ADVERTISEMENT

ಬೆಲೆ ಏರಿಕೆ ಬರೆ: ಲಿಂಕ್‌ ಗೊಬ್ಬರದ ಹೊರೆ

ರಸಗೊಬ್ಬರ ಕೊರತೆ ಇಲ್ಲ ಎನ್ನುವ ಇಲಾಖೆ; ಗೊಬ್ಬರದ ಅಂಗಡಿ ಮುಂದೆ ರೈತರ ಉದ್ದನೆಯ ಸಾಲು

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 4:17 IST
Last Updated 4 ಜುಲೈ 2022, 4:17 IST
ರೋಣ ಪಟ್ಟಣದಲ್ಲಿ ರೈತರು ಗೊಬ್ಬರಕ್ಕಾಗಿ ಅಂಗಡಿ ಮುಂದೆ ಸಾಲಾಗಿ ನಿಂತಿರುವುದು
ರೋಣ ಪಟ್ಟಣದಲ್ಲಿ ರೈತರು ಗೊಬ್ಬರಕ್ಕಾಗಿ ಅಂಗಡಿ ಮುಂದೆ ಸಾಲಾಗಿ ನಿಂತಿರುವುದು   

ಗದಗ: ರಸಗೊಬ್ಬರ ದರ ಶೇ 10ರಿಂದ 15ರಷ್ಟು ಏರಿಕೆಯಾಗಿರುವುದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಇದರ ಜತೆಗೆ ಜಿಲ್ಲೆಯ ಕೆಲವೆಡೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು, ಲಿಂಕ್‌ ಗೊಬ್ಬರ ಪಡೆಯದಿದ್ದರೆ ರಸಗೊಬ್ಬರ ಕೊಡಲು ನಿರಾಕರಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಇವೆಲ್ಲವೂ ರೈತರ ಕೃಷಿ ಚಟುವಟಿಕೆಗಳಿಗೆ ತೊಡಕಾಗಿ ಪರಿಣಮಿಸಿದ್ದು, ರಸಗೊಬ್ಬರ ಮಾರಾಟ ಕ್ರಮದಲ್ಲಿ ಕಟ್ಟುನಿಟ್ಟಿನನಿಗಾ ವಹಿಸಬೇಕುಎಂದುರೈತರುಆಗ್ರಹಿಸಿದ್ದಾರೆ.

‘ಕಳೆದ ವರ್ಷಕ್ಕಿಂತ ಈ ಬಾರಿ ಶೇ 10ರಿಂದ15ರಷ್ಟು ರಸಗೊಬ್ಬರದ ಬೆಲೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಬಿತ್ತನೆ ವೇಳೆ ಕೂರಿಗೆಯಲ್ಲಿ ಸರಾಗವಾಗಿ ಉದುರುವ ಡಿಎಪಿ ಕಡೆಗೆ ರೈತರು ಒಲವು ತೋರಿದ್ದಾರೆ. ಇದರ ಬದಲಾಗಿ ಸಂಯುಕ್ತ ಗೊಬ್ಬರಗಳನ್ನು ಬಳಕೆ ಮಾಡಬಹುದು. ರೈತರಿಗೆ ರಸಗೊಬ್ಬರದ ಸಬ್ಸಿಡಿ ಕೊಡುವುದಿಲ್ಲ. ಆದರೆ, ರಸಗೊಬ್ಬರವನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ. ರಿಯಾಯಿತಿಯನ್ನು ರಸಗೊಬ್ಬರ ಉತ್ಪಾದಕ ಕಂಪನಿಗಳ ಖಾತೆಗೆ ಕೇಂದ್ರ ಸರ್ಕಾರದಿಂದ ಜಮಾ ಮಾಡಲಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ.

