ADVERTISEMENT

ಕ್ಯಾಂಟರ್‌ ಹತ್ತಿ ಶಾಲೆಗೆ ಹೊರಟ ಶಿಕ್ಷಕಿಯರು

ಪ್ರಯಾಣಿಕರ ಸಂಖ್ಯೆ ಹೆಚ್ಚಳ l ನರೇಗಲ್‌ನಲ್ಲಿ ನಿಲ್ಲುತ್ತಿಲ್ಲ ಬಸ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 3:05 IST
Last Updated 18 ಜುಲೈ 2025, 3:05 IST
ನರೇಗಲ್‌ ಪಟ್ಟಣದಲ್ಲಿ ಕ್ಯಾಂಟರ್‌ ವಾಹನ ಏರುತ್ತಿರುವ ಶಾಲಾ ಶಿಕ್ಷಕಿಯರು
ನರೇಗಲ್‌ ಪಟ್ಟಣದಲ್ಲಿ ಕ್ಯಾಂಟರ್‌ ವಾಹನ ಏರುತ್ತಿರುವ ಶಾಲಾ ಶಿಕ್ಷಕಿಯರು   

ನರೇಗಲ್: ಒಂದೆಡೆ ಸರ್ಕಾರ ‘ಶಕ್ತಿ ಯೋಜನೆʼಯ ಸಂಭ್ರಮದಲ್ಲಿದ್ದರೆ ಇನ್ನೊಂದೆಡೆ ನರೇಗಲ್‌ ಹೋಬಳಿಯಾದ್ಯಂತ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಹಾಗೂ ಬಸ್‌ಗಳ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಹೊಗಲಾಗದೆ ಶಿಕ್ಷಕರು, ವಿದ್ಯಾರ್ಥಿಗಳು ದಿನವೂ ಪರದಾಡುತ್ತಿದ್ದಾರೆ. ಇದರಿಂದಾಗಿ ನರೇಗಲ್‌ ಪಟ್ಟಣದಿಂದ ಸಮೀಪದ ಗ್ರಾಮಗಳಿಗೆ ಖಾಸಗಿ ವಾಹನಗಳ ಮೂಲಕ ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕಿಯರು ಕ್ಯಾಂಟರ್‌, ಲಾರಿ, ಟ್ರಾಕ್ಟರ್‌, ಟಂಟಂ ಇತರೆ ವಾಹನಗಳನ್ನೂ ಅವಲಂಬಿಸಿದ್ದಾರೆ.

ನರೇಗಲ್‌ ಪಟ್ಟಣವು ಗದಗ ಜಿಲ್ಲೆಯ ವಿದ್ಯಾಕಾಶಿ ಎಂದೇ ಪ್ರಸಿದ್ದಿಯಾಗಿದೆ. ಇಲ್ಲಿನ ಅನ್ನದಾನೇಶ್ವರ ಅಂಗ ಸಂಸ್ಥೆಯ ಶಾಲಾಕಾಲೇಜುಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅದರಲ್ಲಿ 4 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿವಿಧ ಗ್ರಾಮಗಳಿಂದ ಇಲ್ಲಿಗೆ ಕಲಿಯಲು ಬರುತ್ತಾರೆ. ಆದರೆ ಈ ಮೊದಲು ಸಮಯಕ್ಕೆ ಸರಿಯಾಗಿ, ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಬೆಳಿಗ್ಗೆ ಸಂಜೆ ಬರುತ್ತಿದ್ದ ವಾಹನಗಳಿಗ ಬರುತ್ತಿಲ್ಲ. ಅದರಲ್ಲೂ ಬೆಳಿಗ್ಗೆ 7 ರಿಂದ 10 ಗಂಟೆ ಒಳಗೆ, ಸಂಜೆ 4 ರಿಂದ 6 ಗಂಟೆ ಒಳಗೆ ಬಸ್‌ಗಳ ಒಡಾಟ ತುಂಬಾ ಕಡಿಮೆಯಾಗಿದೆ. ಹೀಗಾಗಿ ಯಾವಾಗಲೋ ಒಮ್ಮೆ ಬರುವ ಬಸ್‌ಗೆ ವಿಪರೀತ ಸಂಖ್ಯೆಯಲ್ಲಿ, ಬಾಗಿಲಿಗೆ ಜೋತು ಬೀಳುವಂತೆ ಜನರನ್ನು ತುಂಬಿಕೊಂಡು ಹೋಗಬೇಕಾಗುತ್ತದೆ.

