ಮುಳಗುಂದ: ಪಟ್ಟಣ ಸೇರಿದಂತೆ ಬಸಾಪೂರ, ಶೀತಾಲಹರಿ ಗ್ರಾಮಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಶೌಚಾಲಯಗಳು ದಯನೀಯ ಸ್ಥಿತಿಯಲ್ಲಿವೆ. ನಿರ್ವಹಣೆ ಕೊರೆತೆ, ನೀರಿನ ಅಭಾವದಿಂದ ಬಂದ್ ಮಾಡಲಾಗಿದ್ದು, ಮಕ್ಕಳು ಶೌಚಾಲಯ ಬಳಸದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮೀಪದ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಹಳೆಯದಾಗಿದ್ದು, ಪಾಳು ಬಿದ್ದಿದೆ. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ ಇದೆ. ಆದರೆ, ಶೌಚಗೃಹದ ಸುತ್ತಮುತ್ತ ಕಸ ಬೆಳೆದು, ವಿಷ ಜಂತುಗಳ ತಾಣವಾಗಿದೆ. ದುರಸ್ತಿ ಕಾರ್ಯ ನಡೆದಿಲ್ಲ. ಈಚೆಗೆ ಹೊಸ ಶೌಚಾಲಯ ನಿರ್ಮಾಣ ಮಾಡಲಾಗಿದೆ. ನೀರಿನ ಸಮಸ್ಯೆಯಿಂದಾಗಿ ಬಳಕೆಗೆ ಇನ್ನೂ ಮುಕ್ತವಾಗಿಲ್ಲ.
ಪಟ್ಟಣದ ವಿದ್ಯಾನಗರದಲ್ಲಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ, ನೀರಿನ ಟ್ಯಾಂಕ್ ಸುಸ್ಥಿತಿಯಲ್ಲಿದ್ದರೂ ನೀರಿನ ಸೌಲಭ್ಯ ಇನ್ನೂ ದೊರಕಿಲ್ಲ. ನೀರು ಪೂರೈಕೆಗೆ ಪೈಪ್ ಅಳವಡಿಸಲಾಗಿದೆ. ಆದರೆ, ಸ್ಥಳೀಯ ಪಟ್ಟಣ ಪಂಚಾಯಿತಿ ನೀರು ಒದಗಿಸಿಲ್ಲ. ಹೀಗಾಗಿ ಶೌಚಾಲಯವನ್ನು ಮಕ್ಕಳು ಬಳಸುತ್ತಿಲ್ಲ.
ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲೂ ಸಹ ಶೌಚಾಲಯ ನಿರ್ವಹಣೆ ಆಗಿಲ್ಲ. ಗಲೀಜು ವಾತಾವರಣದಲ್ಲೇ ಮಕ್ಕಳು ಶೌಚಾಲಯ ಬಳಸುವ ಸ್ಥಿತಿ ಇದೆ.
ಸೊರಟೂರ ಗ್ರಾಮದ ಪಬ್ಲಿಕ್ ಶಾಲೆಯಲ್ಲಿ ಶೌಚಾಲಯ ನಿರ್ವಹಣೆ ಮಾಡಲು ಕಷ್ಟ ಎನ್ನುವ ಕಾರಣಕ್ಕೆ ಬಾಗಿಲು ಮುಚ್ಚಿ ಬೀಗ ಹಾಕಲಾಗಿದೆ. ಹೆಣ್ಣು ಮಕ್ಕಳ ಶಾಲೆಯಲ್ಲಿ ಶೌಚಾಲಯ ಇದ್ದೂ, ಇಲ್ಲದಂತಾಗಿದೆ.
