ADVERTISEMENT

ನರಗುಂದ: ಬೆಳೆಹಾನಿ ಪರಿಹಾರ ವಿಳಂಬ– ರೈತರ ಆಕ್ರೋಶ

ಮುಗಿದ ಸಮೀಕ್ಷೆ: ಆಕ್ಷೇಪಣೆ ಸಲ್ಲಿಕೆಗೆ ಇಂದೇ ಕೊನೆ ದಿನ– ಅವಧಿ ವಿಸ್ತರಣೆಗೆ ಆಗ್ರಹ

ಬಸವರಾಜ ಹಲಕುರ್ಕಿ
Published 26 ಸೆಪ್ಟೆಂಬರ್ 2025, 4:20 IST
Last Updated 26 ಸೆಪ್ಟೆಂಬರ್ 2025, 4:20 IST
ನರಗುಂದ ತಾಲ್ಲೂಕಿನ ಲ್ಲಿ ಗೋವಿನಜೋಳ ಬೆಳೆ ಹಾನಿಗೊಂಡ ದೃಶ್ಯ
ನರಗುಂದ ತಾಲ್ಲೂಕಿನ ಲ್ಲಿ ಗೋವಿನಜೋಳ ಬೆಳೆ ಹಾನಿಗೊಂಡ ದೃಶ್ಯ   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನ 30 ಗ್ರಾಮಗಳಲ್ಲಿ 40,196 ಹೆಕ್ಟೇರ್ ಸಾಗುವಳಿ ಕ್ಷೇತ್ರ ಇದ್ದು, ಇದರಲ್ಲಿ ಅತಿವೃಷ್ಟಿಯಿಂದಾಗಿ 31,222 ಹೆಕ್ಟೇರ್‌ನ ವಿವಿಧ ಬೆಳೆಗಳು ಸಂಪೂರ್ಣ ಹಾನಿಯಾಗಿದೆ.

ನರಗುಂದ ತಾಲ್ಲೂಕಿನಲ್ಲಿ 17,209 ಹೆಕ್ಟೇರ್‌ನಷ್ಟು ಹೆಸರು, 13,162 ಹೆಕ್ಟೇರ್‌ ಗೋವಿನಜೋಳ, 765.50 ಹೆಕ್ಟೇರ್‌ನಷ್ಟು ಈರುಳ್ಳಿ ಹಾಗೂ ಇತರೆ ತರಕಾರಿ ಬೆಳೆಗಳು ಹಾನಿಯಾಗಿವೆ. ಬೆಳೆಹಾನಿಯಿಂದ 31,344 ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸೆ.20ರವರೆಗೆ ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿದ ತಾಲ್ಲೂಕು ಆಡಳಿತ ಭಾನುವಾರ ಹಾನಿಯಾದ ವಿವರ ಪ್ರಕಟಿಸಿ, ಆಕ್ಷೇಪಣೆಗೆ ಸೆ.26ರ ವರೆಗೆ ಅವಕಾಶ ನೀಡಿದೆ. ಬರೀ ಪರಿಶೀಲನೆಯಲ್ಲಿಯೇ ಸಮಯ ಹೋದರೆ ನಮಗೆ ಪರಿಹಾರ ಸಿಗುವುದು ಯಾವಾಗ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಎಸ್‌ಡಿಆರ್‌ಎಫ್ ನಿಯಮದ ಪ್ರಕಾರ ಎಷ್ಟೇ ಪ್ರಮಾಣದ ಬೆಳೆ ಹಾನಿಯಾಗಿದ್ದರೂ ಕೇವಲ ಎರಡು ಹೆಕ್ಟೇರ್‌ಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಖುಷ್ಕಿ ಭೂಮಿಗೆ ಹೆಕ್ಟೇರ್‌ಗೆ ₹8,500, ನೀರಾವರಿ ಭೂಮಿಗೆ ₹17 ಸಾವಿರ, ತೋಟಗಾರಿಕೆ ಭೂಮಿಗೆ ₹24 ಸಾವಿರ ಪರಿಹಾರ ನೀಡಲಾಗುತ್ತದೆ. ಇದು ನಮಗೆ ಖರ್ಚು ಮಾಡಿದ ಶೇ 5ರಷ್ಟು ಹಣ ಸಹಿತ ಮರಳಿ ಬರುವುದಿಲ್ಲ ಎಂದು ರೈತರು ಅವಲತ್ತುಕೊಂಡಿದ್ದಾರೆ.

