ADVERTISEMENT

ಸಣ್ಣಪುಟ್ಟ ಸಮಸ್ಯೆ ನಡುವೆ ಸುಸೂತ್ರ ಹೆರಿಗೆ

ಹೆರಿಗೆ ಆಸ್ಪತ್ರೆಗಳಲ್ಲಿ ರಕ್ತನಿಧಿ ಕೇಂದ್ರ ತೆರೆಯುವಂತೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:29 IST
Last Updated 18 ಜನವರಿ 2021, 2:29 IST
ಮುಂಡರಗಿಯ ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಪ್ರತಿಯೊಂದು ಹಾಸಿಗೆಗಳಿಗೆ ಒಗಿಸಲಾಗಿರುವ ಪ್ರತ್ಯೇಕ ಪರದೆಗಳು
ಮುಂಡರಗಿಯ ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಪ್ರತಿಯೊಂದು ಹಾಸಿಗೆಗಳಿಗೆ ಒಗಿಸಲಾಗಿರುವ ಪ್ರತ್ಯೇಕ ಪರದೆಗಳು   

ಗದಗ: ಕೆಲವು ತಿಂಗಳ ಹಿಂದೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ತಮ್ಮ ಹೆಂಡತಿಗೆ ಹೆರಿಗೆಯನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲೇ ಮಾಡಿಸುವ ಮೂಲಕ ಜನತೆಗೆ ಮಾದರಿಯಾಗಿದ್ದರು.

ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹೆರಿಗೆ ಮಾಡಿಸುವುದರಲ್ಲಿ, ಗರ್ಭಿಣಿ, ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಉತ್ತಮ ಎನಿಸಿಕೊಂಡಿದೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ‘ಕೆಲವರಿಗೆ’ ಮಾತ್ರ ನಗುಮೊಗದ ಸೇವೆ ನೀಡುತ್ತಾರೆ. ಉಳಿದವರ ಜತೆಗೆ ಕಠಿಣ ರೀತಿಯಲ್ಲಿ ವರ್ತಿಸುತ್ತಾರೆ ಎಂದು ಕೆಲವರು ಆರೋಪಿಸುತ್ತಾರೆ.

ಜಿಲ್ಲೆಯ ಬಹುತೇಕ ಹೆರಿಗೆ ಆಸ್ಪತ್ರೆಗಳಲ್ಲಿ ರಕ್ತ ನಿಧಿ ಕೇಂದ್ರಗಳಿಲ್ಲ. ತಾಲ್ಲೂಕು ಕೇಂದ್ರಗಳಿಗೆ ಬರುವ ತುರ್ತು ಕೇಸ್‌ಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸುತ್ತಾರೆ. ಗರ್ಭಿಣಿಯರಿಗೆ ರಕ್ತದ ಅವಶ್ಯಕತೆ ಬಿದ್ದರೆ ವೈದ್ಯರು ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌) ಅಥವಾ ಐಎಂಎ ರಕ್ತನಿಧಿಯಿಂದ ತರುವಂತೆ ಸೂಚಿಸುತ್ತಾರೆ. ಇದು ಕೆಲವರಿಗೆ ತೊಂದರೆಯಾಗಿ ಪರಿಣಮಿಸಿದೆ.

ADVERTISEMENT

‘ಕೋವಿಡ್‌–19 ಕಾರಣದಿಂದಾಗಿ ಜಿಮ್ಸ್‌ನಲ್ಲಿದ್ದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ (ಒಬಿಜಿ) ವಿಭಾಗವನ್ನು ಸಂಪೂರ್ಣವಾಗಿ ನಗರದಲ್ಲಿರುವ ದಂಡಪ್ಪ ಮಾನ್ವಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಹತ್ತು ಮಂದಿ ತಜ್ಞ ವೈದ್ಯರಿದ್ದು, ತುರ್ತು ಸಂದರ್ಭಗಳಲ್ಲಿ ಸಿಸೇರಿಯನ್‌ ಕೂಡ ಅವರೇ ಮಾಡುತ್ತಾರೆ. ತಿಂಗಳಿಗೆ ಕನಿಷ್ಠ 500ರಿಂದ 600 ಹೆರಿಗೆಗಳು ಇಲ್ಲಿ ಆಗುತ್ತವೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಲ್ಲೇದ.

