
ಲಕ್ಷ್ಮೇಶ್ವರ: ‘ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಾನವೀಯ ಸಂಬಂಧಗಳು ಕಡಿದು ಹೋಗಿದ್ದು, ಅದೊಂದು ವ್ಯಸನವಾಗಿ ಮಾರ್ಪಟ್ಟಿದೆ’ ಎಂದು ನಿವೃತ್ತ ಹಂಗಾಮಿ ಕುಲಪತಿ ಓಂಕಾರ ಕಾಕಡೆ ಹೇಳಿದರು.
ತಾಲ್ಲೂಕಿನ ಶಿಗ್ಲಿಯ ಜಿಎಸ್‍ಎಸ್ ಸಂಸ್ಥೆಯಲ್ಲಿ ಶುಕ್ರವಾರ ಜರುಗಿದ ಶಾಲಾ ಉತ್ಸವ ಕಾರ್ಯಕ್ರಮದಲ್ಲಿ ‘ಸಾಮಾಜಿಕ ಮಾಧ್ಯಮಗಳ ಬಳಕೆ ವರವೋ ಶಾಪವೋ’ ವಿಷಯ ಕುರಿತು ಮಾತನಾಡಿದರು.
‘ಮೊಬೈಲ್ ಬಳಕೆ ಚಾಕೂ ಇದ್ದಂತೆ. ಚಾಕೂವಿನಿಂದ ಹಣ್ಣನ್ನೂ ಕತ್ತರಿಸಬಹುದು. ಕೊಲೆಯನ್ನೂ ಮಾಡಬಹುದು. ಅದನ್ನು ಬಳಸುವವರ ವಿವೇಕದ ಮೇಲೆ ಅದರ ಪರಿಣಾಮ ಉಂಟಾಗುತ್ತದೆ. ಹಾಗೆಯೇ ಮೊಬೈಲ್ ಬಳಕೆ ಕೂಡ ಅದನ್ನು ಬಳಸುವವರ ಮೇಲೆ ಅದರ ಅನುಕೂಲ ಅನಾನುಕೂಲತೆಗಳು ಇವೆ’ ಎಂದರು.
‘ಗಂಟೆಗಟ್ಟಲೆ ರೀಲ್ಸ್ ನೋಡಲು, ಪಬ್ಜಿ ಆಡಲು, ಗೇಮ್ ಆಡಲು ಬಳಸುವುದರಿಂದ ಸಾಮಾಜಿಕ ಮಾಧ್ಯಮ ಶಾಪವಾಗುತ್ತದೆ. ಅಧ್ಯಯನವೊಂದರ ಪ್ರಕಾರ ಯುಕೆಜಿ ಮತ್ತು ಎಲ್‌ಕೆಜಿ ಮಕ್ಕಳು ದಿನಕ್ಕೆ ಒಂದೂವರೆ ಗಂಟೆ, ಪ್ರಾಥಮಿಕ ಶಾಲೆ ಮಕ್ಕಳು ಎರಡು, ಪ್ರೌಢಶಾಲಾ ಮಕ್ಕಳು ಮೂರು ಮತ್ತು ಕಾಲೇಜುಗಳಿಗೆ ಹೋಗುವ ಯುವ ಜನರು ದಿನಕ್ಕೆ ಐದಾರು ಗಂಟೆ ಮೊಬೈಲ್ ಬಳಸುತ್ತಾರೆ. ಇದೇ ಸಮಯವನ್ನು ವಿದ್ಯಾರ್ಥಿಗಳು ಓದಿಗಾಗಿ ಕಳೆದರೆ ಹೆಚ್ಚಿನ ಅಂಕ ಬರುತ್ತವೆ. ಇನ್ನು ತಾಯಂದಿರು ಮಕ್ಕಳ ಕೈಗೆ ಮೊಬೈಲ್ ಕೊಡಲೇಬಾರದು‘ ಎಂದು ತಿಳಿಸಿದರು.
ರಾಜರತ್ನ ಹುಲಗೂರ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಸ್. ರಾಮನಗೌಡ್ರ, ನಿರ್ಮಲ ಅರಳಿ, ಜ್ಯೋತಿ ಗಾಯಕವಾಡ ಮಾತನಾಡಿದರು. ಈ ಸಂದರ್ಭದಲ್ಲಿ ರಂಜನ ಪಾಟೀಲ, ಚಾಮರಾಜ ಹುಲಗೂರ, ಪ್ರವೀಣ ಹುಲಗೂರ, ಯಲ್ಲಪ್ಪ ತಳವಾರ, ಶಿವಾನಂದ ಮೂಲಿಮನಿ, ಪ್ರಭಣ್ಣ ಪವಾಡದ, ನಾನುಗೌಡ ಪಾಟೀಲ, ಮಂಜುನಾಥ ಶಂಭೋಜಿ, ಪ್ರೌಢ ಶಾಲೆ ಶಿಕ್ಷಕ ಎಲ್.ಎಸ್. ಅರಳಹಳ್ಳಿ, ಪ್ರಾಥಮಿಕ ಶಾಲಾ ಶಿಕ್ಷಕಿ ಆರ್.ಎಸ್. ಕೆಂಚಪ್ಪನವರ, ಶಿಕ್ಷಕ ಅಶೋಕ, ಗೌರಮ್ಮ ಮರಡಿ ಇದ್ದರು.
‘ಶೇ 13ರಷ್ಟು ಮಕ್ಕಳು ಮಾನಸಿಕ ರೋಗಕ್ಕೆ ಬಲಿ’ ‘
ರೀಲ್ಸ್ ನೋಡುವಾಗ ಅಶ್ಲೀಲ ಚಿತ್ರಗಳು ಬರುತ್ತವೆ. ಒಮ್ಮೆ ಮಗು ಇಂಥ ಚಿತ್ರ ನೋಡಿದರೆ ಪದೇ ಪದೇ ಅದನ್ನೇ ನೋಡಲು ತವಕಿಸುತ್ತದೆ. ಕಾರಣ ಬಹಳ ಎಚ್ಚರಿಕೆಯಿಂದ ಇರಬೇಕು. ನಾವು ಮೊಬೈಲ್ ದಾಸರಾಗಿದ್ದೇವೆ’ ಎಂದು . ಶೇ.13ರಷ್ಟು ವಿದ್ಯಾರ್ಥಿಗಳು ಇದರಿಂದ ಹುಚ್ಚರಾಗಿದ್ದಾರೆ. ಮೊಬೈಲ್ ವಿಷ ಜಂತುವಾಗಿದ್ದು ಗೊತ್ತಿಲ್ಲದೆ ಅದು ನಮ್ಮನ್ನು ಆವರಿಸಿಕೊಳ್ಳುತ್ತದೆ. ಇದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಸತತ ಮೊಬೈಲ್ ಬಳಸುವ ಶೇ.೨೩ರಷ್ಟು ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ತಲೆದೋರಿದೆ. ಇದು ಗಂಭೀರ ಸಮಸ್ಯೆ. ಕಾರಣ ಮೊಬೈಲ್ ನಿಯಂತ್ರಣ ಅಗತ್ಯ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.