‘ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಇಲಾಖೆಯ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಕೃತಕ ಅಭಾವ ಸೃಷ್ಟಿ ಕಂಡು ಬಂದರೆ, ರಸಗೊಬ್ಬರ ಮಾರಾಟಗಾರರು ಗರಿಷ್ಠ ದರಕ್ಕಿಂತ ಹೆಚ್ಚಿನ ಹಣ ಪಡೆದರೆ, ಯಾವುದೇ ಉತ್ಪನ್ನವನ್ನು ಲಿಂಕ್ ಮಾಡಿದರೆ ಅಂತವರ ವಿರುದ್ಧ ರಸಗೊಬ್ಬರ ಅಧಿನಿಯಮ (ಎಫ್‌ಸಿಒ) ಅಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಕೊರತೆ ನೀಗಿಸಲು ಯತ್ನ

ರೋಣ: ಪಟ್ಟಣದಲ್ಲಿ ಮುಂಗಾರು ಮಳೆ ಚುರುಕಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಳಿಸಲು ಡಿಎಪಿ ಗೊಬ್ಬರದ ಕೊರತೆ ಕಂಡುಬಂದಿದೆ. ಜತೆಗೆ ರೈತರಿಗೆ ಬೇಡವಾದ ಲಿಂಕ್ ಗೊಬ್ಬರ ನೀಡುತ್ತಿರುವುದು ವ್ಯಾಪಕವಾಗಿ ಕಂಡು ಬರುತ್ತಿದೆ. ರೈತರಿಗೆ ಬೆಲೆ ಏರಿಕೆಯ ಜತೆಗೆ; ಬೇಡವಾದದ್ದನ್ನೂ ಖರೀದಿಸಬೇಕಿರುವುದು ಸಂಕಷ್ಟಕ್ಕೀಡುಮಾಡಿದೆ.

ನಮ್ಮ ಬೆಳೆ ಬಂದಾಗ ನಿಗದಿತ ಬೆಲೆ ನೀಡದ ಸರ್ಕಾರ, ಬಿತ್ತನೆ ಮಾಡುವಾಗ ಗೊಬ್ಬರಕ್ಕೆ ಇನ್ನೊಂದು ಲಿಂಕ್ ಹಾಗೂ ಬೆಲೆ ಏರಿಕೆಯ ನೋವು ನೀಡಿ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ರೈತರಾದ ಮುತ್ತಪ್ಪ ಕೊಪ್ಪದ, ಹನಮಂತ ಜಿಗಳೂರ ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕಿನಲ್ಲಿ ಡಿಎಪಿ ಗೊಬ್ಬರದ ಜತೆಗೆ ಉಪಯೋಗಕ್ಕೆ ಬಾರದ ಯೂರಿಯಾ ಆಮ್ಲಾ ನೀಡುತ್ತಾರೆ. ಅದು ಬೇಡ ಎಂದರೆ ಗೊಬ್ಬರ ಇಲ್ಲಾ ಎನ್ನುತ್ತಾರೆ. ₹1,350 ಬೆಲೆಯ ಗೊಬ್ಬರಕ್ಕೆ ಸೊಸೈಟಿಯಲ್ಲಿ ₹100 ಹೆಚ್ಚಿಗೆ ತೆಗೆದುಕೊಳ್ಳುವರು ಎಂಬ ಆರೋಪಗಳಿವೆ. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ರೈತರು ಆರೋಪಿಸಿದರು.

ಸಿಗದ ಯೂರಿಯಾ ರೈತರ ಪರದಾಟ

ಗಜೇಂದ್ರಗಡ: ತಾಲ್ಲೂಕಿನ ಮುಂಗಾರು ಹಂಗಾಮಿನಲ್ಲಿ ಕಪ್ಪು (ಎರಿ) ಮತ್ತು ಕೆಂಪು (ಮಸಾರಿ) ಪ್ರದೇಶಗಳಲ್ಲಿ 3,500 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, 16,500 ಹಕ್ಟೇರ್‌ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ಆರಂಭದಲ್ಲಿ ಹುಲುಸಾಗಿ ಬೆಳೆದಿದ್ದ ಬೆಳೆಗಳಿಗೆ ನಿರಂತರ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಕೀಟ ಬಾಧೆ ಹಾಗೂ ಪೋಷಕಾಂಶ ಕೊರತೆ ಎದುರಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಯೂರಿಯಾಗೆ ಭಾರಿ ಬೇಡಿಕೆ ಉಂಟಾಗಿದೆ. ಆದರೆ ಮಾರುಕಟ್ಟೆಯಲ್ಲಿ ಸಮರ್ಪಕ ಯೂರಿಯಾ ಪೂರೈಕೆಯಾಗದ ಹಿನ್ನೆಲೆಯಲ್ಲಿ ರೈತರು ಪ್ರತಿದಿನ ರಸಗೊಬ್ಬರ ಅಂಗಡಿಗಳಿಗೆ ಅಲೆಯುತ್ತಿದ್ದಾರೆ.

