ADVERTISEMENT

ನರಗುಂದ | ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತತ್ವಾರ

ನರಗುಂದ ತಾಲ್ಲೂಕಿಗೆ ಮಲಪ್ರಭಾ ಡಿಬಿಒಟಿಯೇ ಆಧಾರ: ಪರ್ಯಾಯ ವ್ಯವಸ್ಥೆಗೂ ಆಗ್ರಹ

ಬಸವರಾಜ ಹಲಕುರ್ಕಿ
Published 4 ಮೇ 2025, 5:01 IST
Last Updated 4 ಮೇ 2025, 5:01 IST
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಒಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಒಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸವದತ್ತಿ ಬಳಿಯ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯದಿಂದ ನೇರವಾಗಿ ಪೈಪ್‌ಲೈನ್ ಮೂಲಕ ಡಿಬಿಒಟಿ ನೀರನ್ನು 24/7 ಸರಬರಾಜು ಮಾಡಲಾಗುತ್ತದೆ. ಪಟ್ಟಣಕ್ಕೂ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯಲಿಕ್ಕೆ ಇದೇ ನೀರು ಆಧಾರವಾಗಿದೆ.

ಆದರೆ, ತಾಲ್ಲೂಕಿನ ಕೆಲವೆಡೆಗೆ ಸಮರ್ಪಕ ಪೈಪ್‌ಲೈನ್ ಹಾಗೂ ನೀರಿನ ಸಂಗ್ರಹಕ್ಕೆ ಗ್ರಾಮಗಳಿಗೆ ಅಗತ್ಯವಿರುವ ಓವರ್ ಹೆಡ್ ಟ್ಯಾಂಕ್‌ಗಳು ಇಲ್ಲದಿರುವುದು, ನೀರು ಪೂರೈಕೆಯಲ್ಲಿನ ಅಸಮರ್ಪಕ ನಿರ್ವಹಣೆ, ವಿದ್ಯುತ್ ಸಮಸ್ಯೆಯಿಂದ ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರಿಗಾಗಿ ತತ್ವಾರ ಉಂಟಾಗಿದೆ.

ಐದು ವರ್ಷಗಳಿಂದ ಡಿಬಿಒಟಿ ನೀರಿನ ಸೌಲಭ್ಯ ಬಂದಾಗಿನಿಂದ ಮೊದಲು ಉಪಯೋಗಿಸುತ್ತಿದ್ದ ಕುಡಿಯುವ ನೀರಿನ ಕೆರೆಗಳು, ಕೊಳವೆಬಾವಿಗಳು, ಹೊಳೆ ಸಮೀಪ ಇರುವ ಕೈ ಬೋರ್‌ಗಳು ಉಪಯೋಗಕ್ಕೆ ಬಾರದಂತಾಗಿವೆ. ಬೇಸಿಗೆಯಲ್ಲಿ ಮಾತ್ರ ಇವುಗಳ ನಿರ್ವಹಣೆಗೆ ಪುರಸಭೆ, ಗ್ರಾಮ ಪಂಚಾಯಿತಿಗಳು ಮುಂದಾಗುತ್ತವೆ. ಇದರಿಂದ ಬೇಸಿಗೆಯಲ್ಲಿ ಜಲಬವಣೆ ಸಾಮಾನ್ಯವಾಗಿದೆ.

ADVERTISEMENT

ತಾಲ್ಲೂಕಿನಲ್ಲಿ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 33 ಗ್ರಾಮಗಳಿದ್ದು ಪ್ರತಿಯೊಂದು ಗ್ರಾಮವೂ ಬೇಸಿಗೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿವೆ. ಎಲ್ಲರೂ ಡಿಬಿಒಟಿ ನೀರನ್ನೇ ಆಶ್ರಯಿಸಿರುವುದರಿಂದ ಮೊದಲಿದ್ದ ಮೂಲ ನೀರಿನ ವ್ಯವಸ್ಥೆ ಹಾಳಾಗಿದೆ. ಆದರೆ, ಡಿಬಿಒಟಿ ನೀರು ಬರದೇ ಹೋದರೆ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಇದಕ್ಕೆ ಗ್ರಾಮ ಪಂಚಾಯಿತಿಗಳು ಪೂರ್ವಯೋಜಿತ ಯೋಜನೆ ರೂಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹಿರೇಕೊಪ್ಪ ಗ್ರಾಮ ಪಂಚಾಯಿತಿ ಹಿರೇಕೊಪ್ಪ, ಅರಿಷಿನಗೋಡಿ, ಕುರಗೋವಿನಕೊಪ್ಪ ಗ್ರಾಮಗಳನ್ನು ಹೊಂದಿದೆ. ಇದರಲ್ಲಿ ಅರಿಷಿನಗೋಡಿ, ಕುರಗೋವಿನಕೊಪ್ಪ ಅಷ್ಟೇನೂ ನೀರಿನ ಸಮಸ್ಯೆ ಎದುರಿಸುತ್ತಿಲ್ಲ. ಆದರೆ ಹಿರೇಕೊಪ್ಪ ಗ್ರಾಮವು ಸಪ್ಪೇ ನೀರಿನೊಂದಿಗೆ ನಿತ್ಯ ಜೀವನ ನಡೆಸಬೇಕಿದೆ. ಇಲ್ಲಿ ಡಿಬಿಒಟಿ ನೀರು ಸರಬರಾಜು ಆಗುವ ಪೈಪ್‌ಲೈನ್ ಇಲ್ಲ.

