
ಲಕ್ಷ್ಮೇಶ್ವರ: ಸಮೀಪದ ಮಂಜಲಾಪುರ ಗ್ರಾಮದಲ್ಲಿ ವಾಸವಾಗಿರುವ ಅಲೆಮಾರಿ ಕುಟುಂಬಗಳಿಗೆ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ದಿ ನಿಗಮದ ಯೋಜನೆಯಡಿ ಶಾಸಕ ಡಾ.ಚಂದ್ರು ಲಮಾಣಿ ಅವರು ಶನಿವಾರ ತಾಡಪತ್ರಿ ವಿತರಿಸಿದರು.
‘ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಿಗೆ ತಲುಪುತಿಲ್ಲ. ಅಲೆಮಾರಿಗಳು ಇದುವರೆಗೂ ಸ್ವಂತ ನೆಲೆ ಇಲ್ಲದೇ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಗುಡಿಸಲುಗಳಲ್ಲೇ ಜೀವನ ನಡೆಸುತ್ತಿದ್ದಾರೆ. ಬಡತನದಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದರು.
ಸತತ ಮಳೆಯಿಂದಾಗಿ ಸೋರುವ ಗುಡಿಸಲಿನಲ್ಲಿ ವಾಸಿಸುವ ತಾಲ್ಲೂಕಿನ ಶಿರಹಟ್ಟಿ, ಲಕ್ಷ್ಮೇಶ್ವರ, ಮಂಜಲಾಪುರ, ಸೂರಣಗಿ, ಹೆಬ್ಬಾಳ, ಇಟಗಿ, ಬಾಲೇಹೊಸೂರ ಭಾಗದ 180ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳಿಗೆ ತಾಡಪತ್ರಿ ವಿತರಿಸಲಾಗಿದೆ. ಗುಡಿಸಲುಮುಕ್ತ ರಾಜ್ಯದ ಕನಸು ನನಸಾಗಬೇಕಾದಲ್ಲಿ ಮೊದಲು ಅಲೆಮಾರಿ ಜನಾಂಗಕ್ಕೆ ಶಾಶ್ವತ ಸೂರು, ಶಿಕ್ಷಣ, ಉದ್ಯೋಗ ಕಲ್ಪಿಸಿ ಅಲೆಮಾರಿ ಪದವನ್ನು ಕೊನೆಗಾಣಿಸಬೇಕು. ಮುಂಬರುವ ದಿನಗಳಲ್ಲಿ ಶಿರಹಟ್ಟಿ ಮತಕ್ಷೇತ್ರದಲ್ಲಿನ ಅಲೆಮಾರಿ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಲಾಗುವುದು’ ಎಂದು ತಿಳಿಸಿದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗೋಪಾಲ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.