ನರೇಗಲ್: ವೈಭವದಿಂದ ಆಚರಣೆ ಮಾಡುವ ದಸರಾ ಹಬ್ಬಕ್ಕೆ ಆಯಾ ಊರುಗಳಲ್ಲಿ ಒಂದೊಂದು ಹಿನ್ನೆಲೆ, ಐತಿಹಾಸಿಕ ಮಹತ್ವ ಹಾಗೂ ವಿಶಿಷ್ಟ ಸಂಪ್ರದಾಯವಿದೆ. ಹೀಗೆ ಪ್ರತಿ ವರ್ಷ ನರೇಗಲ್ ಪಟ್ಟಣದಲ್ಲಿ ದಸರಾ ಸಂದರ್ಭದಲ್ಲಿ ಮನೆ ಮನೆಗೆ ಸ್ವತಃ ದೇವಿವೇ ಬರುತ್ತಾಳೆ. ಇದನ್ನು ಸ್ಥಳೀಯರು ದೇವಿ ಪಾಲಕಿ ಹೊತ್ತು ಊರು ಸುತ್ತುವುದು ಎನ್ನುತ್ತಾರೆ.
ಹೀಗೆ ಹಿಂದಿನ ಕಾಲದ ಆಚರಣೆಯನ್ನು ಇಂದಿಗೂ ಮುಂದಯವರಿಸಿಕೊಂಡು ಬಂದಿದ್ದಾರೆ ಪಟ್ಟಣದ 6ನೇ ವಾರ್ಡ್‌ನ ಡಾ.ಬಿ.ಆರ್. ಅಂಬೇಡ್ಕರ್ ನಗರದ ಪರಿಶಿಷ್ಟರು. ಈ ಆಚರಣೆ ನವರಾತ್ರಿಯ ಮೊದಲ ದಿನ ಆರಂಭಗೊಂಡು ಆಯುಧ ಪೂಜೆಯ ದಿನ ಕೊನೆಗೊಳ್ಳುತ್ತದೆ.
ಈ ಸಂದರ್ಭಕ್ಕಾಗಿಯೇ ಕಾಯುವ ದೇವಿ ಹೊತ್ತು ಸುತ್ತವ ಜನ ತಳಿರು, ತೋರಣಗಳಿಂದ ಇಡೀ ತಮ್ಮ ಓಣಿಯನ್ನು ಅಲಂಕರಿಸುತ್ತಾರೆ. ಮಡಿಯನ್ನು ಕಾಯ್ದುಕೊಂಡು ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ದೇವಿ ಆರಾಧನೆಗೆ ಮುಂದಾಗುತ್ತಾರೆ. ವಿಶೇಷ ರೀತಿಯಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯನ್ನು ಇರಿಸಿ ಪೂಜಿಸುತ್ತಾರೆ. ನಂತರ ಅದನ್ನು ಹೊತ್ತು ಸಾಗುತ್ತಾರೆ. ಮಹಿಳೆಯರು ದೇವಿಯ ಕುರಿತು ಗೀತೆಯನ್ನು ಹಾಡಿದರೆ ಪುರುಷರು ತಮಟೆ ಬಾರಿಸುತ್ತ ಮನೆಮನೆಗೆ ಹೋಗುತ್ತಾರೆ. ಮನೆ ಮಂದಿ ದೇವಿಗೆ ಹೂ, ಕಾಯಿ, ನೈವೇದ್ಯ ಸಮರ್ಪಿಸುತ್ತಾರೆ.
