾನವರೆಲ್ಲರೂ ಒಂದೇ ಎಂಬ ಶಾಶ್ವತ ಸಂದೇಶವನ್ನು ನೀಡಿದ್ದಾರೆ. 1811ರಲ್ಲಿ ಅಣ್ಣಯ್ಯ, 1814ರಲ್ಲಿ ತಮ್ಮಯ್ಯ ಸಣ್ಣಬಸಪ್ಪ-ಚನ್ನಮ್ಮ ದಂಪತಿಯ ಮಡಿಲಲ್ಲಿ ಜನಿಸಿದರು. ಬಾಲ್ಯದಿಂದಲೇ ಶರಣ ಸಂಸ್ಕೃತಿ, ಅಧ್ಯಾತ್ಮದ ಕಡೆಗೆ ಒಲವು ಹೊಂದಿದ್ದ ಇಬ್ಬರೂ ಶರಣರು ಅನೇಕ ಪವಾಡಗಳನ್ನು ಮಾಡಿದ್ದಾರೆ.

ಮಕ್ಕಳ ಆಟಿಕೆಯ ವಸ್ತು ಕಟ್ಟಿಗೆ ಬಸವಣ್ಣನಿಂದ ಓಂಕಾರವನ್ನು ನುಡಿಸಿದರು. ಗ್ರಾಮದ ಅಂಗಡಿಯಲ್ಲಿ ನಡೆದ ಬಂಗಾರದ ಆಭರಣಗಳ ಕಳ್ಳತನ ಮಾಡಿದ ವ್ಯಕ್ತಿಗಳನ್ನು ಸಭಾದಲ್ಲಿಯೇ ಕಟ್ಟಿಗೆ ಬಸವಣ್ಣನಿಂದ ಗುರುತಿಸಿದರು. ಜಮೀನಿನಲ್ಲಿ ಕುಸುಬಿ ಕದ್ದ ಕಳ್ಳರಿಗೆ ಬುದ್ಧಿ ಬರುವಂತೆ ಪವಾಡಗಳನ್ನು ಮಾಡಿ ಸನ್ಮಾರ್ಗಕ್ಕೆ ತಂದು ದುಡಿಮೆ ಕೆಲಸಕ್ಕೆ ಹಚ್ಚಿದರು.

ADVERTISEMENT

ಹಿರಿಯರ ಕಾಲದಲ್ಲಿ ಗ್ರಾಮದ ಅನೇಕ ರೈತರು ಹೊಲ, ಮನೆಯ ಆಸ್ತಿಪತ್ರಗಳನ್ನು ಉಭಯ ಶರಣರ ತಂದೆಯವರ ಬಳಿ ಅಡವಿಟ್ಟಿದ್ದರು. ಆದರೆ ಅಣ್ಣಯ್ಯ-ತಮ್ಮಯ್ಯನವರು ರೈತರ ಮನೆಯಲ್ಲಿ ನೀರು ಕುಡಿದು ನಿಮ್ಮ ಸಾಲ ತೀರಿತು ಎಂದು ಅವರ ಆಸ್ತಿಪತ್ರಗಳನ್ನು ಮರಳಿ ನೀಡಿದರು. ಸಾವಿರಾರು ಸಾಲದ ಕಾಗದಗಳನ್ನು ಸುಟ್ಟು ಹಾಕಿದರು. ಮನುಷ್ಯ ಹೋಗುವಾಗ ಏನನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಮನೆಯ ತುರ್ತಿಗಾಗಿ ಮಾಡಿದ ಸಾಲಗಳು ಯಾವುವೂ ಸಾಲಗಳಲ್ಲ ಎಂದು ಸಂದೇಶ ಸಾರಿದರು. ಭೀಕರ ಬರಗಾಲದಲ್ಲಿ ಅನೇಕ ದಾಸೋಹ ನಡೆಸಿದರು.

ಇಳಕಲ್ಲನ ಗಂಗಮ್ಮನನ್ನು ಅಣ್ಣಯ್ಯ, ಜಾಲಿಹಾಳಿನ ಅಂದಮ್ಮನನ್ನು ತಮ್ಮಯ್ಯ 1835ರಲ್ಲಿ ಮದುವೆಯಾದರು. ಅಣ್ಣಯ್ಯನವರಿಗೆ ಮಾತ್ರ ಮಕ್ಕಳಾದವು, ಆದರೆ ತಮ್ಮಯ್ಯನವರು ಪೂರ್ಣವಾಗಿ ಅಧ್ಯಾತ್ಮ ಹಾಗೂ ಪವಾಡಗಳ ಕಡೆಗೆ ಒಲವು ತೋರಿದರು.