ಕೆಲವು ಮಾರಾಟಗಾರರು ಗೊಬ್ಬರ ದಾಸ್ತಾನಿದ್ದರೂ ಇಲ್ಲ ಎಂದು ಕೃತಕ ಅಭಾವ ಸೃಷ್ಟಿಸಿ, ₹350 ರಿಂದ ₹450ರವರೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ದಲಾಲಿ ಅಂಗಡಿ ಹೊಂದಿರುವ ಕೆಲ ಅಂಗಡಿಕಾರರು ತಮ್ಮ ಗ್ರಾಹಕರಿಗೆ ಮಾತ್ರ ಯೂರಿಯಾ ನೀಡುತ್ತಾರೆ ಎಂಬುದು ರೈತರ ಆರೋಪವಾಗಿದೆ.

ಮಾರುಕಟ್ಟೆಯಲ್ಲಿ ರಸಗೊಬ್ಬರ ಸಿಗದೆ ರೈತರು ಪರದಾಡಿದರೆ, ವರ್ತಕರು ರಸಗೊಬ್ಬರಗಳಿಗೆ ಲಘು ಪೋಷಕಾಂಶಗಳನ್ನು ಲಿಂಕ್ ಮಾಡುತ್ತಿರುವುದರಿಂದ ಹಾಗೂ ಸಕಾಲದಲ್ಲಿ ಪೂರೈಕೆಯಾಗದ ಕಾರಣ ಪರದಾಡುತ್ತಿದ್ದಾರೆ.

ಮುಂಗಾರು ಹಂಗಾಮಿನ ಗೋವಿನಜೋಳ, ಹೆಸರು, ತೊಗರಿ ಸೇರಿದಂತೆ ಇತರೆ ಬಿತ್ತನೆ ಬೀಜಗಳ ಬೆಲೆ ಈ ಬಾರಿ ₹100ರಿಂದ ₹120 ಏರಿಕೆಯಾಗಿದೆ. ಅಲ್ಲದೆ ಕಳೆದ ವರ್ಷ 5 ಕೆ.ಜಿ. ಪ್ಯಾಕೇಟ್‌ನಲ್ಲಿ ದೊರೆಯುತ್ತಿದ್ದ ಬಿತ್ತನೆ ಬೀಜಗಳನ್ನು ಈ ಬಾರಿ 4 ಕೆ.ಜಿ. ಪ್ಯಾಕೇಟ್‌ನಲ್ಲಿ ದೊರೆಯುತ್ತಿವೆ. ಇದರಿಂದ ಈ ಬಾರಿ ರೈತರಿಗೆ ಗೊಂದಲ ಉಂಟಾಗಿದೆ.

ಸಂಯುಕ್ತ ಗೊಬ್ಬರಗಳ ಬಳಕೆಗೆ ಮುಂದಾಗಿ

ನರೇಗಲ್:‌ ಬಿಳಿ ಜೋಳದ ಕಾಳಿನಷ್ಟು ಚಿಕ್ಕದಾಗಿರುವ ಡಿಎಪಿ ಗೊಬ್ಬರವು ಟ್ರಾಕ್ಟರ್‌ ಮೂಲಕ ಬಿತ್ತನೆ ಮಾಡುವ ಕೂರಿಗೆಯಲ್ಲಿ ಸರಾಗವಾಗಿ ಉದುರುತ್ತದೆ. ಇತರೆ ಸಂಯುಕ್ತ ಗೊಬ್ಬರಗಳ ಗಾತ್ರ ದೊಡ್ಡದಾಗಿರುವ ಕಾರಣ ಬಿತ್ತನೆ ಮಾಡುವಾಗ ಕೂರಿಗೆಯ ಹಿಂದುಗಡೆ ಗೊಬ್ಬರವನ್ನು ಹಾಕಲು ಹೆಚ್ಚುವರಿ ಆಳು ಬೇಕಾಗುತ್ತದೆ. ಆದ್ದರಿಂದ ರೈತರು ಡಿಎಪಿಗೆ ಹೆಚ್ಚಿನ ಬೇಡಿಕೆಯನ್ನು ಇಡುತ್ತಾರೆ. ಆದರೆ ಅದೇ ಸಂಯುಕ್ತವನ್ನು ಹೊಂದಿರುವ ಇತರೆ ಗೊಬ್ಬರಗಳ ಬಳಕೆಗೆ ರೈತರು ಮುಂದಾಗಬೇಕು ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿ.ಕೆ.ಕಮ್ಮಾರ ಹೇಳಿದರು.