‘ಪಕ್ಕದ ಹಾವೇರಿ ಜಿಲ್ಲೆ ನಮ್ಮದು. ಅಲ್ಲಿಗಿಂತ ಇಲ್ಲೇ ವೈದ್ಯರು ಚೆನ್ನಾಗಿ ನೋಡುತ್ತಾರೆ ಎಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸಿದ್ದರಿಂದ ನಾವು ಮಗಳ ಹೆರಿಗೆಯನ್ನು ದಂಡಪ್ಪ ಮಾನ್ವಿ ಆಸ್ಪತ್ರೆಯಲ್ಲೇ ಮಾಡಿಸುವ ನಿರ್ಧಾರ ಮಾಡಿದೆವು. ಕೆಲವು ಕಾರಣಗಳಿಂದಾಗಿ ಸಹಜ ಹೆರಿಗೆ ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಎ ಪಾಸಿಟಿವ್‌ ರಕ್ತ ಬೇಕಿದ್ದು, ಬೇಗ ತಂದು ಕೊಟ್ಟರೆ ಸಂಜೆ ವೇಳೆಗೆ ಸಿಸೇರಿಯನ್‌ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ’ ಎಂದು ಶಸ್ತ್ರಚಿಕಿತ್ಸೆ ಕೊಠಡಿ ಮುಂದೆ ನಿಂತು ಕಾಯುತ್ತಿದ್ದ ಲಕ್ಷ್ಮೀ ಹೇಳಿದರು.

‘ರಕ್ತನಿಧಿ ಕೇಂದ್ರ ಜಿಮ್ಸ್‌ನಲ್ಲಿದ್ದು ತುರ್ತು ಸಂದರ್ಭದಲ್ಲಿ ಅಲ್ಲಿಂದಲೇ ರಕ್ತ ಒದಗಿಸಲಾಗುವುದು. ಐಎಂಎ ರಕ್ತನಿಧಿಯವರು ಕೂಡ ಸಹಕಾರ ನೀಡುತ್ತಾರೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಊಟ, ತಿಂಡಿ, ಬಿಸಿನೀರಿನ ವ್ಯವಸ್ಥೆ ಒದಗಿಸಲಾಗುತ್ತಿದೆ’ ಎನ್ನುತ್ತಾರೆ ಡಾ. ಪಲ್ಲೇದ.

ದಂಡಪ್ಪ ಮಾನ್ವಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಉತ್ತಮವಾಗಿದ್ದರೂ ಶುಚಿತ್ವದ ಕೊರತೆ ಕಾಡುತ್ತಿದೆ. ವಾರ್ಡ್‌ಗಳಲ್ಲಿ, ಕಾರಿಡಾರು, ಹೊರಾಂಗಣದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಬೇಕಿದೆ.

ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 60ರಿಂದ 70 ಹೆರಿಗೆಗಳು ಆಗುತ್ತವೆ. ಹೆರಿಗೆಗಾಗಿಯೇ ಪ್ರತ್ಯೇಕ ಕೊಠಡಿಯೂ ಇದೆ. ಹೆರಿಗೆ ಆದ 48 ಗಂಟೆಗಳ ಕಾಲ ಬಾಣಂತಿ ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಎರಡು ಹೊತ್ತಿನ ಊಟ, ತಿಂಡಿ ಕೊಡುವ ವ್ಯವಸ್ಥೆ ಇದೆ. ಆದರೆ, ಇನ್ನೂ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಇದರಿಂದಾಗಿ ಬಿಸಿ ನೀರಿಗಾಗಿ ಬಾಣಂತಿಯರು ಪರದಾಡುವ ಪರಿಸ್ಥಿತಿ ಇದೆ.

ಆಸ್ಪತ್ರೆಯಲ್ಲಿ ಒಬ್ಬರು ಪ್ರಸೂತಿ ತಜ್ಞರು ಇದ್ದಾರೆ. ಸರ್ಕಾರದಿಂದ ಅಗತ್ಯದ ಔಷಧಗಳು ಪೂರೈಕೆ ಆಗುತ್ತವೆ. ಆದರೆ, ಆಸ್ಪತ್ರೆಯಲ್ಲಿ ಸಿಗಲಾರದ ಔಷಧಗಳನ್ನು ಎನ್‍ಎಚ್‍ಎಂ ಯೋಜನೆಯಡಿ ಹೊರಗಡೆಯಿಂದ ತರಿಸಲಾಗುತ್ತದೆ.

