ನರೇಗಲ್: ಮಕ್ಕಳ ಪ್ರವೇಶಾತಿ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ನರೇಗಲ್ ಪಟ್ಟಣದ 1ನೇ ವಾರ್ಡ್‌ನ ಕೋಚಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಳಿವಿಗಾಗಿ ಶಿಕ್ಷಕ ವಿಜಯಕುಮಾರ್ ಡಿ.ಆರ್. ತಮ್ಮ ಸ್ವಂತ ಖರ್ಚಿನಲ್ಲಿ ಕ್ರಿಯಾತ್ಮಕ ಕಲಿಕಾ ಚಟುವಟಿಕೆಗಳು ಹಾಗೂ ಉಪಯುಕ್ತ ಯೋಜನೆಗಳನ್ನು ಆಯೋಜಿಸುವ ಮೂಲಕ ಪಾಲಕರ ಗಮನ ಸೆಳೆದಿದ್ದಾರೆ.
ಶಾಲೆಯ ಮುಖ್ಯಶಿಕ್ಷಕಿ ಎಸ್.ಬಿ.ಕೊಟ್ರಶೆಟ್ಟಿ ಅವರ ಸಹಕಾರದಲ್ಲಿ ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಶಾಲೆಯ ಚಿತ್ರಣವನ್ನು ಬದಲಿಸಿದ್ದಾರೆ.
ಸಮೀಪದಲ್ಲಿಯೇ ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವ ಅಧಿಕವಾಗಿರುವ ಕಾರಣದಿಂದಾಗಿ ಪಾಲಕರು ಸರ್ಕಾರಿ ಶಾಲೆಯ ಬಗ್ಗೆ ತಾತ್ಸರ ಭಾವನೆ ಹೊಂದಿದ್ದರು. ಅದನ್ನರಿತ ಇವರು ಹಳೇ ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳನ್ನು ಸಂಪರ್ಕ ಮಾಡಿ ಅವರೊಂದಿಗೆ ಚರ್ಚೆ ಮಾಡಿ ಅಭಿವೃದ್ದಿಗೆ ಮುಂದಾಗಿದ್ದಾರೆ. ಅವರ ಸಹಾಯ ಪಡೆದು ಗ್ರಾಮದ ಪ್ರತಿ ಮನೆಗೆ ಹೋಗಿ ಶಾಲೆಯ ಅಭಿವೃದ್ದಿ ಕುರಿತು ಜಾಗೃತಿ ಮೂಡಿಸಿದ್ದಾರೆ.
ಈ ವೇಳೆ ಗ್ರಾಮಸ್ಥರು ₹20ರಿಂದ ₹1 ಸಾವಿರವರೆಗೆ ಪ್ರತಿ ಮನೆಯಿಂದ ದೇಣಿಗೆ ನೀಡಿದ್ದಾರೆ. ಆಗ ₹55 ಸಾವಿರ ಸಂಗ್ರಹವಾಗಿದೆ. ಅದಕ್ಕೆ ಮೂವರು ಶಿಕ್ಷಕರು ₹12 ಸಾವಿರ ಹೆಚ್ಚುವರಿಯಾಗಿ ಸೇರಿಸಿ ಸಂಪೂರ್ಣ ಶಾಲೆಯ ಏಳೂ ಕೊಠಡಿಗಳಿಗೆ ಬಣ್ಣ ಹಚ್ಚಿಸಿದ್ದಾರೆ. ಗೋಡೆ ಬರಹ ಮಾಡಿಸಿದ್ದಾರೆ. ಮೂರು ಅತ್ಯಾಧುನಿಕ 360 ಡಿಗ್ರಿ ಎಐ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಅವು ಹೊಸಬರು ಬಂದರೆ ಡಿಟೆಕ್ಟ್ ಮಾಡಿ ಶಿಕ್ಷಕರ ಮೊಬೈಲ್‌ಗೆ ಫೋಟೊ ಕಳುಹಿಸಿ ಕೊಡುತ್ತವೆ.
ಅಷ್ಟೇ ಅಲ್ಲದೆ, ಶಿಕ್ಷಕ ವಿಜಯಕುಮಾರ್ ಡಿ. ಆರ್. ಅವರು ತಮ್ಮ ಸ್ವಂತ ಹಣದಲ್ಲಿ 300 ಪುಸ್ತಕಗಳನ್ನು ಒಳಗೊಂಡ ಕಿರು ಗ್ರಂಥಾಲಯ ನಿರ್ಮಿಸಿದ್ದಾರೆ. ಶಾಲಾ ಕೊಠಡಿಯೊಂದರಲ್ಲಿ ಕನ್ನಡ ಭಾಷಾ ಪ್ರಯೋಗಾಲಯ ನಿರ್ಮಿಸಿದ್ದಾರೆ. ಇಲ್ಲಿ ಕನ್ನಡದ ಮೊದಲ ಪದ ‘ಇಸಿಲ್’ನಿಂದ ಹಳೆ ಸಾಹಿತ್ಯ, ಕತೆ, ಚಿತ್ರಗಳು ಹಾಗೂ ಈಗಿನ ಸಾಹಿತಿಗಳವರೆಗೆ ಚಿತ್ರ ಸಹಿತ ಮಾಹಿತಿಯಿದೆ. ಮಕ್ಕಳು ತಾವೇ ಸ್ಪರ್ಶಿಸಿ ಕಲಿಯಲು, ಜೋಡಣೆ ಮಾಡಿ ಕಲಿಯಲು ಚಟುವಟಿಕಾಧಾರಿತ ಕಲಿಕೆಗೆ ಅವಕಾಶ ನೀಡಿದ್ದಾರೆ. ಪ್ರತಿದಿನ ಮಧ್ಯಾಹ್ನ 3ರಿಂದ ಸಂಜೆ 4ರವರೆಗೆ ಮಕ್ಕಳು ಇಲ್ಲಿನ ಚಟುವಟಿಕೆಗಳನ್ನು ಮಾಡುವ ಮೂಲಕ ಕಲಿಯುತ್ತಾರೆ. ಹೀಗಾಗಿ ಗೈರು ಹಾಜರಾತಿ ಕಡಿಮೆಯಾಗಿದೆ ಎನ್ನುವುದು ಶಿಕ್ಷರ ಅಭಿಪ್ರಾಯವಾಗಿದೆ.
ಮಕ್ಕಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣದ ಜತೆ ಕ್ರಿಯಾತ್ಮಕ ಯೋಜನೆಗಳನ್ನು ತಂದು ದಾಖಲಾತಿಯನ್ನು ಹೆಚ್ಚಿಸಿ ಮಾದರಿಯಾಗಿದ್ದಾರೆಎ. ಎನ್. ಕಾಂಬೋಜಿ ಬಿಇಒ ರೋಣ
ಸರ್ಕಾರಿ ಶಾಲೆಗಳು ಗ್ರಾಮೀಣ ಭಾಗದ ಬಡವರ ರೈತರ ಹಾಗೂ ಕೂಲಿ ಕಾರ್ಮಿಕ ಮಕ್ಕಳ ಜೀವನಾಡಿಯಾಗಿವೆ. ಆದ್ದರಿಂದ ಅವುಗಳನ್ನು ಉಳಿಸಲು ನಮ್ಮಿಂದಾಗುವ ಪ್ರಯತ್ನ ಮಾಡುತ್ತಿದ್ದೇವೆವಿಜಯಕುಮಾರ್ ಡಿ.ಆರ್. ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.