ರಾತ್ರಿ ವೇಳೆ ಗೊಬ್ಬರ ಮಾರಾಟ

ಡಂಬಳ: ಡೋಣಿ, ಡೋಣಿತಾಂಡ, ಹಳ್ಳಿಕೇರಿ, ಹಿರೇವಡ್ಡಟ್ಟಿ, ಹಾರೂಗೇರಿ, ಜಂತಲಿಶಿರೂರ, ಪೇಠಾ ಆಲೂರ, ಮೇವುಂಡಿ, ಕದಾಂಪೂರ ಸೇರಿದಂತೆ ಹೋಬಳಿ ವ್ಯಾಪ್ತಿಯ ರೈತರು ರಸಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ಇದೆ.

ಅಧಿಕಾರಿಗಳು ನೆಪ ಮಾತ್ರಕ್ಕೆ ವ್ಯಾಪಾರಸ್ಥರ ಅಂಗಡಿಗೆ ಭೇಟಿ ನೀಡುತ್ತಾರೆ. ಮುಂಡರಗಿ ತಾಲ್ಲೂಕಿನ ಬಹುತೇಕ ವ್ಯಾಪಾರಸ್ಥರು ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಚೀಲಕ್ಕೆ ₹200ರಿಂದ ₹400ವರೆಗೆ ಹೆಚ್ಚುವರಿ ಪಡೆಯುತ್ತಿದ್ದಾರೆ. ಹಗಲು ಹೊತ್ತಿಗಿಂತ ರಾತ್ರಿ ಸಮಯದಲ್ಲಿ ಹೆಚ್ಚು ರಸಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ಡೋಣಿ ಗ್ರಾಮದ ರೈತ ಶಂಕರಗೌಡ ಜಾಯನಗೌಡರ ಆರೋ‍‍ಪ ಮಾಡಿದ್ದಾರೆ.

ಮತ್ತೆ ಮಳೆ ಆದರೆ ಡಿಎಪಿಗೆ ಬೇಡಿಕೆ

ಲಕ್ಷ್ಮೇಶ್ವರ: ಪ್ರಸ್ತುತ ವರ್ಷ 940 ಮೆಟ್ರಿಕ್ ಟನ್ ಡಿಎಪಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಅದರೆ ಅದರಲ್ಲಿ 795 ಮೆಟ್ರಿಕ್ ಟನ್ ಗೊಬ್ಬರ ಪೂರೈಕೆ ಆಗಿದ್ದು 30.10 ಮೆಟ್ರಿಕ್ ಟನ್ ಗೊಬ್ಬರದ ದಾಸ್ತಾನು ಇದೆ.
ಅದರಂತೆ 1,430 ಮೆಟ್ರಿಕ್ ಟನ್ ಯೂರಿಯಾಕ್ಕೆ ಬೇಡಿಕೆ ಸಲ್ಲಿಕೆಯಾಗಿದ್ದು ಅದರಲ್ಲಿ 1,230 ಮೆಟ್ರಿಕ್ ಟನ್ ಬಂದಿದ್ದು 230.06 ಮೆಟ್ರಿಕ್ ಟನ್ ದಾಸ್ತಾನು ಇದೆ. ಎನ್‍ಪಿಕೆ 378.5 ಮೆಟ್ರಿಕ್ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದರು.

ಲಿಂಕ್ ಗೊಬ್ಬರ ಕೊಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸದ್ಯ ಅದನ್ನು ಬಂದ್ ಮಾಡಲಾಗಿದೆ ಎಂಬ ಮಾಹಿತಿ ಇದೆ. ಮಳೆಯಾದರೆ ಮತ್ತೆ ಡಿಎಪಿಗೆ ಹಾಹಾಕಾರ ಶುರುವಾಗಲಿದೆ.

