ADVERTISEMENT

ಮುಂಡರಗಿ | ಭೂಸ್ವಾಧೀನ ಪರಿಹಾರ ವಿಳಂಬ: ರೈತರ ಆಕ್ರೋಶ

ಕಾಶಿನಾಥ ಬಿಳಿಮಗ್ಗದ
Published 2 ಜೂನ್ 2025, 5:00 IST
Last Updated 2 ಜೂನ್ 2025, 5:00 IST
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್
ಮುಂಡರಗಿ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್   

ಮುಂಡರಗಿ: ಮೂರು ದಶಕಗಳ ಹಿಂದೆ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಆರಂಭವಾದ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆ ನಿರ್ಮಾಣ, ರಸ್ತೆ ನಿರ್ಮಾಣ ಹಾಗೂ ಮತ್ತಿತರ ಕಾರಣಗಳಿಗಾಗಿ ರೈತರ ನೂರಾರು ಎಕರೆ ಜಮೀನನ್ನು ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿದ್ದು, ಈಗಲೂ ಕೆಲವು ರೈತರು ಅದರ ಪೂರ್ಣ ಪ್ರಮಾಣದ ಪರಿಹಾರ ದೊರೆಯದೇ ಪರದಾಡುತ್ತಿದ್ದಾರೆ.

ಶಿಂಗಟಾಲೂರ ಏತ ನೀರಾವರಿ ಯೋಜನೆಗೆ 1992ರಲ್ಲಿ ಶಂಕುಸ್ಥಾಪನೆ ಮಾಡಲಾಯಿತು. ನಂತರ 2012ರಲ್ಲಿ ವಿಜಯನಗರ ಜಿಲ್ಲೆಗೆ ಹಾಗೂ 2016ರಲ್ಲಿ ಗದಗ ಜಿಲ್ಲೆಗೆ ನೀರು ಹರಿಯಲು ಆರಂಭವಾಯಿತು. ನಂತರ ಕೊಪ್ಪಳ ಜಿಲ್ಲೆಗೂ ಯೋಜನೆಯನ್ನು ವಿಸ್ತರಿಸಲಾಯಿತು.

ಈ ನೀರಾವರಿ ಯೋಜನೆಗೆ ಗದಗ ಜಿಲ್ಲಾ ವ್ಯಾಪ್ತಿಯಲ್ಲಿ 3,557 ಎಕರೆ, ವಿಜಯನಗರ ಜಿಲ್ಲಾ ವ್ಯಾಪ್ತಿಯಲ್ಲಿ 3,847 ಎಕರೆ ಹಾಗೂ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ 426 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಅದರಲ್ಲಿ ಗದಗ ಜಿಲ್ಲೆಯ 95 ಎಕರೆ, ವಿಜಯನಗರ ಜಿಲ್ಲೆಯ 69 ಎಕರೆ ಹಾಗೂ ಕೊಪ್ಪಳ ಜಿಲ್ಲೆಯ 24 ಎಕರೆ ಜಮೀನುಗಳಿಗೆ ಪರಿಹಾರ ವಿತರಿಸುವುದು ಬಾಕಿ ಇದೆ ಎಂದು ತಿಳಿದುಬಂದಿದೆ.