ಹೀಗೆ ದೇವಿ ಮನೆಗೆ ಬಂದಾಗ ಕೆಲವರು ಬೇಡಿಕೊಳ್ಳುವ ಪದ್ಧತಿಯೂ ಇದೆ. ಅದನ್ನು ಮುಂದಿನ ವರ್ಷದ ಹರಕೆಗೆ ಕಾಯ್ದಿರಿಸುತ್ತಾರೆ. ಹೀಗೆ ದೇವಿ ಹೊತ್ತು ಸಾಗುವ ಪರಂಪರೆ ನಮ್ಮ ಹಿರಿಯರಿಂದ ಇಂದಿಗೂ ಹಾಗೆಯೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹುಚ್ಚೀರಪ್ಪ ಚವರಿ, ಮಹಾದೇವಪ್ಪ ಚಲವಾದಿ, ಗುರು ಪೂಜಾರ, ಕುಮಾರ ಹೊಂಬಳ, ಮುತ್ತು ಚವರಿ, ದೇವಕ್ಕ ಚಲವಾದಿ, ಲಕ್ಷ್ಮವ್ವ ಚಲವಾದಿ, ದುರಗವ್ವ , ಫಕೀರವ್ವ ಚವರಿ ಹೇಳಿದರು.
ನಾವು ಪ್ರತಿ ಓಣಿಗೆ ಹೊತ್ತು ಹೋದಾಗ ಅಲ್ಲಿನ ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪರಿಣಾಮ ಬೀರುತ್ತದೆ ಅದಕ್ಕಾಗಿ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ನಮ್ಮನ್ನು ಜನರು ಸಹ ಆಹ್ವಾನಿಸುತ್ತಾರೆ ಎಂದು ಸಿದ್ದಪ್ಪ ಚವರಿ, ನಿಂಗಪ್ಪ ಚವರಿ, ಮಹಾದೇವಪ್ಪ ಚಲವಾದಿ, ರೇಣವ್ವ ಚಲವಾದಿ, ಮಲ್ಲವ್ವ ಚಲವಾದಿ, ಹುಲಗವ್ವ ಚಲವಾದಿ, ದೇವವ್ವ ಚಲವಾದಿ, ಶಾವವ್ವ ಚಲವಾದಿ ಹೇಳಿದರು.
ದೇವಿ ಪಲ್ಲಕ್ಕಿ ವಿಶೇಷತೆ ಆಯುಧ ಪೂಜೆವರೆಗೆ ದೇವಿ ಪಾಲಕಿಯನ್ನು ಪಟ್ಟಣದ ಹದಿನೇಳು ವಾರ್ಡ್‌ಗೆ ಹಾಗೂ ಮಜರೆ ಹಳ್ಳಿಗಳಿಗೆ ಹೊತ್ತು ಹೋಗುತ್ತಾರೆ. ನಂತರ ಘಟಕ್ಕೆ ಹಾಕಿ ದೇವತೆ ಒಟ್ಟಿಗೆ ಬೀಳ್ಕೊಡುವುದು ಮತ್ತೊಂದು ವಿಶೇಷ. ಆ ದಿನ ಪೂಜೆ ವಿಶೇಷ ಆರಾಧನೆ ಹಾಗೂ ಕಾರ್ಯಕ್ರಮಗಳು ಜರುಗುತ್ತವೆ. ವಿಜಯದಶಮಿ ದಿನ ಬನ್ನಿ ಮುಡಿದು ಪರಸ್ಪರ ಶುಭ ಕೋರುತ್ತಾರೆ. ಹೀಗೆ ಮನೆಮನೆಗೆ ಹೋದಾಗ ದೇವಿಗೆ ಪೂಜೆ ಸಲ್ಲಿಸುವ ಜನರು ಜೋಳ ಗೋಧಿ ಅಕ್ಕಿ ಹಾಗೂ ಇತರೆ ಕಾಳುಕಡಿಯನ್ನು ಮರದಲ್ಲಿ ಹಾಕಿ ನೀಡುತ್ತಾರೆ. ಕೆಲವರು ದೇವಿಗೆ ಅಲ್ಪ ಕಾಣಿಕೆಯನ್ನು ದೇಣಿಗೆಯಾಗಿ ನೀಡುತ್ತಾರೆ. ದೇಣಿಗೆಯ ಮರದ ನಾಲ್ಕಾರು ಕಾಳುಕಡಿ ಹಾಗೂ ಕುಂಕುಮ ಅರಿಶಿನ ಹಾಕಿ ಮರಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.