ಕಲಿಯುಗದಲ್ಲಿ ದುಷ್ಟರ ಹಾವಳಿ ಹೆಚ್ಚಾಗಿ ಸತ್ಯವೇ ಸುಳ್ಳಾಗುವುದು, ಸುಳ್ಳೇ ಸತ್ಯವಾಗಲಿದೆ ಎಂದು ತಮ್ಮಯ್ಯ ಶರಣರು ಭವಿಷ್ಯ ವಾಣಿಯನ್ನು ನುಡಿದರು. ಒಂದು ವಾರ ಮುಂಚಿತವಾಗಿ ಇದೇ ದಿನ ಲಿಂಗೈಕ್ಯರಾಗುವುದಾಗಿ ಹಾಗೂ ಐದು ವರ್ಷದ ನಂತರ ಅಣ್ಣಯ್ಯ ಶರಣರು ಲಿಂಗೈಕ್ಯರಾಗುತ್ತಾರೆ ಎನ್ನುವ ಭವಿಷ್ಯವನ್ನು ತಮ್ಮಯ್ಯ ಶರಣರು ನುಡಿದಿದ್ದರು. ಅದರಂತೆ ಎಲ್ಲವೂ ನಡೆದಿರುವ ಕುರಿತು ಗ್ರಾಮದ ಹಿರಿಯ ಸಂಗಮೇಶ ಮೆಣಸಗಿ ತಿಳಿಸಿದರು.

1884ರಲ್ಲಿ ತಮ್ಮಯ್ಯ, 1889ರಲ್ಲಿ ಅಣ್ಣಯ್ಯ ಲಿಂಗೈಕ್ಯರಾದರು. ಐಕ್ಯರಾದ 8 ದಿನಗಳ ನಂತರ ತಮ್ಮಯ್ಯ ಶರಣರು ಮುಶೀಗೇರಿ ಹಾಗೂ ನೆಲ್ಲೂರ ಗ್ರಾಮದ ಜಂಗಮರಿಗೆ ದರ್ಶನ ನೀಡಿದರು ಎನ್ನಲಾಗಿದೆ.

ನಮ್ಮ ಮನೆತನದ ಉಭಯ ಶರಣರು ಪವಾಡಗಳ ಮೂಲಕ ಆಧ್ಯಾತ್ಮದ ದೀಪ ಹಚ್ಚಿದ್ದಾರೆ. ಅದರ ಬೆಳಕು ಎಲ್ಲೆಡೆ ಪಸರಿಸಿದೆ
- ಬಸವರಾಜ ಕುದರಿ, 4ನೇ ತಲೆಮಾರಿನ ಮೊಮ್ಮಗ

ಧಾರ್ಮಿಕ ಕಾರ್ಯಗಳ ಕೇಂದ್ರವಾದ ಗದ್ದುಗೆ

ಜಕ್ಕಲಿ ಗ್ರಾಮದಲ್ಲಿ ಜಾತಿ ಮತ ಪಂಥದ ಭೇದವಿಲ್ಲದೆ ಉಭಯ ಶರಣರ ಗದ್ದುಗೆಗೆ ನಡೆದುಕೊಳ್ಳುತ್ತಾರೆ. ಇಂದಿಗೂ ಯಾವುದೇ ಧಾರ್ಮಿಕ ಕಾರ್ಯಗಳು ನಡೆದರೂ ಇಲ್ಲಿಂದಲೇ ಆರಂಭವಾಗುತ್ತವೆ. ಮೊಹರಂನಲ್ಲಿ ಅಲೈದೇವರು ಅನ್ನದಾನೇಶ್ವರ ಮಠದ ಪಲ್ಲಕ್ಕಿ ಇಲ್ಲಿಗೆ ಬಂದು ಪೂಜೆಗೊಂಡು ಹೋಗುತ್ತವೆ. ವೀರಭದ್ರೇಶ್ವರ ಕಲ್ಮೇಶ್ವರ ದೇವಸ್ಥಾನದ ಕಳಸ ಇಲ್ಲಿಂದಲೇ ಗುಡಿಗೆ ಹೋಗುತ್ತವೆ. ಹಾಗಾಗಿ ಇದು ಗ್ರಾಮದ ಧಾರ್ಮಿಕ ಕೇಂದ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.