ADVERTISEMENT

ನರಗುಂದ: ವೇತನ ಪಾವತಿಗೆ ಆಗ್ರಹಿಸಿ ಅಸಹಕಾರ ಚಳವಳಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 4:29 IST
Last Updated 6 ಜುಲೈ 2025, 4:29 IST
ನರೇಗಾ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗದಿರುವುದಕ್ಕೆ ಆಕ್ರೋಶಗೊಂಡ ಸಿಬ್ಬಂದಿ ಜುಲೈ 8ರಿಂದ ಎಲ್ಲ ನರೇಗಾ ನೌಕರರು ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಇಒ ಸಂತೋಷಕುಮಾರ ಪಾಟೀಲರಿಗೆ ಮನವಿ ಸಲ್ಲಿಸಿದರು.
ನರೇಗಾ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗದಿರುವುದಕ್ಕೆ ಆಕ್ರೋಶಗೊಂಡ ಸಿಬ್ಬಂದಿ ಜುಲೈ 8ರಿಂದ ಎಲ್ಲ ನರೇಗಾ ನೌಕರರು ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಇಒ ಸಂತೋಷಕುಮಾರ ಪಾಟೀಲರಿಗೆ ಮನವಿ ಸಲ್ಲಿಸಿದರು.   

ನರಗುಂದ: ಆರು ತಿಂಗಳಿಂದ ನರೇಗಾ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗದಿರುವುದಕ್ಕೆ ಆಕ್ರೋಶಗೊಂಡ ಸಿಬ್ಬಂದಿ ಜುಲೈ 8ರಿಂದ ಎಲ್ಲ ನರೇಗಾ ನೌಕರರು ಕೆಲಸ ಸ್ಥಗಿತಗೊಳಿಸಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ತಾಲ್ಲೂಕು ವ್ಯಾಪ್ತಿಯ ನರೇಗಾ ಹೊರಗುತ್ತಿಗೆ ನೌಕರರು ಶನಿವಾರ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ನರೇಗಾ ನೌಕರ ಹನಮಂತ ಡಂಬಳ ಮಾತನಾಡಿ, ‘ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರ ಪಾತ್ರ ಬಹುಮುಖ್ಯವಾಗಿದೆ. ಆದರೆ ನೌಕರರಿಗೆ ಪ್ರತಿ ತಿಂಗಳು ವೇತನ ಸರಿಯಾಗಿ ದೊರೆಯುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ಅಲವತ್ತುಕೊಂಡರು.

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತಾಲ್ಲೂಕು ಹಂತದಲ್ಲಿ ಟಿಐಇಸಿ, ಟಿಸಿ, ಟಿಎಂಐಎಸ್, ಟಿಎಇ (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗದಲ್ಲಿ ಹಾಗೂ ಬಿಎಫ್‌ಟಿ ಸೇರಿ ವಿವಿಧ ಹುದ್ದೆಗಳಲ್ಲಿ 13ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲ ನರೇಗಾ ಯೋಜನೆಯ ಸಿಬ್ಬಂದಿಗೆ 6 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಸರ್ಕಾರ ಕೂಡಲೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ವೇತನ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು,

ADVERTISEMENT

ಈ ಹಿಂದೆಯೂ ಸರ್ಕಾರದ ಗಮನಕ್ಕೆ ತರಲು ಪ್ರತಿಭಟನೆ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಬಳ ಬಾಕಿ ವಿಷಯಕ್ಕೆ ಸಂಬಂಧಿಸಿದಂತೆ ಜುಲೈ 8ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಮತ್ತು ರಾಜ್ಯದಿಂದ ಜಿಲ್ಲೆಗೆ ಅನುದಾನ ಬಿಡುಗಡೆಯಾಗಿದ್ದರೂ ಹೊಸ ತಂತ್ರಾಂಶದ ತಾಂತ್ರಿಕ ಸಮಸ್ಯೆಯಿಂದಾಗಿ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸಂಘ ಈಗಾಗಲೇ ಎರಡು ದಿನಗಳ ಕಾಲಾವಧಿ ನೀಡಿದೆ. ಈ ಅವಧಿಯಲ್ಲಿ ವೇತನ ಪಾವತಿಯಾಗದಿದ್ದರೆ ಸಿಬ್ಬಂದಿ ಕೆಲಸ-ಕಾರ್ಯಗಳನ್ನು ನಿಲ್ಲಿಸಿ ಅಸಹಕಾರ ಚಳವಳಿಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹೇಶ ಚಿತವಾಡಗಿ, ಮಂಜುನಾಥ ಹಳ್ಳದ, ಲಿಂಗರಾಜ ಮುದಿಗೌಡ್ರ, ಈರಯ್ಯ ಶಹಪೂರಮಠ, ಬಸವರಾಜ ಚಿಮ್ಮನಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.