ಗದಗ: ನಗರದ ತೀಸ್ ಬಿಲ್ಡಿಂಗ್ ಸಮೀಪ ಭೀಕರವಾಗಿ ಹತ್ಯೆಯಾಗಿದ್ದ ಹಣ್ಣಿನ ವ್ಯಾಪಾರಿಮುತ್ತು ಯಲ್ಲಪ್ಪ ಚಲವಾದಿ ಕೊಲೆ ಪ್ರಕರಣ ಭೇದಿಸಿರುವ ಗದಗ ಶಹರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮಾತನಾಡಿ, ‘ನಗರದ ಸಿಮೆಂಟ್ ವ್ಯಾಪಾರಿ ಪ್ರಕಾಶ ಆಲಿಯಾಸ್ ಫಕ್ಕೀರೇಶ, ಬಸವರಾಜ ಕೋರಿಶೆಟ್ಟರ (25), ವಿವೇಕಾನಂದ ನಗರದ ಪ್ರವೀಣ (ಪವನ್) ಯಮನಪ್ಪ ಸಕ್ರಿ (22) ಹಾಗೂ ಗ್ರೇನ್ ಮಾರ್ಕೆಟ್ ಕಮ್ಮಾರಸಾಲನಲ್ಲಿ ಹೋಟೆಲ್ ಸಪ್ಲೈಯರ್ ಆಗಿರುವ ಅಮೀರ್ ಸೋಯಲ್ ಸುಭಾನ್‍ಸಾಬ್ ನದಾಫ್ (22) ಬಂಧಿತ ಆರೋಪಿಗಳು’ ಎಂದು ಮಾಹಿತಿ ನೀಡಿದರು.
‘ಜುಲೈ 18ರಂದು ಮುತ್ತು ಯಲ್ಲಪ್ಪ ಚಲವಾದಿಯನ್ನು ಕೊಲೆ ಮಾಡಿದ್ದ ಆರೋಪಿಗಳು ತಾಲ್ಲೂಕಿನ ಹುಲಕೋಟಿ ಗ್ರಾಮದ ಟೆಕ್ಸ್ ಟೈಲ್ ಮಿಲ್ ಬಳಿ ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ಶಹರ ಠಾಣೆ ಸಿಪಿಐ ಪಿ.ವಿ.ಸಾಲಿಮಠ ನೇತೃತ್ವದ ತಂಡ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಎರಡು ಚಾಕು, ಒಂದು ಡಿಯೋ ಬೈಕ್ ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ವಿವರಿಸಿದರು.
‘ಕೊಲೆ ಪ್ರಕರಣದ ಮೊದಲ ಆರೋಪಿ ಪ್ರಕಾಶ ಕೋರಿ ಶೆಟ್ಟರ ಮೃತ ಮುತ್ತು ಚಲವಾದಿಗೆ ₹80 ಸಾವಿರ ಸಾಲ ಕೊಟ್ಟಿದ್ದ. ಹಣವನ್ನು ಮರಳಿ ಕೇಳಿದ್ದಕ್ಕೆ ಮುತ್ತು ಚಲವಾದಿ ಜೀವ ಬೆದರಿಕೆ ಹಾಕಿದ್ದ ಎಂದು ಆರೋಪಿ ಪ್ರಕಾಶ ಕೋರಿಶೆಟ್ಟರ ತಿಳಿಸಿದ್ದಾನೆ’ ಎಂದು ಅವರು ವಿವರಿಸಿದರು.
ಡಿವೈಎಸ್‍ಪಿ ಶಿವಾನಂದ ಪವಾಡಶೆಟ್ಟರ, ಸಿಪಿಐ ಪಿ.ವಿ.ಸಾಲಿಮಠ, ಬಡಾವಣೆ ಠಾಣೆ ಸಿಪಿಐ ಬಿ.ಜಿ.ಸುಬ್ಬಾಪೂರಮಠ ಹಾಗೂ ಶಹರ ಠಾಣೆ ಕ್ರೈಂ ವಿಭಾಗದ ಪಿಎಸ್‍ಐ ಗಿರಿಜಾ ಜಕ್ಕಲಿ ನೇತೃತ್ವದ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.