‘ಲಕ್ಷ್ಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಇಲ್ಲಿಗೆ ಹೆರಿಗೆಗಾಗಿ ಬರುತ್ತಾರೆ. ಆದರೆ, ಅರವಳಿಕೆ ಮತ್ತು ಚಿಕ್ಕ ಮಕ್ಕಳ ತಜ್ಞರ ಕೊರತೆ ಇದೆ. ಜತೆಗೆ ರಕ್ತನಿಧಿಯ ಅಗತ್ಯವೂ ಇದೆ. ಇಷ್ಟು ಇದ್ದರೆ ಆಸ್ಪತ್ರೆಯಲ್ಲಿ ಸಿಸೇರಿಯನ್ ಹೆರಿಗೆ ಮಾಡಿಸಲು ಸಾಧ್ಯ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗಿರೀಶ ಮರಡ್ಡಿ ಹೇಳುತ್ತಾರೆ.

‘ಗಜೇಂದ್ರಗಡ ತಾಲ್ಲೂಕಿನ ಒಂದು ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ವಾರ್ಡ್‌ಗಳಿವೆ. ಇಲ್ಲಿ ಸಾಮಾನ್ಯ ಹೆರಿಗೆ ಮಾಡಿಸಲು ಶುಶ್ರೂಷಕಿಯರು ಇದ್ದಾರೆ. ಸಮಸ್ಯೆಗಳಿದ್ದಲ್ಲಿ ತಾಲ್ಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಬಿ.ಎಸ್.ಭಜಂತ್ರಿ ಮಾಹಿತಿ ನೀಡಿದರು.

‘ರಾತ್ರಿ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಂಡರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಅಲ್ಲಿ ವೈದ್ಯರು ಇರುವುದಿಲ್ಲ. ಅಲ್ಲದೆ ಸಾಮಾನ್ಯ ಹೆರಿಗೆ ಆಗುವ ಸಂಭವವಿದ್ದರೂ ಸಹ ಅಲ್ಲಿನ ಸಿಬ್ಬಂದಿ ನಮ್ಮಲ್ಲಿ ಉಪಕರಣಗಳಿಲ್ಲ. ನೀವು ಆಂಬುಲೆನ್ಸ್‌ ಅಥವಾ ಖಾಸಗಿ ವಾಹನಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಎನ್ನುತ್ತಾರೆ. ಹೀಗಾಗಿ ಹಣ ಖರ್ಚಾದರೂ ಪರವಾಗಿಲ್ಲ ಜನರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗದೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ’ ಎನ್ನುತ್ತಾರೆ ಗಜೇಂದ್ರಗಡ ತಾಲ್ಲೂಕಿನ ಗ್ರಾಮಸ್ಥರು.

ತಜ್ಞರ ವೈದ್ಯರ ಕೊರತೆ
ನರಗುಂದ ಪಟ್ಟಣದಲ್ಲಿ ಬಾಬಾ ಸಾಹೇಬ (ಭಾಸ್ಕರರಾವ್ ಭಾವೆ) ತಾಲ್ಲೂಕು ಸರ್ಕಾರಿ ಆಸ್ಪತ್ರೆ ಸುವ್ಯವಸ್ಥಿತವಾಗಿ ಇದೆ.

ಇಲ್ಲಿ ಪ್ರತ್ಯೇಕ ಹೆರಿಗೆ ವಾರ್ಡ್ ಇದೆಯಾದರೂ ಎಲ್ಲ ಸೌಲಭ್ಯಗಳು ಇಲ್ಲ. ಸಾಮಾನ್ಯ ಹೆರಿಗೆಗೆ ಇಲ್ಲಿ ಅವಕಾಶವಿದೆ. ಆದರೆ ಗಂಭೀರ ಸಮಸ್ಯೆಗಳಿಂದ ಕೂಡಿದ ಹೆರಿಗೆ ಆಗಬೇಕೆಂದರೆ ಪಟ್ಟಣದ ಖಾಸಗಿ ಆಸ್ಪತ್ರೆ ಅಥವಾ ಜಿಲ್ಲಾ ಕೇಂದ್ರಗಳಿಗೆ ತೆರಳಬೇಕಾದ ಸ್ಥಿತಿ ಇದೆ.

ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಹೆರಿಗೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು ಅವರು ಇರುವಾಗ ಹೆರಿಗೆಗಳು ಸುಸೂತ್ರವಾಗಿ ನಡೆಯುತ್ತವೆ. ಉಳಿದ ದಿನಗಳಲ್ಲಿ ಕಷ್ಟದ ಪರಿಸ್ಥಿತಿ ಇರುತ್ತದೆ.