ADVERTISEMENT

ಸರ್ಕಾರ ಈಗಾಗಲೇ ರೈತರಿಗೆ ವಿತರಿಸಿರುವ ಪರಿಹಾರದ ಮೊತ್ತ ತುಂಬಾ ಕಡಿಮೆ ಇದ್ದು ಮಂಡ್ಯ, ಮೈಸೂರು ಭಾಗಗಳಿಗಿಂತಲೂ ಇಲ್ಲಿಯ ರೈತರಿಗೆ ತುಂಬಾ ಕಡಿಮೆ ಪರಿಹಾರ ನೀಡಲಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಈ ಹಿಂದೆ ಸರ್ಕಾರದ ನಿಯಮಾನುಸಾರ ಬೃಹತ್ ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ರೈತರ ಜಮೀನಿಗೆ 2011 ಹಾಗೂ 2013ರಲ್ಲಿ ಪರಿಹಾರ ವಿತರಿಸಲಾಗಿದೆ. ಆದರೆ ದಶಕದ ಹಿಂದೆ ತಾಲ್ಲೂಕಿನ ಬಿದರಳ್ಳಿ, ಮುಂಡವಾಡ, ಗುಮ್ಮಗೋಳ ಮೊದಲಾದ ಹಲವಾರು ಗ್ರಾಮಗಳ ವ್ಯಾಪ್ತಿಯಲ್ಲಿ ಕಿರುಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ಜಮೀನಿಗೆ ಈವರೆಗೂ ಬಿಡಿಗಾಸು ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರ ಜಮೀನನ್ನು ವಶಪಡಿಸಿಕೊಂಡು ಅಲ್ಲಿ ನಿರ್ಮಿಸಿರುವ ಕಿರು ಕಾಲುವೆಗಳು ಈಗ ಸಂಪೂರ್ಣವಾಗಿ ಹೂತು ಹೋಗಿದ್ದು, ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಜಮೀನು ಕಳೆದುಕೊಂಡಿರುವ ರೈತರು ಸೂಕ್ತ ಪರಿಹಾರ ದೊರೆಯದೆ ಪರಿತಪಿಸುತ್ತಿದ್ದಾರೆ. ಬಿದರಳ್ಳಿ, ಮುಂಡವಾಡ ಗ್ರಾಮಗಳ ಸುತ್ತಮುತ್ತ ಕಿರು ಕಾಲುವೆ ನಿರ್ಮಿಸಿ ದಶಕ ಕಳೆದರೂ ಕಾಲುವೆಗಳಲ್ಲಿ ನೀರು ಹರಿಯುತ್ತಿಲ್ಲ. ಅತ್ತ ಪರಿಹಾರವೂ ಇಲ್ಲದೆ, ಇತ್ತ ಉಳುಮೆ ಮಾಡಲು ಜಮೀನು ಇಲ್ಲದೆ ರೈತರು ಅತಂತ್ರರಾಗಿದ್ದು, ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದ ಹೊರವಲಯದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಸಂಪೂರ್ಣವಾಗಿ ಹೂತು ಹೋಗಿರುವ ಕಿರು ಕಾಲುವೆ
ಮುಂಡರಗಿ ತಾಲ್ಲೂಕಿನ ಮುಂಡವಾಡ ಗ್ರಾಮದ ರೈತರು ಹೂವಿನಹಡಗಲಿಯ ವಿಶೇಷ ಭೂಸ್ವಾಧಿನ ಕಾರ್ಯಾಲಯದ ಬಳಿ ಭೂಸ್ವಾಧಿನ ಪಡಿಸಿಕೊಂಡಿರುವ ಜಮೀನಿಗೆ ಬೇಗನೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು (ಸಂಗ್ರಹ ಚಿತ್ರ)
ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳಿಗೆ ಪರಿಹಾರ ನೀಡಲು ನೀರಾವರಿ ಇಲಾಖೆಯಲ್ಲಿ ಹಲವಾರು ಹಂತಗಳಿದ್ದು ಅವುಗಳ ಅನುಸಾರ ಪರಿಹಾರ ವಿತರಿಸಲಾಗಿದೆ. ಹಂತ ಹಂತವಾಗಿ ಇನ್ನೂಳಿದ ರೈತರಿಗೂ ಪರಿಹಾರ ವಿತರಿಸಲಾಗುವುದು
ಚಿದಾನಂದ ಗುರುಮೂರ್ತಿ ವಿಶೇಷ ಭೂಸ್ವಾಧೀನ ಅಧಿಕಾರಿ ಹೂವಿನಹಡಗಲಿ

ಹೆಚ್ಚು ಪರಿಹಾರಕ್ಕೆ ಆಗ್ರಹ

ನೀರಾವರಿ ಯೋಜನೆಯ ಬೃಹತ್ ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಂಡಿದ್ದ ರೈತರ ಜಮೀನುಗಳಿಗೆ ಅಂದಿನ ಮಾರುಕಟ್ಟೆಯ ಬೆಲೆ ಹಾಗೂ ಆಯಾ ಪ್ರದೇಶದ ಜಮೀನುಗಳ ದರಗಳ ಆಧಾರದ ಮೇಲೆ 2011-12ರಲ್ಲಿ ಎಕರೆಗೆ ₹110000ದಿಂದ ₹120000 ಪರಿಹಾರ ವಿತರಿಸಲಾಗಿದೆ. ಸರ್ಕಾರ ರೈತರಿಗೆ ನೀಡಿರುವ ಪರಿಹಾರ ಅತ್ಯಲ್ಪವಾಗಿದ್ದು ಸರ್ಕಾರ ಅದರ ನಾಲ್ಕುಪಟ್ಟು ಹೆಚ್ಚು ಪರಿಹಾರ ವಿತರಿಸಬೇಕು ಎಂದು ರೈತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನ್ಯಾಯಾಲಯವು ಈಚೆಗೆ ರೈತರ ಪರವಾಗಿ ಆದೇಶ ನೀಡಿದೆ ಎಂದು ಹೇಳಲಾಗುತ್ತಿದ್ದು ಯಾವ ರೈತರ ಬಳಿಯೂ ನ್ಯಾಯಾಲಯದ ಆದೇಶದ ಪ್ರತಿ ದೊರೆಯುತ್ತಿಲ್ಲ.

