ಪ್ರಾತಿನಿಧಿಕ ಚಿತ್ರ
ಗದಗ: ‘ಅಲೆಮಾರಿ ಸಮುದಾಯಕ್ಕೆ ಶೇ 3ರಷ್ಟು ಮೀಸಲಾತಿಗೆ ಆಗ್ರಹಿಸಿ ಆ.30ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಪರಿಶಿಷ್ಟ ಜಾತಿ 59 ಜಾತಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದುರಗೇಶ ವಿಭೂತಿ ತಿಳಿಸಿದರು.
‘ಪರಿಶಿಷ್ಟ ಜಾತಿಯಲ್ಲಿರುವ ಸಣ್ಣ ಸಮುದಾಯಗಳಿಗೆ ಅನುಕೂಲ ಕಲ್ಪಿಸಲು ಸುಪ್ರೀಂ ಕೋರ್ಟ್‍ನ ನಿರ್ದೇಶನದಂತೆ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಸಮಿತಿ ರಚಿಸಿತ್ತು. ಸಮಿತಿಯು ಸರ್ಕಾರಕ್ಕೆ ನೀಡಿದ್ದ ವರದಿ ಭಾಗಶಃ ವ್ಶೆಜ್ಞಾನಿಕವಾಗಿದ್ದರೂ ಅದರ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ಎಡವಿದೆ. ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯ ಸಮುದಾಯಗಳ ಒತ್ತಡಕ್ಕೆ ಮಣಿದಿದೆ. ಮತಬ್ಯಾಂಕ್‍ಗಾಗಿ ಅಲೆಮಾರಿ ಸಮುದಾಯಕ್ಕೆ ಕಡಿಮೆ ಪ್ರಮಾಣದ ಮೀಸಲಾತಿ ನಿಗದಿ ಮಾಡಿ ಅನ್ಯಾಯ ಎಸಗಿದೆ’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಅಲೆಮಾರಿ ಸಮುದಾಯಗಳ ಮುಖಂಡ ಹನುಮಂತಪ್ಪ ಸಂಜೀವಸ್ವಾಮಿ ಮಾತನಾಡಿ, ‘ಸುಪ್ರೀಂಕೋರ್ಟ್ ನಿರ್ದೇಶನದಂತೆ ಜಾರಿಯಾದ ಒಳಮೀಸಲಾತಿಯು ಅಲೆಮಾರಿ ಸಮುದಾಯಕ್ಕೆ ಅನ್ಯಾಯ ಮಾಡಿದೆ’ ಎಂದು ಆರೋಪ ಮಾಡಿದರು.
‘ಈ ಮೊದಲು 49 ಜಾತಿಗಳು ಅಲೆಮಾರಿ ಸಮುದಾಯಕ್ಕೆ ಸೇರಿದ್ದವು. ಆದರೆ, ಅದಕ್ಕೆ ಮತ್ತೇ 10 ಜಾತಿಗಳನ್ನು ಸೇರಿಸಿ 59 ಮಾಡಿದ್ದಾರೆ. ಆ ವರ್ಗಕ್ಕೆ ಕೇವಲ ಶೇ 1ರಷ್ಟು ಮೀಸಲಾತಿ ನಿಗದಿಪಡಿಸಿದೆ. ಮೊದಲೇ ಅಲೆಮಾರಿ ಸಮುದಾಯಕ್ಕೆ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಇಲ್ಲ. ಈ ಅಲೆಮಾರಿ ಸಮುದಾಯದಲ್ಲಿ ಶೇ 40ರಷ್ಟು ಜನ ಪದವಿ ಶಿಕ್ಷಣವನ್ನೂ ಪಡೆದಿಲ್ಲ. ಹೀಗಿದ್ದಾಗ ನೌಕರಿ ಹೇಗೆ ಸಾಧ್ಯ’ ಎಂದು ಕಿಡಿಕಾರಿದರು.
‘ಇದೀಗ ಸರ್ಕಾರ ನಿಗದಿಪಡಿಸಿದಂತೆ ಶೇ 1 ಮೀಸಲಾತಿಯಲ್ಲಿ 59 ಜಾತಿಗಳಿದ್ದು, 100 ಹುದ್ದೆ ತುಂಬಿದಾಗ ಒಂದು ಹುದ್ದೆ ಸಿಗಲಿದೆ. ಉಳಿದ 58 ಜಾತಿಗಳವರ ಕತೆ ಏನು’ ಎಂದು ಪ್ರಶ್ನಿಸಿದರು.
‘ಹೀಗಾಗಿ ಅಲೆಮಾರಿ ಸಮುದಾಯಗಳವರು ಪರಿಶಿಷ್ಟ ಜಾತಿಯಲ್ಲಿನ ಬಲಾಢ್ಯ ಜಾತಿಗಳವರಂತೆ ಸಮಾಜದ ಮುಖ್ಯವಾಹಿನಿಗೆ ಬರಲು 15 ವರ್ಷಗಳ ಕಾಲ ಕನಿಷ್ಟ ಶೇ 3ರಷ್ಟು ಮೀಸಲು ನೀಡಬೇಕು’ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವು ಹೊಸದಾಗಿ ಸೇರಿಸಿರುವ 10 ಜಾತಿಗಳು ಅಲೆಮಾರಿ ಜಾತಿಗಳೇ ಅಲ್ಲ. ಅಷ್ಟೇ ಅಲ್ಲ, ಲಂಬಾಣಿ, ಕೊರಮ, ಕೊರಚ, ಭೋವಿ ಅವರೆಲ್ಲ ಸ್ಪೃಶ್ಯರು. ಅವರ ಜತೆ ಸಣ್ಣ ಸಮುದಾಯಗಳ ಸ್ಪರ್ಧೆ ಅಸಾಧ್ಯ. ಈ ನಿಟ್ಟಿನಲ್ಲಿ ಅವರನ್ನು ಬೇರ್ಪಡಿಸಿ, ನಮಗೆ ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ತಿಮ್ಮಣ್ಣ ಚಿಮ್ಮನಕಟ್ಟಿ, ಲಕ್ಷ್ಮಣ ಕಟ್ನಳ್ಳಿ, ಹುಸೇನಪ್ಪ ಬೆಟದೂರ, ಬಾಲರಾಜ, ಅಶೋಕ ಡೊಕ್ಕಣ್ಣವರ, ಲಕ್ಷ್ಮಣ ವಿಭೂತಿ, ರಾಜೇಶ ಗಡ್ಡದವರ, ಯಲ್ಲಪ್ಪ ಹಂದಿಜೋಗಿ, ಹನಮಂತಪ್ಪ ಕಟ್ಟಣ್ಣವರ, ರಮೇಶ ಗಂಗಾಪುತ್ರ, ಹನಮಂತಪ್ಪ ಆಸಂಗಿ, ನರಸಿಂಹಮೂರ್ತಿ ಬೇಲೂರ, ಯಲ್ಲಪ್ಪ ಒಚಿಟೆತ್ತಿನ, ಹುಸೇನಪ್ಪ ರಾಹುಲ್, ಒಕ್ಕೂಟದ ಖಜಾಂಚಿ ಡಾ.ದೇವಪ್ಪ ಶೇಷಗಿರಿ, ಲಕ್ಷ್ಮಣ ಡೊಕ್ಕಣ್ಣವರ, ಯಲ್ಲಪ್ಪ ಗೊಲ್ಲರ, ಅಶೋಕ ಗಡ್ಡದವರ, ಜಂಬಣ್ಣ ದುರಗಮುರಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.