ADVERTISEMENT

ತುಂಗಭದ್ರಾ ನದಿಗೆ ಶಾಸಕರ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2025, 14:23 IST
Last Updated 20 ಜನವರಿ 2025, 14:23 IST
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಹಸಿರು ಬಣ್ಣಕ್ಕೆ ತಿರುಗಿರುವ ತುಂಗಭದ್ರಾ ನದಿಗೆ ಶಾಸಕ ಡಾ.ಚಂದು ಲಮಾಣಿ ಅವರು ಭೇಟಿ ನೀಡಿ ಪರಿಶೀಲಿಸಿದರು
ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಹಸಿರು ಬಣ್ಣಕ್ಕೆ ತಿರುಗಿರುವ ತುಂಗಭದ್ರಾ ನದಿಗೆ ಶಾಸಕ ಡಾ.ಚಂದು ಲಮಾಣಿ ಅವರು ಭೇಟಿ ನೀಡಿ ಪರಿಶೀಲಿಸಿದರು   

ಮುಂಡರಗಿ: ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಹಸಿರು ಬಣ್ಣಕ್ಕೆ ತಿರುಗಿರುವ ತುಂಗಭದ್ರಾ ನದಿಗೆ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಮತ್ತಿತರರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿ, ತಾಲ್ಲೂಕಿನ ಶೀರನಹಳ್ಳಿ, ಗಂಗಾಪುರ ಹಾಗೂ ಕೊರ್ಲಹಳ್ಳಿ ಗ್ರಾಮದ ಬಳಿಯ ನದಿ ನೀರು ಮಾತ್ರ ಗಾಢ ಹಸಿರು ಬಣ್ಣಕ್ಕೆ ತಿರುಗಿದೆ. ನೀರಿನಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಪಾಚಿಯಿಂದ ನೀರು ಹಸಿರಾಗುವಂತಿದ್ದರೆ ಇಡೀ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಗಂಗಾಪುರ ಹಾಗೂ ಕೊರ್ಲಹಳ್ಳಿ ಗ್ರಾಮದ ಮಧ್ಯದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆಯೊಂದು ಕಾರ್ಯನಿರ್ವಹಿಸುತ್ತಿದ್ದು, ತಿಳಿದೊ, ತಿಳಿಯದೆಯೋ ಕಾರ್ಖಾನೆಯ ತ್ಯಾಜ್ಯ ನದಿ ನೀರನ್ನು ಸೇರಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿರುವ ನಿಖರ ಕಾರಣ ತಿಳಿದುಬರಲಿದೆ ಎಂದು ತಿಳಿಸಿದರು.

ADVERTISEMENT

ಶಿಂಗಟಾಲೂರ, ಶೀರನಹಳ್ಳಿ, ಗಂಗಾಪೂರ, ಕೊರ್ಲಹಳ್ಳಿ ಮೊದಲಾದ ನದಿ ದಂಡೆಗಳ ರೈತರು ನೂರಾರು ಎಕರೆ ಪ್ರದೇಶದಲ್ಲಿ ಭತ್ತ ಹಾಗೂ ಮತ್ತಿತರ ಪೈರು ನಾಟಿ ಮಾಡಿದ್ದು, ಹಸಿರು ಬಣ್ಣಕ್ಕೆ ತಿರುಗಿರುವ ನದಿ ನೀರಿನಿಂದ ಪೈರೆಲ್ಲ ಹಳದಿ ಬಣ್ಣಕ್ಕೆ ತಿರುಗುತ್ತಲಿದೆ ಎಂದು ಸ್ಥಳದಲ್ಲಿದ್ದ ರೈತರು ಶಾಸಕರಿಗೆ ತಿಳಿಸಿದರು.

ಪ್ರಯೋಗಾಲಯದ ವರದಿ ಬಂದ ನಂತರ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ರೈತರಿಗೆ ಭರವಸೆ ನೀಡಿದರು.

ನದಿ ದಂಡೆಯ ಗ್ರಾಮಗಳ ಜನರು ನದಿ ನೀರು ಬಳಸದಂತೆ ಮುಂಜಾಗೃತೆ ವಹಿಸಬೇಕು. ಈ ಕುರಿತು ಎಲ್ಲ ಗ್ರಾಮಗಳಲ್ಲಿ ಡಂಗೂರ ಸಾರುವುದು ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಅವರಿಗೆ ಸೂಚಿಸಿದರು.

ತಜ್ಞರೊಂದಿಗೆ ಸಕ್ಕರೆ ಕಾರ್ಖಾನೆಗೆ ತೆರಳಿ ಕಾರ್ಖಾನೆಯ ತ್ಯಾಜ್ಯ ನದಿಯನ್ನು ಸೇರುತ್ತದೆಯೋ, ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ನೀರು ಹಸಿರಾಗಲು ಕಾರಣವಾಗಿರುವ ಅಂಶಗಳನ್ನು ಪತ್ತೆ ಹಚ್ಚಿ ಸಮಗ್ರ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರ್ ಎರ್‍ರಿಸ್ವಾಮಿ.ಪಿ.ಎಸ್., ಬಿಜೆಪಿ ಮುಂಡರಗಿ ಮಂಡಲದ ಅದ್ಯಕ್ಷ ಹೇಮಗಿರೀಶ ಹಾವಿನಾಳ ಹಾಗೂ ನದಿ ದಂಡೆಯ ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.