‘ಈ ಮೊದಲು ಬಸ್‌ಗಳ ಸಂಚಾರಕ್ಕೆ ನಿಗದಿತ ಸಮಯವಿತ್ತು ಆದರೆ ಶಕ್ತಿ ಯೋಜನೆ ಬಂದರೆ ಸಮಯ ಪಾಲನೆಯಾಗುತ್ತಿಲ್ಲ ಬೇಕಾಬಿಟ್ಟಿಯಾಗಿ ಸಂಚರಿಸುತ್ತಾರೆ. ತಡವಾಗಿ ಬಂದರೆ ತರಗತಿಗಳು ತಪ್ಪುತ್ತವೆ, ಶಿಕ್ಷಕರು ಹೊರಗೆ ನಿಲ್ಲಿಸುತ್ತಾರೆ. ಆದ್ದರಿಂದ ಅನಿವಾರ್ಯವಾಗಿ ಗೂಡ್ಸ್‌ ಗಾಡಿಗಳ ಮೂಲಕ ಪ್ರಯಾಣಿಸುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ADVERTISEMENT

ನರೇಗಲ್‌ ನಗರವು ಹೋಬಳಿ ಕೇಂದ್ರವಾಗಿರುವ ಕಾರಣ ಗಜೇಂದ್ರಗಡ, ಯಲಬುರ್ಗಾ, ರೋಣ, ಬಾಗಲಕೋಟೆ, ಕುಷ್ಟಗಿ, ಕುಕನೂರ, ಗದಗ ಭಾಗದಿಂದ ಬರುವ ಪ್ರತಿ ಬಸ್‌ ಇಲ್ಲಿನ ಬಸ್‌ ನಿಲ್ದಾಣದ ಒಳಗೆ ಬಂದು ನಿಲ್ಲುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಗದಗ-ಗಜೇಂದ್ರಗಡ ಮಾರ್ಗದ ಕೆಲವು ಬಸ್‌ಗಳನ್ನು ನಿಲ್ಲಿಸುತ್ತಿಲ್ಲ. ಕೆಲವು ಬಸ್‌ ಸವಾರರು ವಿದ್ಯಾರ್ಥಿಗಳನ್ನು ನೋಡಿ ಬಸ್‌ ನಿಲ್ದಾಣದ ಹೊರಗಿನಿಂದ ಹೊರಗೆ ಹೋಗುತ್ತಾರೆ. ಸಂಜೆ 6:30ಕ್ಕೆ ಬರುವ ಕಲಬುರ್ಗಿ-ಮಂಗಳೂರ ಬಸ್‌ ನರೇಗಲ್‌ ಪಟ್ಟಣದಲ್ಲಿ ನಿಲ್ಲಿಸುತ್ತಿಲ್ಲ. ಇದರಿಂದಾಗಿ ಸ್ಥಳೀಯರು ನಾಲ್ಕೈದು ಬಾರಿ ಬಸ್‌ ತಡೆದು ಪ್ರತಿಭಟನೆ ಮಾಡಿದರು. ರೋಣ ಶಾಸಕ ಜಿ. ಎಸ್.‌ ಪಾಟೀಲರು ಕೆಎಸ್‌ಆರ್‌ಟಿಸಿ ಡಿಸಿಯವರಿಗೆ ಪತ್ರ ಬರೆದು ಈ ಮೊದಲಿನಂತೆ ಎಲ್ಲಾ ಬಸ್‌ಗಳನ್ನು ನಿಲ್ಲಿಸುವಂತೆ ತಿಳಿಸಿದರು. ಆದರೂ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಈಚೆಗೆ ನಡೆದ ಗ್ಯಾರಂಟಿ ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರು ಆರೋಪ ಮಾಡಿದರು.

