ADVERTISEMENT

ರೈತರ ಹೋರಾಟ ಜ್ವಾಲೆಯಾಗಲಿ

ಬಂಡಾಯದ ನೆಲೆದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹರ್ನೇಕ್ ಸಿಂಗ್, ದೀಪಕ್ ಲಂಬಾ ಗುಡುಗು

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 19:38 IST
Last Updated 21 ಜುಲೈ 2021, 19:38 IST
ನರಗುಂದದಲ್ಲಿ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಮಾಯಿಸಿದ್ದ ರೈತರು ಹಸಿರು ಶಾಲು ಬೀಸಿದರು
ನರಗುಂದದಲ್ಲಿ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಮಾಯಿಸಿದ್ದ ರೈತರು ಹಸಿರು ಶಾಲು ಬೀಸಿದರು   

ನರಗುಂದ: ಕೃಷಿ ಕಾಯ್ದೆಗಳ ತಿದ್ದುಪಡಿ ವಿರೊಧಿಸಿ ದೆಹಲಿಯಲ್ಲಿ ಹೋರಾಟದ ಬೆಂಕಿ ಹೊತ್ತಿಕೊಂಡಿದೆ. ಕರ್ನಾಟಕದ ಬಂಡಾಯದ ನೆಲದಲ್ಲಿಯೂ ಈ ಬೆಂಕಿಯು ಜ್ವಾಲೆಯಾಗಬೇಕು. ಕೇಂದ್ರ ಸರ್ಕಾರವನ್ನು ಕಿತ್ತೊಗೆಯಲು ಎಲ್ಲ ರೈತರು ಒಂದಾಗಬೇಕು ಎಂದು ರಾಷ್ಟ್ರೀಯ ರೈತ ಕಿಸಾನ್ ಮೋರ್ಚಾದ ಮುಖಂಡ ಹರ್ನೇಕ್ ಸಿಂಗ್ ಹೇಳಿದರು.

ಪಟ್ಟಣದ ಹೊಸ ಎಪಿಎಂಸಿ ಆವರಣದಲ್ಲಿನ ಬಾಬಾಗೌಡ ಪಾಟೀಲ ವೇದಿಕೆಯಲ್ಲಿ 41ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಬುಧವಾರ ನಡೆದ ರೈತ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರೈತ ಹಾಗೂ ಜನ ವಿರೋಧಿ ನೀತಿ ಮೂಲಕ ಶೋಷಣೆಗೆ ಮುಂದಾಗುತ್ತಿದೆ. ಇದನ್ನು ರೈತರು ಅರಿಯಬೇಕು ಎಂದರು.

ರೈತರ ಎದೆಗಳಲ್ಲಿ ಹೋರಾಟದ ಬೆಂಕಿ ಹೊತ್ತಿಸಲು ನಾವು ದೆಹಲಿಯಿಂದ ಬಂದಿದ್ದೇವೆ. ಸ್ವರ್ಗದಂತಿರುವ ಹುತಾತ್ಮರ ನೆಲದಲ್ಲಿ ರೈತರು ಶಕ್ತಿ ಪ್ರದರ್ಶಿಸಬೇಕಿದೆ. ಕಾರ್ಪೋರೆಟ್ ಸರ್ಕಾರ ನಡೆಸುತ್ತಿರುವ ಪ್ರಧಾನಿ ಮೋದಿ ಅಂಬಾನಿ, ಅದಾನಿ ಅವರ ಕುಕೃತ್ಯಗಳನ್ನು ಸುಡಲು ದೆಹಲಿ ಹೋರಾಟದ ಬೆಂಕಿ ಇನ್ನಷ್ಟು ತೀವ್ರಗೊಳ್ಳಬೇಕು. ರೈತರು ಒಂದಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು

ADVERTISEMENT

500 ವರ್ಷಗಳ ಹಿಂದೆಯೇ ಪಂಜಾಬಿನಲ್ಲಿ ಹೋರಾಟ ನಡೆಯು ತ್ತಿದೆ. ಗುರುನಾನಕ್‍ರು ಎಲ್ಲ ಶ್ರಮಿಕರು, ಶೋಷಿತರು ಮಾಲೆಯ ರೀತಿಯಲ್ಲಿ ಒಂದಾಗಬೇಕು ಎಂದು ಹೇಳಿದ್ದರು. ಅದೇ ರೀತಿ ಈಗ ಪ್ರಭುತ್ವದ ವಿರುದ್ಧ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಕೃಷಿ ಕಾನೂನು, ವಿದ್ಯುತ್ ಖಾಸಗೀ ಕರಣ 2020 ಕೈಬಿಡಬೇಕು. ಕನಿಷ್ಠ ಬೆಂಬಲ ಬೆಲೆ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಹರಿಯಾಣಾದ ರೈತ ಮುಖಂಡ ದೀಪಕ್ ಲಂಬಾ ಮಾತನಾಡಿ, ದುರಹಂಕಾರಿ ಮನೋಭಾವದ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕು. ರೈತರನ್ನು ದೇಶದ್ರೋಹಿಗಳಂತೆ ಕಾಣುವ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಬೇಕಿದೆ. ಆದ್ದರಿಂದ ಜುಲೈ 22ರಿಂದ ಅಗಸ್ಟ್ 13ರವರೆಗೆ ದೆಹಲಿ ಸಂಸತ್ ಮುಂದೆ ಧರಣಿ ನಡೆಸಲಾಗುವುದು. ಅಧಿವೇಶನದಲ್ಲಿ ಬಿಜೆಪಿ ಹಾಗೂ ಇತರ ಸಂಸದರು ದೆಹಲಿ ಹೋರಾಟ ಪ್ರಸ್ತಾಪಿಸಿ ಕೃಷಿ ಕಾನೂನುಗಳನ್ನು ರದ್ದು ಮಾಡಿಸಬೇಕು. ಇಲ್ಲವಾದರೆ ಸಂಸತ್ ಒಳಗೆ ಪ್ರವೇಶ ಮಾಡಲಾಗುವುದು ಎಂದು ಲಂಬಾ ಎಚ್ಚರಿಸಿದರು.

ಹಿಂದಿಯಲ್ಲಿ ಮಾತನಾಡಿದ ಹರ್ನೇಕ್ ಸಿಂಗ್‍ ಅವರ ಭಾಷಣವನ್ನು ಮಲ್ಲಿಗೆ ಸಿರಿಮನೆ, ದೀಪಕ ಲಂಬಾ ಮಾತನಾಡಿದ್ದನ್ನು ವೆಂಕನಗೌಡ ಪಾಟೀಲ ಕನ್ನಡಕ್ಕೆ ಭಾಷಾಂತರಿಸಿದರು.

ಸಮಾಜ ಸಮುದಾಯ ಪರಿವರ್ತನಾ ಮುಖಂಡ ಎಸ್.ಆರ್.ಹಿರೇಮಠ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ವಿರೋಧಿ ನೀತಿ ಅನುಸರಿಸುತ್ತಿವೆ. ಮೂರು ಕೃಷಿ ಕಪ್ಪು ಕಾನೂನುಗಳು ರದ್ದಾಗಬೇಕು ಎಂದರು.

ರಾಜ್ಯ ರೈತಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿದರು. ಅಧ್ಯಕ್ಷ ಬಡಗಲಪುರ ನಾಗೇಂದ್ರ ಕೃಷಿ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಎಂಬ ಸಂಕಲ್ಪದ ಪ್ರತಿಜ್ಞಾವಿಧಿ ಬೋಧಿಸಿದರು.

