ADVERTISEMENT

ಸಹೃದಯಿಗಳಿಗೆ ಸಾಥಿಯಾದ ಪೊಲೀಸ್‌

ಎಂಟು ದಿನಗಳ ಶಿಶು ರಕ್ಷಿಸಿ ಮಾನವೀಯತೆ ಮೆರೆದ ವಡ್ಡಿಗೇರಿ ಕುಟುಂಬ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 3:04 IST
Last Updated 5 ಆಗಸ್ಟ್ 2021, 3:04 IST
ನರಗುಂದದಲ್ಲಿ ಮಂಗಳವಾರ ರಾತ್ರಿ ನರಗುಂದದಲ್ಲಿ 8 ದಿನದ ಮಗುವನ್ನು ರಕ್ಷಿಸಿದ ಮಂಜುನಾಥ್, ವಾಣಿ ವಡ್ಡಿಗೇರಿ ದಂಪತಿ ಹಾಗೂ ಎಎಸ್ಐ ವಿ.ಜಿ.ಪವಾರ
ನರಗುಂದದಲ್ಲಿ ಮಂಗಳವಾರ ರಾತ್ರಿ ನರಗುಂದದಲ್ಲಿ 8 ದಿನದ ಮಗುವನ್ನು ರಕ್ಷಿಸಿದ ಮಂಜುನಾಥ್, ವಾಣಿ ವಡ್ಡಿಗೇರಿ ದಂಪತಿ ಹಾಗೂ ಎಎಸ್ಐ ವಿ.ಜಿ.ಪವಾರ   

ನರಗುಂದ: ಪಟ್ಟಣದ ಕಸಬಾ ಚಾವಡಿಯಲ್ಲಿ ಮಂಗಳವಾರ ರಾತ್ರಿ ಪಾನಮತ್ತ ದಂಪತಿ ಬಿಸಾಡಿ ಹೋಗಿದ್ದ ಎಂಟು ದಿನಗಳ ಹೆಣ್ಣು ಶಿಶುವನ್ನು ಪಟ್ಟಣದ ಮಂಜುನಾಥ್ ಹಾಗೂ ವೀಣಾ ವಡ್ಡಿಗೇರಿ ದಂಪತಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಇವರ ಜತೆಗೆ ಮಗುವಿನ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡುವ ಮೂಲಕ ಎಎಸ್ಐ ವಿ.ಜಿ.ಪವಾರ ಸಾಥ್ ನೀಡಿ ಕರ್ತವ್ಯನಿಷ್ಠೆ ಮೆರೆದಿದ್ದಾರೆ.

ಮಂಗಳವಾರ ರಾತ್ರಿ ಹಾನಗಲ್ ಮೂಲದ ಚಿಕ್ಕುಂಬಿಯಲ್ಲಿ ವಾಸವಾಗಿದ್ದ ಕಿಳ್ಳೀಕ್ಯಾತರ ಜನಾಂಗದ ಸುರೇಶ, ಗೀತಾ ದಂಪತಿ ಸಂಪೂರ್ಣ ಪಾನಮತ್ತರಾಗಿ 8 ದಿನದ ಹೆಣ್ಣುಶಿಶುವಿನೊಂದಿಗೆ ಪಟ್ಟಣದ ಕಸಬಾ ಚಾವಡಿಯಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಇಬ್ಬರೂ ತಮಗರಿವಿಲ್ಲದ ರೀತಿಯಲ್ಲಿ ವರ್ತಿಸಿ ಮಗು ಒಂದು ಕಡೆ, ತಾವು ಒಂದು ಕಡೆ ಆಗಿದ್ದಾರೆ.

ರಾತ್ರಿ ಊಟ ಮಾಡಿ ವಾಕಿಂಗ್ ಮಾಡುತ್ತಿದ್ದ ಮಂಜುನಾಥ ವಡ್ಡಿಗೇರಿ ಅವರಿಗೆ ಮಗು ಆಳುವ ಧ್ವನಿ ಕೇಳಿದೆ. ಇದರಿಂದ ಸಂಶಯಗೊಂಡ ಮಂಜುನಾಥ ಚಾವಡಿಯೊಳಗೆ ಹೋದಾಗ ರಕ್ತಸಿಕ್ತವಾದ ಶಿಶು ದಿಕ್ಕಿಲ್ಲದೇ ಬಿದ್ದಿರುವುದು ಕಾಣಿಸಿದೆ. ಜತೆಗೆ ತಾಯಿಯೂ ಪಾನಮತ್ತರಾಗಿರುವುದು ಕಂಡು ಬಂದಿದೆ. ಇದರಿಂದ ಮನನೊಂದ ಮಂಜುನಾಥ್ ಮನೆಗೆ ತೆಗೆದುಕೊಂಡು ಹೋಗಿ ಪತ್ನಿ ವಾಣಿಗೆ ಕಾಳಜಿ ಮಾಡುವಂತೆ ತಿಳಿಸಿದ್ದಾರೆ. ಆಗ ವಾಣಿ ಅವರು ಮಗುವಿಗೆ ಸ್ನಾನ ಮಾಡಿಸಿ, ಆಕಳ ಹಾಲು ಕುಡಿಸಿ ಮಾನವೀಯತೆ ಮೆರೆದಿದ್ದಾರೆ.