ದಿಕ್ಕಿಗೊಂದು ಕಚೇರಿ!

ಶಿಂಗಟಾಲೂರ ಏತ ನೀರಾವರಿ ಯೋಜನೆಯು ಹಮ್ಮಿಗಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅದರ ಮುಖ್ಯ ಕಚೇರಿ ಮುಂಡರಗಿ ಪಟ್ಟಣದ ಹೊರವಲಯದಲ್ಲಿದೆ. ವಿಶೇಷ ಭೂಸ್ವಾಧೀನ ರೈತರ ಪರಿಹಾರ ವಿತರಣೆ ಮೊದಲಾದವುಗಳಿಗೆ ಸಂಬಂಧಿಸಿದ ಕಚೇರಿಯು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಕಾರ್ಯಾಲಯವು ಕೊಪ್ಪಳ ನಗರದಲ್ಲಿದೆ. ಒಂದೊಂದು ಕಚೇರಿಯು ಒಂದೊಂದು ದಿಕ್ಕಿನಲ್ಲಿರುವುದರಿಂದ ರೈತರು ನಿರಾಶ್ರಿತ ಪ್ರಮಾಣಪತ್ರ ಪಡೆದುಕೊಳ್ಳಲು ಪರಿಹಾರ ಕುರಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ನೀರಾವರಿಗೆ ಸಂಬಂಧಿಸಿದ ಇನ್ನಿತರೆ ಕೆಲಸ ಕಾರ್ಯಗಳಿಗೆ ಪಟ್ಟಣದಿಂದ ಪಟ್ಟಣಕ್ಕೆ ಅಲೆದಾಡಬೇಕಾಗಿದೆ. ನೀರಾವರಿ ಯೋಜನೆಗೆ ಸಂಬಂಧಿಸಿದ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಮೂರು ಜಿಲ್ಲೆಗಳ ಜೀವನಾಡಿ

ಶಿಂಗಟಾಲೂರ ಏತ ನೀರಾವರಿ ಯೋಜನೆಯ ಕಾಲುವೆ ಹಾಗೂ ಸೂಕ್ಷ್ಮ ಹನಿ ನೀರಾವರಿ ಪದ್ಧತಿಯ ಮೂಲಕ ಮುಂಡರಗಿ ತಾಲ್ಲೂಕಿನ 92881 ಎಕರೆ ಗದಗ ತಾಲ್ಲೂಕಿನ 66827 ಎಕರೆ ಕೊಪ್ಪಳ ತಾಲ್ಲೂಕಿನ 55706 ಎಕರೆ ಹೂವಿನಹಡಗಲಿ ತಾಲ್ಲೂಕಿನ 35791 ಎಕರೆ ಯಲಬುರ್ಗಾ ತಾಲ್ಲೂಕಿನ 14624 ಎಕರೆ ಜಮೀನಿಗೆ ನೀರು ಹರಿಯಬೇಕಿದೆ. ಜೊತೆಗೆ ಗದಗ-ಬೆಟಗೇರಿ ಸೇರಿದಂತೆ ಮೂರು ಜಿಲ್ಲೆಗಳ ಜನತೆಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸುತ್ತಲಿದೆ. ಆ ಮೂಲಕ ಶಿಂಗಟಾಲೂರ ಏತ ನೀರಾವರಿ ಯೋಜನೆಯು ಮೂರು ಜಿಲ್ಲೆಗಳ ಪ್ರಮುಖ ಜಲ ಮೂಲವಾಗಿ ಹೊರಹೊಮ್ಮಿದೆ.

ಯಾರು ಏನಂತಾರೆ?

