ADVERTISEMENT

ಸಣ್ಣ ಕೈಗಾರಿಕೆಗಳು ದೇಶದ ಆರ್ಥಿಕ ಬೆನ್ನೆಲುಬು: ಟಿ.ಎಸ್.ಮಲ್ಲಿಕಾರ್ಜುನ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:40 IST
Last Updated 21 ಆಗಸ್ಟ್ 2025, 4:40 IST
ಗದಗ ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ, ಕೈಗಾರಿಕಾ ವಸ್ತುಪ್ರದರ್ಶನ, ಗದಗ ಉತ್ಸವದ ರಜತ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಿತು
ಗದಗ ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ, ಕೈಗಾರಿಕಾ ವಸ್ತುಪ್ರದರ್ಶನ, ಗದಗ ಉತ್ಸವದ ರಜತ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಿತು   

ಗದಗ: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕ ಕ್ಷೇತ್ರದ ಬೆನ್ನೆಲುಬಾಗಿದ್ದು, ದೇಶದ ಜಿಡಿಪಿಯಲ್ಲಿ ಶೇ 30ರಷ್ಟು ಕೊಡುಗೆ ಎಂಎಸ್‌ಎಂಇಯಿಂದಲೇ ಹರಿದು ಬರುತ್ತದೆ’ ಎಂದು ಗದಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ಎಸ್.ಮಲ್ಲಿಕಾರ್ಜುನ ಹೇಳಿದರು.

ನಗರದ ಕೆ.ಎಚ್.ಪಾಟೀಲ ಸಭಾಭವನದಲ್ಲಿ ನಡೆದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ, ಕೈಗಾರಿಕಾ ವಸ್ತುಪ್ರದರ್ಶನ, ಗದಗ ಉತ್ಸವದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಶ್ರೇಷ್ಠ ಮಳಿಗೆ ಪ್ರಶಸ್ತಿ’ ಪ್ರದಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಕೈಗಾರಿಕೆಗಳನ್ನು ಬೆಳೆಸುವ ಉದ್ದೇಶದಿಂದಲೇ ಸರ್ಕಾರ ಪ್ರತಿ 5 ವರ್ಷಕ್ಕೊಮ್ಮೆ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರುತ್ತಿದೆ. ಕೈಗಾರಿಕಾ ವಲಯದಲ್ಲಿ ಆಸಕ್ತಿ ಇದ್ದವರು ಕೇಂದ್ರವನ್ನು ಸಂಪರ್ಕಿಸಿದರೇ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಗದಗ ಜಿಲ್ಲೆ ಸಂಘಟಿಸುವ ಗದಗ ಉತ್ಸವ ಸಂಭ್ರಮದ್ದಾಗಿದೆ. ಎಲ್ಲೂ ನೋಡಲು ಸಿಗದ ವಿಶೇಷ ಉತ್ಸವ ಇದಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಮಾತನಾಡಿ, ‘ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಸುವರ್ಣ ಮಹೋತ್ಸವ ಹಾಗೂ ಗದಗ ಉತ್ಸವದ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ’ ಎಂದರು.

‘ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯು ಕೇವಲ ವ್ಯವಹಾರ ಮತ್ತು ಉದ್ಯಮ ಬೆಳವಣಿಗೆಗೆ ಸೀಮಿತವಾಗದೇ ಸಮುದಾಯಮುಖಿಯಾಗಿರುವ ಕಲೆ, ಸಾಹಿತ್ಯ, ಶಿಕ್ಷಣ, ಸಾಂಸ್ಕೃತಿಕ ಸೇರಿದಂತೆ ಸಾರ್ವಜನಿಕ ವಲಯದ ಎಲ್ಲ ರಂಗಗಳಲ್ಲೂ ವ್ಯಾಪಿಸಿದೆ. ಸುವರ್ಣ ಮತ್ತು ರಜತ ಮಹೋತ್ಸವದ ಯಶಸ್ಸಿನಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಎಲ್ಲ ಪದಾಧಿಕಾರಿಗಳ ಶ್ರಮ ಅಡಗಿದೆ’ ಎಂದರು.

ಶ್ರೇಷ್ಠ ಮಳಿಗೆ ಪ್ರಶಸ್ತಿಗೆ ಭಾಜನರಾಗಿರುವ ಕೃಷಿ ಪರಿವಾರ ಸಾವಯವ ಮತ್ತು ಕಪ್ಪತಗುಡ್ಡ ಗೋಶಾಲೆ, ಬಿ.ಡಿ.ತಟ್ಟಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್‌, ಗದುಗಿನ ರಾಜದತ್ತ ಜುವೆಲರ್ಸ್‌, ಸ್ಪರ್ಶ ಫ್ರೂಟ್ಸ್ ಬೆಂಗಳೂರು ತಂಡಕ್ಕೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿತು.

ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ಎಚ್.ಬಿ.ತಾರಕೇಶ್ವರ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಅಜಿತ್‌ ನಾಯಕ, ಚೇರಮನ್ ಆನಂದ ಪೋತ್ನಿಸ್, ಕೋ ಚೇರಮನ್ ಸದಾಶಿವಯ್ಯ ಮದರಿಮಠ, ಸಂಸ್ಥೆಯ ಪದಾಧಿಕಾರಿಗಳಾದ ವಿಜಯ ಕುಮಾರ ಮಾಟಲದಿನ್ನಿ, ಎಸ್.ಆರ್.ನಾಲತ್ವಾಡಮಠ, ಅಶೋಕಗೌಡ ಪಾಟೀಲ, ರಾಘವೇಂದ್ರ ಎಸ್.ಕಾಲವಾಡ, ಶರಣಬಸಪ್ಪ ಗುಡಿಮನಿ, ಸಂಜಯ ಬಾಗಮಾರ, ಸೋಮನಾಥ ಜಾಲಿ, ಅಶೋಕ ನಿಲೂಗಲ್, ಮಹಿಳಾ ವಿಭಾಗದ ಪದಾಧಿಕಾರಿಗಳಾದ ನಂದಾ ಸಿ. ಬಾಳಿಹಳ್ಳಿಮಠ, ದೀಪಾ ಎಸ್.ಗದಗ, ಸುಷ್ಮಾ ಎಸ್.ಜಾಲಿ, ಸುಜಾತಾ ಎಸ್.ಗುಡಿಮನಿ, ಜ್ಯೋತಿ ಆರ್. ದಾನಪ್ಪಗೌಡ್ರ, ಲಲಿತಾ ಜಿ.ತಡಸದ, ಸುಧಾ ಸಿ. ಹುಣಸಿಕಟ್ಟಿ, ಪೂರ್ಣಿಮಾ ಕೆ.ಆಟದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.