ADVERTISEMENT

ಗದಗ: ಕಾಲಮಿತಿಯೊಳಗೆ ಅರ್ಜಿ ವಿಲೇವಾರಿಗೆ ಸೂಚನೆ

ಸಕಾಲ ಯೋಜನೆಯ ಅರಿವು ಮೂಡಿಸಲು ಸಪ್ತಾಹ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 16:56 IST
Last Updated 26 ನವೆಂಬರ್ 2020, 16:56 IST
ಸಕಾಲ ಸಪ್ತಾಹ ಕುರಿತು ನಡೆದ ವಿಡಿಯೊ ಸಂವಾದದಲ್ಲಿ ಎಡಿಸಿ ಸತೀಶ್‌ ಕುಮಾರ್‌ ಎಂ. ಭಾಗವಹಿಸಿದ್ದರು
ಸಕಾಲ ಸಪ್ತಾಹ ಕುರಿತು ನಡೆದ ವಿಡಿಯೊ ಸಂವಾದದಲ್ಲಿ ಎಡಿಸಿ ಸತೀಶ್‌ ಕುಮಾರ್‌ ಎಂ. ಭಾಗವಹಿಸಿದ್ದರು   

ಗದಗ: ‘ಸಕಾಲ ಯೋಜನೆ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಹಾಗೂ ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದಿರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಪ್ತಾಹ ಆಚರಿಸಲಾಗುತ್ತಿದೆ’ ಎಂದು ಸಕಾಲ ಯೋಜನೆಯ ಹೆಚ್ಚುವರಿ ನಿರ್ದೇಶಕಿ ಡಾ. ಬಿ.ಆರ್.ಮಮತಾ ತಿಳಿಸಿದರು.

ಸಕಾಲ ಸಪ್ತಾಹ ಕುರಿತು ಎಲ್ಲ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ನಡೆದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ನಗರಾಭಿವೃದ್ಧಿ, ಕಂದಾಯ, ಸಾರಿಗೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಸಾರಿಗೆ ಇಲಾಖೆಯವರು ನ.30ರಿಂದ ಡಿ.5ರವರೆಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಡಿ.7ರಿಂದ 11ರವರೆಗೆ, ಉಳಿದ ಎಲ್ಲ ಇಲಾಖೆಗಳು ಡಿ.14ರಿಂದ 19ರವರೆಗೆ ಸಕಾಲ ಸಪ್ತಾಹ ಆಚರಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು. ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಸಕಾಲ ತಂಡ ಕಚೇರಿಗೆ ಭೇಟಿ ನೀಡಿ, ತಪಾಸಣೆ ನಡೆಸುವುದು. ಸಾರ್ವಜನಿಕರ ಅಭಿಪ್ರಾಯ ಕ್ರೋಡೀಕರಿಸಲು ಹೆಲ್ಪ್ ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸೇರಿದಂತೆ ಸಕಾಲ ಯೋಜನೆ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸರ್ಕಾರದ ಸೇವೆಗಳನ್ನು ವಿಳಂಬವಿಲ್ಲದೇ, ಕಾಲಮಿತಿಯೊಳಗೆ ನೀಡುವ ಮಹಾತ್ವಾಕಾಂಕ್ಷಿಯೊಂದಿಗೆ ಕರ್ನಾಟಕ ನಾಗರಿಕರ ಸೇವೆಗಳ ಖಾತರಿ ಅಧಿನಿಯಮವನ್ನು 2012ರಲ್ಲಿ ಜಾರಿಗೆ ತರಲಾಯಿತು. ಸಕಾಲ ಯೋಜನೆಯಡಿ ಒಟ್ಟು 27 ಇಲಾಖೆ, ಸಂಸ್ಥೆಗಳ 1,020ಕ್ಕೂ ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದರು.

ಗದಗ ಜಿಲ್ಲೆ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್ ಎಂ. ಮಾತನಾಡಿ, ‘ಜಿಲ್ಲೆಯಲ್ಲಿ ಸಕಾಲದಡಿ ನ.26ರವರೆಗೆ 32,896 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 1,906 ಅರ್ಜಿಗಳು ತಿರಸ್ಕೃತಗೊಂಡಿದ್ದು, 1,301 ಅರ್ಜಿಗಳು ಬಾಕಿ ಉಳಿದಿವೆ. ಕೆಲವು ಇಲಾಖೆಯಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಸಕಾಲ ಯೋಜನೆ ಅಡಿ ಅರ್ಜಿಗಳು ಸ್ವೀಕಾರ ಆಗಿಲ್ಲ’ ಎಂದು ತಿಳಿಸಿದರು.

ADVERTISEMENT

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಎನ್‌ಐಸಿ ಅಧಿಕಾರಿ ರಾಮಕೃಷ್ಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.