‘ಗದಗ ತಾಲ್ಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ ಒಟ್ಟು 126 ಶಾಲೆಗಳಲ್ಲಿ ಬಹುತೇಕ ಶೌಚಾಲಯಗಳು ಇವೆ. ಹಳೆ ಶೌಚಾಲಯಗಳ ದುರಸ್ತಿಗೆ ಶಾಲೆ ಹಂತದಲ್ಲೇ ₹10 ಸಾವಿರ ವೆಚ್ಚದ ಕಾಮಗಾರಿ ಕೈಗೊಳ್ಳಲು ಆದೇಶ ಮಾಡಲಾಗಿದೆ. ಅದಕ್ಕಿಂತ ಹೆಚ್ಚಿನ ಅನುದಾನ ವೆಚ್ಚವಾಗಲಿರುವ ಕೆಲಸಗಳ ಮಾಹಿತಿ ಪಡೆದು, ಈಗಾಗಲೇ ಜಿಲ್ಲಾ ಹಂತಕ್ಕೆ ನೀಡಲಾಗಿದೆ. ಎರಡು ಹಂತದಲ್ಲಿ ಕ್ರಿಯಾಯೋಜನೆ ಸಿದ್ದವಾಗಿದೆ’ ಎಂದು ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ ತಿಳಿಸಿದರು.
ಬಳಕೆಗೆ ಮುಕ್ತವಾಗದ ಶೌಚಾಲಯಗಳು ಗಲೀಜು ವಾತಾವರಣದಲ್ಲೇ ಶೌಚಾಲಯ ಬಳಸುವ ಸ್ಥಿತಿ
ಹೊಸೂರ ಗ್ರಾಮದ ಶಾಲೆಯಲ್ಲಿ ಶೌಚಾಲಯ ಶಿಥಿಲಗೊಂಡು ಹಲವು ವರ್ಷಗಳೇ ಆಗಿದ್ದು ಈವರೆಗೂ ನಿರ್ಮಾಣ ಕಾರ್ಯ ನಡೆದಿಲ್ಲ. ಹಲವು ಬಾರಿ ಶೌಚಾಲಯ ದುರಸ್ತಿ ಕೆಲಸ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ
-ಶರಣಪ್ಪ ತಳವಾರ ಎಸ್.ಡಿ.ಎಂ.ಸಿ ಅಧ್ಯಕ್ಷ
ಶಾಲೆಗೆ ದೇಣಿಗೆ ನೀಡುವ ದಾನಿಗಳಿಂದ ಶೌಚಾಲಯ ದುರಸ್ತಿ ಮತ್ತು ಹೊಸ ನಿರ್ಮಾಣಕ್ಕೆ ಪ್ರಯತ್ನಿಸಲಾಗಿದೆ. ಶಾಲೆಗಳಿಗೆ ನೀರು ಪೂರೈಕೆ ಮಾಡುವುದು ಆಯಾ ಪಟ್ಟಣ ಗ್ರಾಮ ಪಂಚಾಯಿತಿಗಳ ಕರ್ತವ್ಯ. ಈ ಬಗ್ಗೆ ಕ್ರಮ ವಹಿಸಲಾಗುವುದು
-ವಿ.ವಿ.ನಡುವಿನಮನಿ ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ
ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾಗಬೇಕಾದ ಪರಿಸ್ಥಿತಿ: ಕಿಡಿ ‘ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಶೌಚಾಲಯ ಅತಿ ಮುಖ್ಯವಾಗಿದ್ದು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಅಗತ್ಯವಾಗಿದೆ. ಆದರೆ ಆ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಪೋಷಕರು ಕಿಡಿಕಾರಿದ್ದಾರೆ. ‘ಅನುದಾನದ ಕೊರತೆ ಸಾಧ್ಯವಾಗದ ನಿರ್ವಹಣೆ ಕಾರಣದಿಂದ ಶೌಚಾಲಯಗಳನ್ನು ನಿರ್ಲಕ್ಷಿಸಲಾಗಿದೆ. ಪ್ರೌಢ ಶಾಲೆ ಹಂತದಲ್ಲಿ ವಿದ್ಯಾರ್ಥಿನಿಯರು ಪಾಳು ಬಿದ್ದ ಜಾಗಕ್ಕೆ ಶೌಚಕ್ಕೆ ಹೋಗುವ ಸ್ಥಿತಿ ಇದೆ. ಕೆಲವು ಬಾರಿ ಮುಜುಗುರಕ್ಕೆ ಒಳಗಾದ ಪ್ರಸಂಗಗಳು ಕೂಡ ನಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ಅನಾರೋಗ್ಯ ಉಂಟಾಗುವ ಆತಂಕ ಕೂಡ ಇದೆ. ಹೀಗಾಗಿ ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.