ADVERTISEMENT

ಮುಂದೆ ಈ ಮಗುವಿನ ರಕ್ಷಣೆ ಹಾಗೂ ಪಾನಮತ್ತ ದಂಪತಿ ಕುರಿತು ಮಂಜುನಾಥ್ ಎಎಸ್‌ಐ ವಿ.ಜಿ.ಪವಾರ ಅವರಿಗೆ ಫೋನ್‌ನಲ್ಲಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅವರು ಮಗುವಿನ ರಕ್ಷಣೆಗೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡುವುದಾಗಿ ಧೈರ್ಯ ತುಂಬಿ ತೆರಳಿದ್ದಾರೆ. ಇಡೀ ರಾತ್ರಿ ಮಗುವನ್ನು ತನ್ನ ಸ್ವಂತ ಮಗುವಿನಂತೆ ಆರೈಕೆ ಮಾಡಿ ಬುಧವಾರ ಆ ಮಗುವಿನ ರಕ್ಷಣೆಗಾಗಿ ಗದಗನ ಶಿಶು ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರದವರೆಗೂ ಬಂದು ತಲುಪಿಸಿ ಮಾದರಿಯಾಗಿದ್ದಾರೆ.

ಪಾನಮತ್ತ ದಂಪತಿ ಪೊಲೀಸರು ರಾತ್ರಿ ಬಂದ ವಿಷಯ ತಿಳಿದು ತಾವೇ ಬುಧವಾರ ಬೆಳಿಗ್ಗೆ ನರಗುಂದ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಪೊಲೀಸರು ವಿಚಾರಿಸಲಾಗಿ ದಂಪತಿ ಹೌದು ಎನ್ನುವ ಬಗ್ಗೆ ನಿಖರ ದಾಖಲೆಗಳು ದೊರೆತಿಲ್ಲ. ಆದರೆ ತಾಯಿ ತನ್ನದೇ ಮಗುವೆಂದು ಹೇಳಿದ್ದಾಳೆ. ಆದರೆ ಶಿಶುವಿನ ರಕ್ಷಣೆ ದೃಷ್ಟಿಯಿಂದ ಪೊಲೀಸರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ರೂಪಾ ಗಂಧದ ಅವರನ್ನು ಸಂಪರ್ಕಿಸಿ ಮಗುವನ್ನು ರಕ್ಷಣೆಗಾಗಿ ತಾಯಿ ಸಮೇತ ಒಪ್ಪಿಸಿದ್ದಾರೆ.

ಮಾಹಿತಿ ಸಂಗ್ರಹಿಸಿ, ಮುಂದಿನ ನಿರ್ಧಾರ

ಮಗು ತನ್ನದೇ ಎಂದು ತಾಯಿ ಹೇಳುತ್ತಿದ್ದಾಳೆ. ಆದರೆ ಮಗುವು ದೊರೆತ ಸ್ಥಿತಿ ಬಗ್ಗೆ ವಿಚಾರಣೆ ನಡೆಯಬೇಕಿದೆ. ಜತೆಗೆ ಮಗುವನ್ನು ಮರಳಿ ತಾಯಿಗೆ ಕೊಟ್ಟರೆ ರಕ್ಷಣೆ ಆಗುವುದೇ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ನರಗುಂದದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ರೂಪಾ ಗಂಧದ ತಿಳಿಸಿದ್ದಾರೆ.

ದಂಪತಿ ಪಾನಮತ್ತರಾಗಿದ್ದಾಗ ಮಗುವನ್ನು ರಕ್ಷಿಸಲಾಗಿದೆ. ಎಲ್ಲ ವಿವರ ಸಂಗ್ರಹಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗಿದೆ
ವಿ.ಜಿ.ಪವಾರ, ಎಎಸ್ಐ, ನರಗುಂದ ಠಾಣೆ

ಮಗುವನ್ನು ರಕ್ಷಿಸಿದ ತೃಪ್ತಿ ಇದೆ. ನಮಗೆ ಮೂವರು ಪುತ್ರಿಯರಿದ್ದಾರೆ. ಆದರೂ ನಮಗ ಇದನ್ನು ಕೊಡು ಅಂತ ಕೇಳಿದ್ದೇವೆ. ಕೊಟ್ರ ಲಕ್ಷ್ಮಿ ಬಂದಾಗತು ಎಂದು ಪೋಷಣೆ ಮಾಡಿ ಬೆಳೆಸುತ್ತೇವೆ
ವಾಣಿ ವಡ್ಡಿಗೇರಿ
ನರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.