‘ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆಹಾನಿಯ ಜಂಟಿ ಸಮೀಕ್ಷೆ ಮಾಡಿ, ವರದಿ ಕಳಿಸಿದ್ದಾರೆ. ಸಮೀಕ್ಷೆಯಲ್ಲಿ ಏನಾದರೂ ದೋಷಗಳಿದ್ದರೆ, ಹೆಸರು ಪ್ರಕಟಪಡಿಸದಿದ್ದರೆ ರೈತರಿಂದ ಆಕ್ಷೇಪಣೆ ಸಲ್ಲಿಸಲು ಏಳುದಿನಗಳ ಅವಕಾಶ ನೀಡಲಾಗಿತ್ತು. ಅದಕ್ಕೆ ಸೆ.26 ಕೊನೆದಿನವಾಗಿದೆ. ಆಕ್ಷೇಪಣೆ ಬಂದಲ್ಲಿ ಪರಿಶೀಲಿಸಿ ಸಮೀಕ್ಷೆ ಮಾಡಲಾಗುವುದು. ಮುಂದೆ, ಸರ್ಕಾರ ಪರಿಶೀಲಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತದೆ. ತಾಲ್ಲೂಕಿನಲ್ಲಿ 36 ಮನೆಗಳಿಗೆ ಹಾನಿಯಾಗಿದ. ಹಾನಿ ಪ್ರಮಾಣಕ್ಕನುಗುಣವಾಗಿ ₹5.97 ಲಕ್ಷ ಹಣವನ್ನು ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ. ಬೆಳೆಹಾನಿ ಪರಿಹಾರ ಬರುವ ವಿಶ್ವಾಸವಿದೆ. ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ನರಗುಂದ ತಹಶೀಲ್ದಾರ್‌ ಶ್ರೀಶೈಲ ತಳವಾರ ತಿಳಿಸಿದ್ದಾರೆ.

ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಪುಡಿಗಾಸಿನ ಪರಿಹಾರ ನೀಡದೇ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕು. ಪಟ್ಟಿಯಲ್ಲಿ ಹೆಸರು ಇರಲಿ ಇಲ್ಲದಿರಲಿ ಎಲ್ಲ ರೈತರಿಗೂ ಪರಿಹಾರ ನೀಡಬೇಕು

–ಎಂ.ಎಂ.ಜಾವೂರ ಅಧ್ಯಕ್ಷ ಜೆಡಿಎಸ್ ತಾಲ್ಲೂಕು ಘಟಕ ನರಗುಂದ

ಸಮೀಕ್ಷೆ ಮುಗಿದಿದೆ. ಎಲ್ಲ ವಿವರ ದೊರೆತಿದೆ. ಇದನ್ನು ಮತ್ತೇ ಮತ್ತೇ ಪರಿಶೀಲಿಸದೇ ಕನಿಷ್ಠ ನಾಲ್ಕು ಹೆಕ್ಟೇರ್‌ಗಾದರೂ ಬೆಳೆ ಹಾನಿ ಪರಿಹಾರ ನೀಡಬೇಕು. ವಿಳಂಬ ನೀತಿ ಸಲ್ಲದು. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ

–ವಿಠ್ಠಲ ಜಾಧವ ರೈತ ನರಗುಂದ

ಪಟ್ಟಿಯಲ್ಲಿ ಕೆಲವರ ಹೆಸರೇ ಇಲ್ಲ: ಆತಂಕದಲ್ಲಿ ರೈತರು

ಸರ್ಕಾರದ ಸೂಚನೆಯಂತೆ ಕಂದಾಯ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಎರಡು ವಾರ ಬೆಳೆಹಾನಿ ಸಮೀಕ್ಷೆ ಮಾಡಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಈಗ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಬೆಳೆಹಾನಿಯ ವಿವರವನ್ನು ರೈತರ ಎಫ್ಐಡಿ ಸಮೇತ ಪ್ರಕಟಿಸಿದೆ. ಆದರೆ ಅದರಲ್ಲಿ ಕೆಲವು ರೈತರ ಹೆಸರೇ ಇಲ್ಲ. ಹೆಸರಿದ್ದರೆ ಎಫ್ಐಡಿ ಇಲ್ಲ. ಹೀಗಾಗಿ ರೈತರು ಮತ್ತೇ ಆತಂಕಗೊಳ್ಳುವಂತಾಗಿದೆ. ಇದರಿಂದ ಹೆಸರು ಇರದ ರೈತರಿಗೆ ಪರಿಹಾರ ದೊರೆಯುವುದಿಲ್ಲವೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ. ಹೆಸರು ಇರದ ರೈತರಿಗೆ ಆಕ್ಷೇಪಣೆ ಸಲ್ಲಿಸಲು ಸೆ.26ಕೊನೆ ದಿನವಾಗಿದೆ. ಆದರೆ ಕೆಲವು ರೈತರು ಇನ್ನೂ ಪಟ್ಟಿಯನ್ನೇ ನೋಡಿಲ್ಲ. ಹಾಗಾಗಿ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.