ನರೇಗಲ್‌ ಪಟ್ಟಣದಲ್ಲಿ ಕ್ಯಾಂಟರ್‌ ವಾಹನ ಏರುತ್ತಿರುವ ಶಾಲಾ ಶಿಕ್ಷಕಿಯರು

*ಒಂದೆಡೆ ಶಕ್ತಿ ಯೋಜನೆ ಸಂಭ್ರಮ ; ಇನ್ನೊಂದೆಡೆ ಶಿಕ್ಷಕರು-ವಿದ್ಯಾರ್ಥಿಗಳ ಪರದಾಟ

ಬಸ್‌ ಸಮಸ್ಯೆ ಕುರಿತು ದೂರುಗಳು ಬಂದಿವೆ ಅದನ್ನು ಸರಿಪಡಿಸುವಂತೆ ರೋಣ-ಗಜೇಂದ್ರಗಡ ಬಸ್‌ ಘಟಕಗಳ ವ್ಯವಸ್ಥಾಪಕರಿಗೆ ಸಮಿತಿಯಿಂದ ಲಿಖಿತ ಮನವಿ ನೀಡಲಾಗುವುದು ನಂತರ ಶಾಸಕರ ಗಮನಕ್ಕೂ ತರಲಾಗುವುದು
ಶರಣಪ್ಪ ಬೆಟಗೇರಿ ಗಜೇಂದ್ರಗಡ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ
ಬಸ್‌ ಸಂಖ್ಯೆಯಲ್ಲಿ ವ್ಯತ್ಯಾಸವಿಲ್ಲ. ಮೊದಲಿನಷ್ಟೇ ಬಸ್‌ಗಳು ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿವೆ. ನರೇಗಲ್‌ನಲ್ಲಿ ಬಸ್‌ ನಿಲ್ಲದಿದ್ದಲ್ಲಿ ನಮಗೆ ಮಾಹಿತಿ ನೀಡಿ. ಕ್ರಮ ಕೈಗೊಳ್ಳುತ್ತೇವೆ.
ಸಂಗಪ್ಪ ಪ್ರಭಾರ ವ್ಯವಸ್ಥಾಪಕ ಗಜೇಂದ್ರಗಡ ಬಸ್ ಡಿಪೋ
ವಾಸ್ತವ ಸಂಗತಿ ತಿಳಿಯಲು ಡಿಪೊ ವ್ಯವಸ್ಥಾಪಕರಿಗೆ ಸೂಚಿಸಲಾಗುವುದು. ಬಸ್‌ ಸಮಸ್ಯೆ ಕುರಿತು ಯಾರಾದರು ಮನವಿ ಕೊಟ್ಟಿದ್ದರೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು.
ಡಿ.ದೇವರಾಜು ನಿಯಂತ್ರಣಾಧಿಕಾರಿ ವಾಯವ್ಯ ಸಾರಿಗೆ ಸಂಸ್ಥೆ

ಗದಗ-ಬಾಗಲಕೋಟ ಮಾರ್ಗ ಬದಲಾವಣೆಗೆ ಆಗ್ರಹ ಗದಗ ನಿಂದ ಅಬ್ಬಿಗೇರಿ-ರೋಣ ಮೂಲಕ ಬಾಗಲಕೋಟೆಗೆ ನೂರಾರು ಬಸ್‌ ಸಂಚಾರ ಮಾಡುತ್ತವೆ. ಅದರಲ್ಲಿ ಬೆಳಿಗ್ಗೆ ಸಂಜೆ ಒಂದೆರೆಡು ಬಸ್‌ಗಳನ್ನು ಗದಗ-ನರೇಗಲ್-ಜಕ್ಕಲಿ ಗದಗ-ನರೇಗಲ್-ಅಬ್ಬಗೇರಿ-ರೋಣ ಮೂಲಕ ಬಾಗಲಕೋಟೆಗೆ ಮಾರ್ಗ ಬದಲಾವಣೆ ಮಾಡಿದರೆ ವಿದ್ಯಾರ್ಥಿಗಳು ಸೇರಿದಂತೆ ಜನರಿಗೂ ಅನಕೂಲವಾಗಲಿದೆ ಎಂದು ಮಂಜುನಾಥ ಕೆ ಹುಚ್ಚೀರಪ್ಪ ಗುತ್ತೂರ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.