ಸಕಾಲಕ್ಕೆ ಸಿಗದ ರಸಗೊಬ್ಬರ: ರೈತರ ಪರದಾಟ

ಶಿರಹಟ್ಟಿ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಪ್ರತಿಶತ 70ರಷ್ಟು ಭೂಮಿ ಬಿತ್ತನೆಯಾಗಿದ್ದು, ಉಳಿದ ಭೂಮಿಯನ್ನು ಬಿತ್ತಲು ಗೊಬ್ಬರ ಸಿಗದೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ರಸಗೊಬ್ಬರ ಬೇಡಿಕೆಗೆ ಅನುಗುಣವಾಗಿ ಯೂರಿಯಾ 158.61, ಡಿಎಪಿ 22.7, ಎನ್.ಪಿ.ಕೆ 162.15 ಮೆಟ್ರಿಕ್ ಟನ್ ದಾಸ್ತಾನಿದ್ದು, ಇದರಿಂದ ಗೊಬ್ಬರದ ಅಭಾವ ತಲೆದೋರದೆ ಮುಂಗಾರು ಬಿತ್ತನೆ ಸಂಪೂರ್ಣ ಅಗುತ್ತದೆ. ಆದರೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳ ರಸಗೊಬ್ಬರ ಮಾರಾಟ ಮಳಿಗೆಯ ಮುಂದೆ ರೈತರು ಆಧಾರ್‌ ಕಾರ್ಡ್‌ ಕೈಯಲ್ಲಿ ಹಿಡಿದು ಸರದಿ ಸಾಲಿನಿಲ್ಲಿ ನಿಲ್ಲುವುದು ತಪ್ಪಿಲ್ಲ.

ಉಳಿದ ಪ್ರತಿಶತ 30ರಷ್ಟು ಭೂಮಿಗೆ ಬೀಜ ಬಿತ್ತಲು ಗೊಬ್ಬರ ಖರೀದಿಗೆ ರೈತರು ಹರಸಾಹಸ ಪಡುತ್ತಿದ್ದಾರೆ. ಡಿಎಪಿ ಗೊಬ್ಬರ ಇಲ್ಲ. ಬದಲಾಗಿ ಮಾರಾಟ ಮಾಡುತ್ತಿರುವ ಯೂರಿಯಾ ಹಾಗೂ ಎನ್.ಪಿ.ಕೆ ಗೊಬ್ಬರ ಸಹ ಮಾರಾಟ ಕೇಂದ್ರಗಳಲ್ಲಿ ದೊರೆಯುತ್ತಿಲ್ಲ. ಬೆರಳಣಿಕೆಯಷ್ಟು ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಗೊಬ್ಬರದ ಖರೀದಿಗೆ ರೈತರು ತಮ್ಮ ಕೆಲಸವನ್ನೆಲ್ಲ ಬದಿಗೊತ್ತಿ ಇಡೀ ದಿನ ಕಾಯ್ದರೂ ಗೊಬ್ಬರ ಸಿಗದೆ ಪರದಾಡುವಂತಾಗಿದೆ.

ನ್ಯಾನೋ ಯೂರಿಯಾ ಬಳಕೆಗೆ ಮುಂದಾಗದ ರೈತರು

ಗಜೇಂದ್ರಗಡ: 500 ಎಂ.ಎಲ್ ನ್ಯಾನೋ ಯೂರಿಯಾ ಔಷಧ ಒಂದು ಚೀಲ ಮಾಮೂಲಿ ಯೂರಿಯಾಗೆ ಸಮವಾಗಿದೆ. ಇದನ್ನು ಒಂದು ದಿನದಲ್ಲಿ ಒಬ್ಬ ವ್ಯಕ್ತಿ ಸಿಂಪಡಿಸಬಹುದಾಗಿದೆ. ಇದರಿಂದ ಕೂಲಿ ಕಾರ್ಮಿಕರ ಖರ್ಚು, ಸಮಯ ಉಳಿಯುವುದರ ಜೊತೆಗೆ ಇಳುವರಿ ಹೆಚ್ಚಳವಾಗುತ್ತದೆ. ಆದರೆ ಇದರ ಬಳಕೆ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ನೀಡುವುದು, ರೈತರ ಸಭೆ ನಡೆಸಿ ಅರಿವು ಮೂಡಿಸುವ ಯಾವುದೇ ಕಾರ್ಯಗಳು ಕೃಷಿ ಇಲಾಖೆ ವತಿಯಿಂದ ನಡೆಯದಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಕೃಷಿ ಅಧಿಕಾರಿಗಳನ್ನು ಕೇಳಿದರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಎಂಬ ಸಿದ್ದ ಉತ್ತರ ಲಭಿಸುತ್ತದೆ.

'ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಆದರೆ ಇಂತಹ ಸಂದರ್ಭದಲ್ಲಿ ಎಲ್ಲ ಕೆಲಸಗಳನ್ನು ಬದಿಗೊತ್ತಿ ತಾಲ್ಲೂಕು ಕೇಂದ್ರದಲ್ಲಿ ರೈತರೊಂದಿಗೆ ಒಂದು ಸಭೆ ನಡೆಸಲು, ಆಯ್ದ ಹಳ್ಳಿಗಳಲ್ಲಿ ಈ ಕುರಿತು ಪ್ರಾತ್ಯಕ್ಷಿಕೆ ನೀಡಲು ಸಮಯ ಇರುವುದಿಲ್ಲವೇ. ರೈತರ ನೆರವಿಗೆ ಬರದಿದ್ದರೆ ಕೃಷಿ ಇಲಾಖೆ ಏಕೆ ಬೇಕು’ ಎಂದು ಗಜೇಂದ್ರಗಡದ ಬಸವರಾಜ ಶೀಲವಂತರ, ಈಶಪ್ಪ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿಯ ಮುಂಗಾರು ಹಂಗಾಮಿನ ಬೇಡಿಕೆಯಂತೆ ರಸಗೊಬ್ಬರವನ್ನು ಪೂರೈಕೆ ಮಾಡಲಾಗಿದೆ. ರೈತರು ಡಿಎಪಿಗೆ ಕಾಯದೇ ಸಂಯುಕ್ತ ಗೊಬ್ಬರಗಳನ್ನು ಬಳಸಿ ಬಿತ್ತನೆ ಪೂರ್ಣಗೊಳಿಸಬೇಕು
ಜಿಯಾವುಲ್ಲಾ ಕೆ, ಜಂಟಿ ಕೃಷಿ ನಿರ್ದೇಶಕ ಗದಗ

ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ₹1450 ಬೆಲೆಯ ಡಿಎಪಿ ಗೊಬ್ಬರ ಮಾರಾಟ ಮಾಡುತ್ತಿದ್ದು, ಯಾವುದೇ ತರಹದ ಲಿಂಕ್ ಗೊಬ್ಬರ ಕಡ್ಡಾಯ ಮಾಡಿಲ್ಲ. ಲಿಂಕ್ ಫಜೀತಿ ಸೊಸೈಟಿಯಲ್ಲಿ ತಪ್ಪಿರುವುದು ಅನುಕೂಲ ತರಿಸಿದೆ
ಅರ್ಜುನ ಕೊಪ್ಪಳ, ರೈತ ಮುಖಂಡ

ರೈತರಿಗೆ ನ್ಯಾನೋ ಯೂರಿಯಾ ಬಗ್ಗೆ ಜಾಗೃತಿ ಮೂಡಿಸಬೇಕಿದೆ. 500 ಎಂಎಲ್ ನ್ಯಾನೋ ಯೂರಿಯಾ 50 ಕೆ.ಜಿ. ಗೊಬ್ಬರಕ್ಕೆ ಸಮ. ಮುಂಬರುವ ದಿನಗಳಲ್ಲಿ ಡಿಎಪಿ ಕೂಡ ನ್ಯಾನೋ ಡಿಎಪಿಯಾಗಿಯೇ ಬರುವ ಸಂಭವವಿದೆ
ರವೀಂದ್ರ ಪಾಟೀಲ, ಸಹಾಯಕ ನಿರ್ದೇಶಕ, ರೋಣ

ಪ್ರಜಾವಾಣಿ ತಂಡ:ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಪ್ರಕಾಶ್‌ ಗುದ್ನೆಪ್ಪನವರ, ನಾಗರಾಜ ಹಣಗಿ, ಶ್ರೀಶೈಲ ಎಂ. ಕುಂಬಾರ, ನಾಗರಾಜ ಹಮ್ಮಿಗಿ, ಲಕ್ಷ್ಮಣ ಎಚ್. ದೊಡ್ಡಮನಿ, ಚಂದ್ರು ರಾಥೋಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.