ತಾಲ್ಲೂಕಿನ ಶಿರೋಳ, ಜಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಮಾನ್ಯ ಹೆರಿಗೆಗೆ ಅವಕಾಶವಿದೆ. ಚಿಕ್ಕನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರವು ಸಂಜೆಯವರಿಗೆ ತೆರೆಯಲು ಮಾತ್ರ ಅವಕಾಶ ಇದೆ. ಇಲ್ಲಿ ಹೆರಿಗೆ ಸೌಲಭ್ಯ ಇಲ್ಲವಾದ್ದರಿಂದ ಜನಸಾಮಾನ್ಯರು ಪರದಾಡುವಂತಾಗಿದೆ.

ನಾರ್ಮಲ್‌ ಡೆಲಿವರಿ ಸೇವೆ ಮಾತ್ರ ಲಭ್ಯ
ನರೇಗಲ್:
ಪಟ್ಟಣದ ಪ್ರಾಥಮಿಕ ಕೇಂದ್ರದಲ್ಲಿ ಸಾಮಾನ್ಯ ಹೆರಿಗೆ ಮಾಡಿಸಲಾಗುತ್ತದೆ. ಶಸ್ತ್ರಚಿಕಿತ್ಸೆ ಹೆರಿಗೆ, ತುರ್ತು ಹೆರಿಗೆ ಹಾಗೂ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಕಂಡು ಬಂದಲ್ಲಿ ಅಂತಹ ಗರ್ಭಿಣಿಯರನ್ನು ರೋಣ ತಾಲ್ಲೂಕು ಆಸ್ಪತ್ರೆ ಅಥವಾ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ ಎಂದು ವೈದ್ಯಾಧಿಕಾರಿ ಡಾ. ಎ.ಡಿ.ಸಾಮುದ್ರಿ ಮಾಹಿತಿ ನೀಡಿದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಜಕ್ಕಲಿ, ಮಾರನಬಸರಿ, ಕೊಚಲಾಪುರ, ಬೂದಿಹಾಳ, ತೋಟಗಂಟಿ, ದ್ಯಾಂಪುರ ಗ್ರಾಮದ ಜನರು ಸಹ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ.

ಈ ಆಸ್ಪತ್ರೆಯಲ್ಲಿ ಒಂದು ಹೆರಿಗೆ ಕೋಣೆ, ಆರು ಹೆರಿಗೆ ಬೆಡ್‌ಗಳು ಇವೆ. ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ 24 ಬೆಡ್‌ಗಳು ಸಿದ್ಧಗೊಳ್ಳುತ್ತಿವೆ. ದಿನದ 24 ತಾಸು ಒಬ್ಬ ನರ್ಸ್ ಹೆರಿಗೆ ಸಂಬಂಧಿಸಿದ ಆರೈಕೆಗೆ ಇರುತ್ತಾರೆ. ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡರೂ ವೈದ್ಯರು ಬರುತ್ತಾರೆ ಎಂದು ಹಿರಿಯ ಆರೋಗ್ಯ ಸಹಾಯಕ ಎಸ್.ಎಫ್.ಅಂಗಡಿ ಮಾಹಿತಿ ನೀಡಿದರು.

ಸಾಮಾನ್ಯವಾಗಿ ತಿಂಗಳಿಗೆ 15–20 ಹೆರಿಗೆಗಳು ಆಗುತ್ತಿವೆ. ಕಳೆದ ತಿಂಗಳು 30 ಆಗಿವೆ ಎಂದು ಹೇಳಿದರು.

ಗಜೇಂದ್ರಗಡ: ಪ್ರಸೂತಿ ತಜ್ಞರೇ ಇಲ್ಲ
ಗಜೇಂದ್ರಗಡ:
ತಾಲ್ಲೂಕು ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಸಮೀಪದ ಸೂಡಿ, ಶಾಂತಗೇರಿ, ನಿಡಗುಂದಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕ ಹೆರಿಗೆ ವಾರ್ಡ್ ಸೌಲಭ್ಯವಿದೆ. ದಿನದ 24 ಗಂಟೆ ಸೇವೆ ಲಭ್ಯವಿರುತ್ತದೆ. ಆದರೆ ಪ್ರಸೂತಿ ತಜ್ಞರು ಹಾಗೂ ಸಿಜೇರಿಯನ್ ಸೌಲಭ್ಯವಿಲ್ಲ.