ಮಹದಾಯಿ ಹೋರಾಟಗಾರರಾದ ವೀರೇಶ ಸೊಬರದಮಠ, ಶಂಕ್ರಣ್ಣ ಅಂಬಲಿ, ವಿಧಾನಸಭೆ ಮಾಜಿ ಸಭಾಪತಿ ಬಿ.ಆರ್.ಪಾಟೀಲ, ಜಯಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಜಗದೀಶ, ಕರ್ನಾಟಕ ರಕ್ಷಣಾ ವೇದಿಕೆಯ ದೀಪಕ, ಎಂ.ಡಿ.ತಿವಾರಿ ಮಾತನಾಡಿದರು.

ರೈತ ಸಂಘದ ವಿಠ್ಠಲ ಜಾಧವ, ಚನ್ನು ನಂದಿ, ಮಂಜುಳಾ ಅಕ್ಕಿ, ಮಲ್ಲಿಗೆ ಸಿರಿಮನೆ, ಲೀಲಕ್ಕ ಹಸಬಿ ಹಾಗೂ ರಾಜ್ಯದ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಹರ್ನೇಕ್ ಸಿಂಗ್ ಹಾಗೂ ದೀಪಕ ಲಂಬಾ ಅವರು ಪಾದಯಾತ್ರೆ ಮೂಲಕ ರೈತರೊಂದಿಗೆ ಬಂದು ವೀರಗಲ್ಲಿಗೆ ನಮಿಸಿ ವೇದಿಕೆಗೆ ಏರಿದರು. ನಂತರ ಹುತಾತ್ಮ ರೈತರನ್ನು ನೆನೆದು ದೇಹ ಬಾಗಿಸಿ ನಮಿಸಿದ್ದು ಜಮಾಯಿಸಿದ್ದ ರೈತರನ್ನು ಸೆಳೆಯಿತು. ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲೆಡೆ ಹಸಿರು ಶಾಲು ಹಾರಾಡಿದ್ದು ವಿಶೇಷವಾಗಿತ್ತು.

ರೈತ ಸಂಘದೊಂದಿಗೆ ಮಹದಾಯಿ ನೀರಿಗಾಗಿ ಮಹಾವೇದಿಕೆ, ಕರ್ನಾಟಕ ರೈತಸೇನೆ, ರೈತಸೇನೆ ಕರ್ನಾಟಕ, ಕರ್ನಾಟಕ ಜನಶಕ್ತಿ, ಜನಾಂದೋಲನ ಮಹಾಮೈತ್ರಿ, ಉತ್ತರ ಕರ್ನಾಟಕ ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಕಾರ್ಮಿಕ, ದಲಿತ, ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

24 ನಿರ್ಣಯ

ಕೃಷಿ ಕಾನೂನು ರದ್ದತಿ, ವಿದ್ಯುತ್ ಖಾಸಗಿಕರಣ ಕೈಬಿಡುವುದು, ರೈತರ ಮೇಲಿನ ಮೊಕದ್ದಮೆ ವಾಪಸ್, ಮಹದಾಯಿ ಕಾಮಗಾರಿ ಆರಂಭ, ಕಬ್ಬು ಬೆಳೆಗಾರರ ಬಾಕಿ ಸಮಸ್ಯೆ ಬಗೆಹರಿಸುವ ವಿಷಯ ಸೇರಿದಂತೆ 24 ನಿರ್ಣಯಗಳನ್ನು ಈ ಸಮಾವೇಶ ಕೈಗೊಳ್ಳಲಾಯಿತು.

***

56 ಇಂಚಿನ ಎದೆ ಹೊಂದಿರುವ ಪ್ರಧಾನಿ ಮೋದಿಗೆ ರೈತರೆಂದರೆ ಭಯ. ಆದ್ದರಿಂದಲೇ ನಮ್ಮ ಚಲನವಲನಗಳ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ

- ಹರ್ನೇಕ್ ಸಿಂಗ್, ರಾಷ್ಟ್ರೀಯ ರೈತ ಕಿಸಾನ್ ಮೋರ್ಚಾದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.