ಪರಿಹಾರ ವಿತರಣೆಗೆ ಕ್ರಮ ವಹಿಸಿ ನೀರಾವರಿ ಕಾಲುವೆಗಳಿಗಾಗಿ ಬೆಲೆಬಾಳುವ ಜಮೀನು ಕಳೆದುಕೊಂಡಿರುವ ಬಿದರಳ್ಳಿ ಹಾಗೂ ಮುಂಡವಾಡ ಗ್ರಾಮಗಳ ರೈತರು ಹತ್ತು ವರ್ಷಗಳಿಂದ ಪರಿಹಾರ ದೊರೆಯದೆ ಪರಿತಪಿಸುತ್ತಿದ್ದು ಸರ್ಕಾರ ಬೇಗ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲಿಯ ರೈತರು ಪರಿಹಾರಕ್ಕಾಗಿ ಮುಂಡರಗಿ ಹಾಗೂ ಹೂವಿನಹಡಗಲಿಯ ನೀರಾವರಿ ಇಲಾಖೆಗಳಿಗೆ ಅಲೆದಾಡುವಂತಾಗಿದೆ. ದಶಕದ ಹಿಂದೆ ನಿರ್ಮಿಸಿರುವ ಕಿರು ಕಾಲುವೆಗಳು ನಿರರ್ಥಕವಾಗಿದ್ದು ಈವರೆಗೂ ಅವುಗಳಲ್ಲಿ ನೀರು ಹರಿದಿಲ್ಲ.

- ಶ್ರೀಕಾಂತಗೌಡ ಪಾಟೀಲ ಬಿದರಳ್ಳಿ ಗ್ರಾಮದ ರೈತ

ರೈತರಿಗೆ ಹೆಚ್ಚಿನ ಪರಿಹಾರ ಸಿಗಲಿ ನೀರಾವರಿ ಯೋಜನೆಯ ಬೃಹತ್ ಕಾಲುವೆ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ರೈತರ ಜಮೀನಿಗೆ ಸರ್ಕಾರ ನೀಡಿರುವ ಪರಿಹಾರ ಅತ್ಯಲ್ಪವಾಗಿದ್ದು ಪರಿಹಾರ ಹೆಚ್ಚಿಸುವ ಕುರಿತಂತೆ ಸಾಕಷ್ಟು ರೈತರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಲಾಗುತ್ತಿದ್ದು ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.

-ಮಲ್ಲಿಕಾರ್ಜುನ ಬಿಳಿಮಗ್ಗದ ಶಿಂಗಟಾಲೂರ ಗ್ರಾಮದ ರೈತ

ರೈತರಿಗೆ ಅನ್ಯಾಯ ಅಕ್ಷಮ್ಯ ಮೂರು ಜಿಲ್ಲೆಗಳ ರೈತರ ಜಮೀನುಗಳಿಗೆ ನೀರು ಸಿಗಲಿ ಎನ್ನುವ ಕಾರಣದಿಂದ ರೈತರು ತಮ್ಮ ಬೆಲೆಬಾಳುವ ಜಮೀನು ನೀಡಿದ್ದಾರೆ. ಆದರೆ ಸರ್ಕಾರ ಸಮರ್ಪಕವಾಗಿ ಪರಿಹಾರ ವಿತರಿಸದೆ ರೈತರಿಗೆ ಅನ್ಯಾಯ ಮಾಡುತ್ತಿರುವುದು ಅಕ್ಷಮ್ಯ

-ಭೀಮಣ್ಣ ಆರೇರ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಮಲತಾಯಿ ಧೋರಣೆ ನಿಲ್ಲಿಸಿ ನೀರಾವರಿ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಂಡಿರುವ ಜಮೀನುಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಎಲ್ಲ ರೈತರಿಗೂ ಸಮಾನವಾಗಿ ಹಾಗೂ ಸಕಾಲದಲ್ಲಿ ಪರಿಹಾರ ವಿತರಿಸಬೇಕು. ಆ ಮೂಲಕ ರೈತರ ಹಿತ ಕಾಯಬೇಕು.

-ವೀರನಗೌಡ ಪಾಟೀಲ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ

ಇದ್ದೂ ಇಲ್ಲದಂತಾದ ಕಾಲುವೆಗಳು ಕೆಲವು ಗ್ರಾಮಗಳ ಕಾಲುವೆಗಳಲ್ಲಿ ಸ‌ಮರ್ಪಕವಾಗಿ ನೀರು ಹರಿಯುತ್ತಿಲ್ಲ. ಅಲ್ಲಿ ಕಾಲುವೆಗಳು ಇದ್ದೂ ಇಲ್ಲದಂತಾಗಿದ್ದು ಸರ್ಕಾರ ಭೂಸ್ವಾಧಿನ ಪಡಿಸಿಕೊಂಡಿರುವ ಜಮೀನನ್ನು ಪುನಃ ರೈತರಿಗೆ ಬಿಟ್ಟುಕೊಡಬೇಕು ಅಥವಾ ತಕ್ಷಣ ಸೂಕ್ತ ಪರಿಹಾರ ನೀಡಬೇಕು.

-ಶಿವಾನಂದ ಇಟಗಿ ರೈತ ಮುಖಂಡ ಮುಂಡರಗಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.