ಇಲ್ಲಿ ಕುಡಿಯಲು ಮಾತ್ರ ಓವರ್ ಹೆಡ್ ಟ್ಯಾಂಕ್ ಬಳಿ ಡಿಬಿಒಟಿ ಲೈನ್‌ನ ಒಂದೇ ನಳ ಇದೆ. ಅದೇ ನಳವೇ ಕುಡಿಯುವ ನೀರಿಗೆ ಆಧಾರ. ಅದು ನಿತ್ಯ ಮಧ್ಯಾಹ್ನ 12ರ ನಂತರ ರಾತ್ರಿ 10ರವರೆಗೆ ಮಾತ್ರ ಇರುತ್ತದೆ. ಆ ಸಮಯದಲ್ಲಿ ಮಾತ್ರ ಎಲ್ಲರೂ ಬಂದು ಕುಡಿಯುವ ನೀರು ಸಂಗ್ರಹ ಮಾಡಬೇಕಾದ ಅನಿವಾರ್ಯತೆ ಇದೆ. ಸಮೀಪದ ರಾಮದುರ್ಗ ತಾಲ್ಲೂಕಿನ ಚಿಕ್ಕೊಪ್ಪ ಗ್ರಾಮದ ಜನರು ಇದೇ ನಳಕ್ಕೆ ಬಂದು ನೀರು ತೆಗೆದುಕೊಂಡು ಹೋಗುವುದು ಕಾಣುತ್ತೇವೆ. ಆದ್ದರಿಂದ ಹಿರೇಕೊಪ್ಪದಲ್ಲಿ ಡಿಬಿಓಟಿ ಲೈನ್ ಎಲ್ಲ ನಳಗಳಿಗೆ ಅಳವಡಿಸಿ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಕೊಣ್ಣೂರ ಗ್ರಾಮವು ತಾಲ್ಲೂಕಿನ ದೊಡ್ಡ ಗ್ರಾಮವಾಗಿ ಹೋಬಳಿ ಕೇಂದ್ರವಾಗಿದೆ. ಇಲ್ಲಿ ಕುಡಿಯುವ ನೀರಿಗೆ ಶುದ್ಧೀಕರಣ ಘಟಕಗಳೇ ಆಧಾರ. ಡಿಬಿಒಟಿ ಲೈನ್ ಇದ್ದರೂ ಆ ನೀರು ಇಡೀ ಊರಿಗೆ ಸಾಕಾಗುತ್ತಿಲ್ಲ. ಶಿರೋಳ ಗ್ರಾಮದಲ್ಲಿ ಇದೇರೀತಿಯ ಸಮಸ್ಯೆ ಇದೆ. ಕೆರೆ ನೀರು ಖಾಲಿಯಾದರೆ ನೀರಿನ ಸಮಸ್ಯೆ ಉಲ್ಬಣ ನಿಶ್ಚಿತ ಎಂದು ಗ್ರಾಮಸ್ಥರು ಹೇಳುತ್ತಾರೆ.

ಆದ್ದರಿಂದ ಮಲಪ್ರಭಾ ಜಲಾಶಯದಿಂದ ಕಾಲುವೆ ಮೂಲಕ ಕೆರೆ ನೀರು ಹರಿಸಬೇಕು. ಇದರಿಂದ ಶಿರೋಳ, ಕಪಲಿ, ಕಲ್ಲಾಪುರ ಗ್ರಾಮಗಳು ನೀರಿನ ಸಮಸ್ಯೆಯಿಂದ ಪಾರಾಗಬಹುದು. ಇಲ್ಲವಾದರೆ ನೀರಿಗೆ ತತ್ವಾರ ನಿಶ್ಚಿತ.