ಈ ಕೇಂದ್ರಗಳಲ್ಲಿ ಗರ್ಭಿಣಿಯರ ನಿಯಮಿತ ತಪಾಸಣೆ ನಡೆಯುತ್ತದೆ. ಸಾಮಾನ್ಯ ಹೆರಿಗೆ ಸಾಧ್ಯತೆ ಇದ್ದರೆ ಮಾತ್ರ ಈ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೀತಿಯ ತೊಂದರೆಗಳಿದ್ದರೆ ಇಲ್ಲಿನ ವೈದ್ಯ ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸುತ್ತಾರೆ. ಹೀಗಾಗಿ ಹೆಚ್ಚಿನ ಜನರು ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆ, ಹೆರಿಗೆಗೆ ಇಚ್ಛಿಸುತ್ತಾರೆ.

ಅಲ್ಲದೇ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಭಾವಿಗಳು, ವೈದ್ಯರಿಗೆ ಪರಿಚಯಸ್ಥರು ಇದ್ದರೆ ಮಾತ್ರ ಅಂಥವರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜೊತೆಗೆ ಸೂಕ್ತ ಚಿಕಿತ್ಸೆ ನೀಡುತ್ತಾರೆ. ಇಲ್ಲದಿದ್ದರೇ ಬಂದ ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂಬ ಸಿದ್ಧ ಉತ್ತರ ಸಿಬ್ಬಂದಿಯಿಂದ ಲಭಿಸುತ್ತದೆ ಎಂಬ ದೂರುಗಳಿವೆ.

ಹೆರಿಗೆ ವಾರ್ಡ್‌ಗೆ ಹೈಟೆಕ್ ಸ್ಪರ್ಶ
ಮುಂಡರಗಿ:
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ ಹೆರಿಗೆ ವಿಭಾಗವಿದ್ದು, ಮಾಸಿಕ ಸುಮಾರು 80-ರಿಂದ 90 ಗರ್ಭಿಣಿಯರಿಗೆ ಇಲ್ಲಿ ಹೆರಿಗೆ ಮಾಡಿಸಲಾಗುತ್ತಿದೆ. ಮಾಸಿಕ ಸುಮಾರು 20ರಿಂದ 25 ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗುತ್ತಿದೆ.

ಆಸ್ಪತ್ರೆಯಲ್ಲಿ ಒಬ್ಬರು ಮಹಿಳಾ ವೈದ್ಯರಿದ್ದು, ಹೆರಿಗೆ ಪ್ರಕರಣಗಳನ್ನು ನಿಭಾಯಿಸುತ್ತಿದ್ದಾರೆ. ಎರಡು ಪ್ರತ್ಯೇಕ ವಾರ್ಡ್‌ಗಳನ್ನು ಹೆರಿಗೆಗಾಗಿ ಮೀಸಲಿರಿಸಲಾಗಿದೆ. ಆಸ್ಪತ್ರೆಯಲ್ಲಿ ರಕ್ತನಿಧಿ ಇಲ್ಲದಿರುವುದರಿಂದ ಶಸ್ತ್ರಚಿಕಿತ್ಸೆಯ ಗಂಭೀರ ಪ್ರಕರಣಗಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಬಾಣಂತಿಯರಿಗೆ ಶುದ್ಧ ಕುಡಿಯುವ ನೀರು, ಆಹಾರ, ಅಗತ್ಯ ಔಷಧಗಳನ್ನು ಪೂರೈಸಲಾಗುತ್ತಿದೆ. ₹600 ಹೆರಿಗೆ ಭತ್ಯೆ ನೀಡಲಾಗುತ್ತದೆ.

ಪ್ರತಿ ಬಾಣಂತಿಯ ಹಾಸಿಗೆಗೂ ಪ್ರತ್ಯೇಕ ಪರದೆಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಬಾಣಂತಿಯರು ನಿರಾತಂಕವಾಗಿ ಮಗುವಿಗೆ ಹಾಲುಣಿಸಬಹುದಾಗಿದೆ. ಹೆರಿಗೆ ನಂತರದ ಖಾಸಗಿತನವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಶ್ರೀಶೈಲ ಎಂ. ಕುಂಬಾರ, ಕಾಶೀನಾಥ ಬಿಳಿಮಗ್ಗದ, ನಾಗರಾಜ ಎಸ್‌.ಹಣಗಿ, ಬಸವರಾಜ ಹಲಕುರ್ಕಿ, ಚಂದ್ರು ಎಂ. ರಾಥೋಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.