ADVERTISEMENT

ಮುಳಗುಂದ | ಕಾಲುವೆ ಹೂಳು ತೆರವಿಗೆ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 17 ಮೇ 2025, 5:37 IST
Last Updated 17 ಮೇ 2025, 5:37 IST
ಮುಳಗುಂದ ಅಬ್ಬಿಕೆರೆಗೆ ನೀರಿನ ಮೂಲವಾಗಿರುವ ಮಳೆ ನೀರು ಹರಿಯುವ ಕಾಲುವೆಯಲ್ಲಿ ಕೊಳಚೆ ಹೂಳು ತುಂಬಿರುವುದು.
ಮುಳಗುಂದ ಅಬ್ಬಿಕೆರೆಗೆ ನೀರಿನ ಮೂಲವಾಗಿರುವ ಮಳೆ ನೀರು ಹರಿಯುವ ಕಾಲುವೆಯಲ್ಲಿ ಕೊಳಚೆ ಹೂಳು ತುಂಬಿರುವುದು.   

ಮುಳಗುಂದ: ಇಲ್ಲಿನ ಐತಿಹಾಸಿಕ ಅಬ್ಬಿಕೆರೆಗೆ ನೀರಿನ ಮೂಲವಾಗಿರುವ ಹೊಲದ ನೀರು ಹರಿದು ಬರುವ ಕಾಲುವೆಯಲ್ಲಿ ಸಾಕಷ್ಟು ಪ್ರಮಾಣದ ಹೂಳು ತುಂಬಿಕೊಂಡಿದ್ದರೂ ಸಮಸ್ಯೆ ಬಗೆಹರಿಸಲು ಕ್ರಮವಹಿಸದ ಸ್ಥಳೀಯ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೂಳೆತ್ತೆದ ಕಾರಣ ಮಳೆ ಸುರಿದರೆ ನೀರಿನ ಜೊತೆಗೆ ಪ್ಲ್ಯಾಸ್ಟಿಕ್ ತ್ಯಾಜ್ಯ, ಕೊಳೆಚೆ ನೀರು ಸಹ ಕೆರೆ ಸೇರುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಅಬ್ಬಿಕೆರೆಗೆ ನೀರಿನ ಮೂಲವಾಗಿ ರುವ ಪಟ್ಟಣದ ಪೂರ್ವ ದಿಕ್ಕಿನ ಸಾವಿರಾರು ಎಕರೆ ಭೂ ಪ್ರದೇಶದಲ್ಲಿ ಬಿದ್ದ ಮಳೆ ನೀರು ಲಕ್ಷ್ಮೇಶ್ವರ ರಸ್ತೆ ಹತ್ತಿರ ಕಾಲುವೆ ಮೂಲಕ ಹರಿದು ಕೆರೆ ಸೇರುತ್ತದೆ. ಈ ಕಾರಣದಿಂದ ಹಂತ ಹಂತವಾಗಿ ಕಾಲುವೆ ಕಾಮಗಾರಿ ಕೈಗೊಳ್ಳಲಾಗಿದ್ದು, ಇನ್ನಷ್ಟು ಕಾಲುವೆ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ.

ಈಗ ನಿರ್ಮಿಸಿರುವ ಕಾಲುವೆಯಲ್ಲಿ ಚರಂಡಿ ನೀರಿನಿಂದ ಹೂಳು ತುಂಬಿಕೊಂಡಿದೆ. ಕೆಲವು ಭಾಗದಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ಕಾಲವೆ ಮುಚ್ಚಿದೆ. ಎರಡು ವರ್ಷಗಳಿಂದ ಸ್ಥಳೀಯ ಪಟ್ಟಣ ಪಂಚಾಯಿತಿ ಹೂಳು ತೆರವಿಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಲಕ್ಷ್ಮೇಶ್ವರ ರಸ್ತೆಗೆ ಹೊಂದಿಕೊಂಡಿರುವ ದೊಡ್ಡ ಕಾಲವೆಗೆ ಊರಿನ ಕೆಲವು ಭಾಗದ ಚರಂಡಿ ನೀರು ಹರಿ ಬಿಡಲಾಗಿದೆ. ಇದಕ್ಕೆ ಪ್ರತ್ಯೇಕವಾಗಿ ಚರಂಡಿ ನಿರ್ಮಾಣ ಮಾಡಿದ್ದರೂ ಅದು ಅವೈಜ್ಞಾನಿಕವಾಗಿ ನಿರ್ಮಿಸಿದ ಪರಿಣಾಮ ಚರಂಡಿ ನೀರು ಪೂರ್ಣ ಪ್ರಮಾಣದಲ್ಲಿಯೇ ಕಾಲುವೆಗೆ ಹರಿಯುತ್ತಿದೆ. ಇದರಿಂದಾಗಿ ಸತತ ನೀರು ಬರುವುದರಿಂದ ಕೊಳಚೆ ಉಂಟಾಗಿ ಹೂಳು ತುಂಬಿಕೊಂಡಿದೆ. ಚರಂಡಿ ನೀರಿನೊಂದಿಗೆ ಅಧಿಕ ಪ್ರಮಾಣದ ಪ್ಲ್ಯಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ಕಾಲುವೆ ನಿರ್ಮಾಣ ಆಗದೇ ಇರುವ ಜಾಗದಲ್ಲಿ ಹಲವು ದಿನಗಳಿಂದ ಕೊಳಚೆ ನಿಂತು ಪಾಚಿ ಹುಲ್ಲು ಬೆಳೆದು ನಿಂತಿದೆ.

ಕಾಲುವೆಯಲ್ಲಿ ಹೂಳು ತುಂಬಿದ ಪರಿಣಾಮವಾಗಿ ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಕಾಲುವೆ ತುಂಬಿ ಹರಿದು ಪಕ್ಕದ ಹೊಲಕ್ಕೆ ಹಾನಿ ಉಂಟಾಗಿತ್ತು.

ಇಷ್ಟಾದರೂ ಈವರೆಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಹೂಳು ತೆಗೆಸುವ ಕೆಲಸ ಕೈಗೊಂಡಿಲ್ಲ. ಈ ಮಳೆಗಾಲದಲ್ಲಿ ಮತ್ತೆ ಅದೇ ಸ್ಥಿತಿ ಬರುವ ಸಾಧ್ಯತೆ ಇದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಕಣವಿ ಆಕ್ರೋಶ ಹೊರಹಾಕಿದ್ದಾರೆ.

ಹುಲ್ಲು ಬೆಳೆದು ಕಾಲುವೆ ಮುಚ್ಚಿ ಹೋಗಿರುವುದು
ಪ್ರಸ್ತುತ ಅಂದಾಜು ₹3 ಕೋಟಿ ರೂಪಾಯಿ ವೆಚ್ಚದಲ್ಲಿ ಅಬ್ಬಿಕೆರೆ ಅಭಿವೃದ್ದಿ ಕಾಮಗಾರಿ ನಡೆದಿದೆ. ಜತೆಗೆ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ನೀರಿನ ಮೂಲದಲ್ಲಿ ಉಂಟಾಗುತ್ತಿರುವ ಮಲಿನತೆ ನಿವಾರಣೆಗೂ ಸ್ಥಳೀಯ ಆಡಳಿತ ಗಮನ ಹರಿಸಬೇಕು
ಮಹಾಂತೇಶ ಕಣವಿ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.