ಸುರಕೋಡ ಗ್ರಾಮವು ಸ್ಥಳಾಂತರಗೊಂಡಿದ್ದು ನವಗ್ರಾಮಕ್ಕೆ ಮಾತ್ರ ಡಿಬಿಒಟಿ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಹಳೆ ಊರಿನ ಜನ ಕುಡಿಯುವ ನೀರು ತೆಗೆದುಕೊಂಡು ಹೋಗಲು ನವಗ್ರಾಮಕ್ಕೆ ಬರಬೇಕು. ಆದ್ದರಿಂದ ತಾತ್ಕಾಲಿಕವಾಗಿ ಹಳೆ ಊರಲ್ಲಿ ಕುಡಿಯುವ ನೀರಿಗೆ ವ್ಯವಸ್ಥೆ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತುಂಬುತ್ತಿರುವ ಗ್ರಾಮಸ್ಥರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತುಂಬುತ್ತಿರುವ ನಾಗರಿಕರು
ನರಗುಂದ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಇಡಿ ಊರಿಗೆ ಪೂರೈಕೆಯಾಗುವ ಒಂದೇ ಡಿಬಿಓಟಿ ನಳದ ನೀರು ತರುತ್ತಿರುವ ಗ್ರಾಮಸ್ಥರು
ಮಲಪ್ರಭಾ ಡಿಬಿಒಟಿ ಲೈನ್ ಗ್ರಾಮಕ್ಕೆ ಇದ್ದರೂ ಇಲ್ಲದಂತಾಗಿದೆ. ಇಡೀ ಗ್ರಾಮಕ್ಕೆ ಒಂದೇ ಡಿಬಿಒಟಿ ನಳ ಇದೆ. ಆದ್ದರಿಂದ ನಳಗಳಿಗೆ ಎರಡು ದಿನಕ್ಕೊಮ್ಮೆಯಾದರೂ ಡಿಬಿಒಟಿ ನೀರು ಪೂರೈಕೆಯಾಗಬೇಕು.
ಎಚ್. ಟಿ.ಲಿಂಗದಾಳ ಹಿರೇಕೊಪ್ಪ
ಶಿರೋಳದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕೆರೆ ಖಾಲಿಯಾಗುತ್ತಿದೆ. ಮಲಪ್ರಭಾ ನೀರನ್ನು ಹರಿಸಿದರೆ ನೀರಿನ ಸಮಸ್ಯೆ ಉಲ್ಬಣಿಸದು
ಸಂಕನಗೌಡರ ಪಿಡಿಒ ಶಿರೋಳ
ಗ್ರಾಮ ಪಂಚಾಯಿತಿ ಡಿಬಿಒಟಿ ನೀರು ಅವಲಂಬಿಸದೇ ಮೊದಲಿನಂತೆ ಕೆರೆ ಕೊಳವೆಬಾವಿ ನೀರು ನಿರ್ವಹಣೆ ಮಾಡಿಕೊಳ್ಳಬೇಕು. ಆಗ ನೀರಿನ ಸಮಸ್ಯೆ ಉಂಟಾಗದು. ಡಿಬಿಒಟಿ ನಿಯಮಾನುಸಾರ ನೀರು ಪೂರೈಕೆ ಆಗುತ್ತದೆ. ನೀರು ಮಿತವಾಗಿ ಬಳಸಬೇಕು
–ಮಂಜುನಾಥ್ ಗಣಿ ಪಿಡಿಒ ಕೊಣ್ಣೂರ

ಹೆಸರಿಗಷ್ಟೇ 24/7 ನರಗುಂದ ತಾಲ್ಲೂಕಿನ 33 ಹಳ್ಳಿಗಳಿಗೆ ನೂರಾರು ಕೋಟಿ ವೆಚ್ಚದಲ್ಲಿ ನವಿಲುತೀರ್ಥ ಜಲಾಶಯದಿಂದ 24/7 ಮಲಪ್ರಭಾ ನೀರು ಒದಗಿಸುವ ಯೋಜನೆ ಜಾರಿಯಾಗಿ ಐದು ವರ್ಷ ಸಮೀಪಿಸಿದೆ. ಆದರೆ ನಿರಂತರ ನೀರು ಎಂಬುದು ಇಂದಿಗೂ ಕನಸಾಗಿದೆ. ನೀರು ಗ್ರಾಮಗಳಿಗೂ ಬಂದರೂ ಇಲ್ಲಿನ ಪೈಪ್‌ಲೈನ್ ಓವರ್ ಹೆಡ್ ಟ್ಯಾಂಕ್ ಕೊರತೆ ಅಸಮರ್ಪಕ ನಿರ್ವಹಣೆಯಿಂದ ಕನಿಷ್ಠ 3 ದಿನಗಳಿಗೊಮ್ಮೆ ಗರಿಷ್ಠ 15-20 ದಿನಗಳಿಗೊಮ್ಮೆ ಪೂರೈಕೆಯಾಗುತ್ತಿರುವುದು ಜನರಿಗೆ ಬೇಸರ ತರಿಸಿದೆ. ಆದ್ದರಿಂದ 24/7 ನೀರು ಹೆಸರಿಗೆ ಎಂಬಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.